ಶ್ರೀಯಾ ಶರಣ್ ಅವರ ಬಳಿಕ ಇದೀಗ ಬಾಲಿವುಡ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಸರದಿ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಅಸಹ್ಯ ಹುಟ್ಟಿಸುವಂತಹ ಉಡುಪು ಧರಿಸಿ ಸಂಪ್ರದಾಯಕ್ಕೆ ಕುಂದು ತಂದಿದ್ದಾರೆಂದು ಹಿಂದೂವಾದಿಗಳು ಮಲ್ಲಿಕಾ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಲ್ಲಿಕಾ ವಿರುದ್ದ ಹಿಂದೂ ಮಕ್ಕಳ್ ಕಚ್ಚಿ(ಎಚ್ಎಂಕೆ) ದೂರು ನೀಡಿದೆ. ಗುರುವಾರದಂದು ಕಮಲ್ ಹಾಸನ್ ನಟಿಸಿರುವ ನೂತನ ಚಿತ್ರ 'ದಶಾವತಾರಂ' ಚಿತ್ರದ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಹಾಲಿವುಡ್ ಚಿತ್ರ ನಟ ಜಾಕಿಜಾನ್ ಮತ್ತು ಬಾಲಿವುಡ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಲ್ಲಿಕಾ ತೊಟ್ಟ ಉಡುಗೆಯು ಹಿಂದೂಗಳ ಭಾವನೆಗಳಿಗೆ ಘಾಸಿಯುಂಟುಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಲ್ಲಿಕಾ ಶೆರಾವತ್ ತೆಳ್ಳನೆಯ ಮತ್ತು ಪಾರದರ್ಶಕ ಬಟ್ಟೆ ತೊಟ್ಟಿದ್ದರಲ್ಲದೆ, ಮುಖ್ಯ ಮಂತ್ರಿ ಕರುಣಾನಿಧಿ ಅವರ ಎದುರು ಕಾಲ ಮೇಲೆ ಕಾಲು ಹಾಕಿ ಗರ್ವದಿಂದ ಕುಳಿತಿದ್ದರು ಎಂದು ಎಚ್ಎಂಕೆ ಕಾರ್ಯಕರ್ತ ಕನಿರಾಜನ್ ಆರೋಪಿಸಿದ್ದಾರೆ.
ಮಲ್ಲಿಕಾ ಮತ್ತು ಶ್ರೀಯಾರನ್ನು ಹೊರತು ಪಡಿಸಿ ಈ ಹಿಂದೆ ಚಿತ್ರನಟಿಯರಾದ ಶಿಲ್ಪಾ ಶೆಟ್ಟಿ, ರಿಮಾ ಸೇನ್ ಮತ್ತು ಖುಷ್ಬು ಅವರ ಮೇಲೆ ಬೇರೆ ಬೇರೆ ಕಾರಣಕ್ಕಾಗಿ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗಿತ್ತು.
ಕೆಲ ತಿಂಗಳ ಹಿಂದೆ ಸುಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ'-ದಿ ಬಾಸ್ ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಚಿತ್ರದ ನಾಯಕಿ ಶ್ರೀಯಾ ಶರಣ್ ಅವರು ತುಂಡುಡುಗೆ ತೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಎಚ್ಎಂಕೆ ಕಾರ್ಯಕರ್ತರು ಅವರ ವಿರುದ್ದ ದೂರು ನೀಡಿದ್ದರು. ಶ್ರಿಯಾ ಕ್ಷಮೆ ಕೇಳಿದ ನಂತರವಷ್ಟೇ ಅವರ ವಿರುದ್ದದ ದೂರನ್ನು ಹಿಂದೆಗೆದುಕೊಂಡಿದ್ದರು.