ಬ್ರಿಟನ್‌ನಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭ ರಾಜೀವ್ ಗಾಂಧಿ ಜತೆಗಿನ ರೋಮ್ಯಾನ್ಸ್ ಕುರಿತ ವಿವರಗಳನ್ನೊಳಗೊಂಡ ಬಾಲಿವುಡ್ ಚಿತ್ರ ನಿರ್ಮಾಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ನೀಡಿದ್ದಾರೆ.
ಈ ವಿಷಯವನ್ನು ಪ್ರಸ್ತಾಪಿತ ಚಿತ್ರದ ನಿರ್ದೇಶಕ ಜಗಮೋಹನ್ ಮುಂದ್ರಾ ಖಚಿತಪಡಿಸಿದ್ದಾರೆ. 'ಆಕೆಯ ಕುರಿತು ಈ ವರೆಗೆ ನಾನು ಮಾಡಿರುವ ಸಂಶೋಧನೆಯ ವಿವರಗಳೆಲ್ಲವನ್ನೂ ನಾವು ಸೋನಿಯಾಜಿಗೆ ತಿಳಿಸಿದ್ದೇನೆ. ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ, ಆದರೆ ಮುಂಬರುವ ಮಹಾ ಚುನಾವಣೆಗಳ ವರೆಗೆ ತಡೆಹಿಡಿಯುವಂತೆಯೂ ಸೂಚಿಸಿದ್ದಾರೆ' ಎಂದು ಮುಂದ್ರಾ ಹೇಳಿದ್ದಾರೆ.
ಈ ಚಿತ್ರವು 2009ರಲ್ಲಿ ತೆರೆಕಾಣುವ ನಿರೀಕ್ಷೆ ಇದೆ. ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಮೈನೋ ಅವರು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮೊದಲು ಭೇಟಿಯಾಗಿದ್ದು ಹೇಗೆ ಎಂಬಿತ್ಯಾದಿ ವಿವರಗಳನ್ನೊಳಗೊಂಡಿರುವ ಚಿತ್ರದ ಪ್ರಸ್ತಾಪಕ್ಕೆ ಈ ಹಿಂದೆ ಕಾಂಗ್ರೆಸಿನ ಒಂದು ವರ್ಗವು ತೀವ್ರ ಪ್ರತಿಭಟನೆ ನಡೆಸಿತ್ತು.
ಈಗ ಎಲ್ಲ ವಿವಾದಗಳನ್ನೂ ಪರಿಹರಿಸಿಕೊಳ್ಳಲಾಗಿದೆ ಎಂದು ನಿಜ ಘಟನೆಯಾಧಾರಿತ 'ಶೂಟ್ ಅಟ್ ಸೈಟ್' ಚಿತ್ರದೊಂದಿಗೆ ಕ್ಯಾನೆ ಚಲನಚಿತ್ರೋತ್ಸವಕ್ಕೆ ಆಗಮಿಸಿರುವ ಮುಂದ್ರಾ ಹೇಳಿದರು.