ಐಶ್ವರ್ಯ ರೈ ವಿವಾಹದ ಬಳಿಕ ಚಿತ್ರಗಳ ಆಯ್ಕೆಗಳಲ್ಲಿ ಸಾಕಷ್ಟು ಚೂಸಿ ಆಗಿದ್ದಾರೆ. ಕೆಲವೊಂದು ವದಂತಿಗಳ ಪ್ರಕಾರ, ಆಕೆ ಎಸ್. ಶಂಕರ್ ನಿರ್ದೇಶನದ, ರಜನಿಕಾಂತ್ ಅಭಿನಯದ ರೋಬೋಟ್‌ನಿಂದ ಹೊರ ನಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಈ ಚಿತ್ರದ ಸುದೀರ್ಘ ಅವಧಿ. ಅಷ್ಟು ಧೀರ್ಘಕಾಲ ಆಕೆ ತನ್ನನ್ನು ನಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ನಕಾರ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶಂಕರ್‌ರ ನೋಟ ಇದೀಗ, ಬಾಲಿವುಡ್‌ನ ಹೊಸ ಬೇಡಿಕೆಯ ನಟಿ ದೀಪಿಕಾ ಪಡುಕೋಣೆಯತ್ತ ಹೊರಳಿದೆಯಂತೆ. ಈ ಮುನ್ನ ಐಶ್‌ಗೆ 4 ಕೋಟಿ ರೂ. ಮೊತ್ತದ ಹುಬ್ಬೇರಿಸುವ ಮೊತ್ತವನ್ನು ನೀಡುವ ಪ್ರಸ್ತಾವವನ್ನು ಇಡಲಾಗಿತ್ತು. ಐಶ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಳು. ಈ ವೇಳೆಗಾಗಲೇ ರಮೇಶ್ ಸಿಪ್ಪಿಯವರ ಹ್ಯಾಪಿ ಬರ್ತ್‌ಡೇ ಚಿತ್ರಗಳಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಿದ್ದು, ದಿನಾಂಕಗಳ ಹೊಂದಾಣಿಕೆಯಲ್ಲಿ ಗೊಂದಲ ಉಂಟಾಗುವಂತೆ ಮಾಡಿತು. ರಮೇಶ್ ಸಿಪ್ಪಿ ತಮ್ಮ ಚಿತ್ರದ ಚಿತ್ರೀಕರಣವನ್ನು ಮುಂದೂಡಿದುದರಿಂದ, ರೋಬೋಟ್ ಹಾದಿ ಸರಾಗವಾಗಿತ್ತು.
ಈಗ ಐಶ್ ಈ ಚಿತ್ರದಿಂದ ಹೊರಬಂದಿದ್ದು, ರೋಹನ್ ಸಿಪ್ಪಿಯವರನ್ನು ಹ್ಯಾಪಿ ಬರ್ತ್‌ಡೇ ಆರಂಭಿಸುವಂತೆ ಕೇಳಿಕೊಂಡಿದ್ದಾರೆ. ಚಿತ್ರ ನಿರ್ಮಾಪಕರೂ ಇದಕ್ಕೆ ಸಮ್ಮತಿಸಿರುವುದರಿಂದ ಈ ವರ್ಷದಲ್ಲಿ ಚಿತ್ರೀಕರಣ ಆರಂಭಗೊಳ್ಳುವ ನಿರೀಕ್ಷೆ ಇದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಐಶ್ವರ್ಯ ಮತ್ತು ಜಾನ್ ಅಬ್ರಾಹಂ ಇದ್ದಾರೆ.