ಸಾವರಿಯಾ ಖ್ಯಾತಿಯ ರಣಬೀರ್ ಕಪೂರ್ ಒಂದೇ ಚಿತ್ರದಲ್ಲಿ ನಟಿಸಿದ್ದಿರಬಹುದು. ಆದರೆ ಸಂಭಾವನೆ ವಿಚಾರದಲ್ಲಿ ಆತನೇನು ಕಿರಿಯನಲ್ಲ ಎಂಬ ವಿಚಾರವನ್ನು ಆತನ ಇತ್ತೀಚಿನ ಒಪ್ಪಂದವೊಂದು ತಿಳಿಸಿದೆ. ರಣಬೀರ್ ಟಿಐಪಿಎಸ್ನೊಂದಿಗೆ ಬೃಹತ್ ಏಳು ಕೋಟಿಯ ಒಪ್ಪಂದವೊಂದಕ್ಕೆ ಸಹಿ ಹಾಕಿ ಬಾಲಿವುಡ್ಡಿನ ಮಹತಾರೆಗಳಿಗೆ ಸಡ್ಡು ಹೊಡೆದಿದ್ದಾನೆ.
ಕಳೆದ ವರ್ಷ ತನ್ನ ಮೊದಲ ಚಿತ್ರ ಸಾವರಿಯಾದೊಂದಿಗೆ ಆನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ನೀಲಿ ಕಣ್ಣಿನ ಈ ಹುಡುಗ ಈಗ ಹಿಂದಿ ಚಿತ್ರರಂಗದಲ್ಲಿ ಗರಿಷ್ಟ ಸಂಭಾವನೆ ಪಡೆಯುವ ಶಾರುಕ್, ಹೃತಿಕ್ರ ಸಾಲಿಗೆ ಹೊಸ ಸೇರ್ಪಡೆಯಾಗಲು ಸರ್ವಸಿದ್ದನಾಗಿದ್ದಾನೆ. (ಸಂಭಾವನೆಯ ವಿಷಯದಲ್ಲಾದರೂ..)
ರಾಜ್ ಕುಮಾರ್ ಸಂತೋಷಿ ನಿರ್ದೆಶಿಸಲಿರುವ ಬಹು ಕೋಟಿ ಚಿತ್ರ 'ಅಜಬ್ ಪ್ರೇಮ್ ಕಿ ಗಝಬ್ ಕಹಾನಿ'ಗೆ ರಣ್ಬೀರ್ ಸಹಿ ಹಾಕಿರುವುದಾಗಿ ಮೂಲಗಳು ತಿಳಿಸಿವೆ.
ಇಟಲಿ ಮತ್ತು ಗೋವಾಗಳಲ್ಲಿನ ರಮ್ಯತಾಣಗಳಲ್ಲಿ ಮಾದಕ ಸುಂದರಿ ಕತ್ರಿನಾಳೊಂದಿಗೆ ರಣ್ಬೀರ್ನ ಪ್ರೇಮ ಪ್ರಸಂಗವನ್ನು ಚಿತ್ರದಲ್ಲಿ ನೋಡಬಹುದಂತೆ.
ನಿರ್ದೇಶಕ ಸಂತೋಷಿ, ತಮ್ಮ ಹೀರೊ ರಣ್ಬೀರ್ನನ್ನು ಹೊಗಳಿದಷ್ಟೂ ದಣಿಯದೆ "ರಣ್ಬೀರ್ನಲ್ಲಿರುವ ಬಹಳಷ್ಟು ಅಂಶಗಳು ಅವನ ಅಜ್ಜ ರಾಜ್ ಕಪೂರ್ರೊಂದಿಗೆ ಹೋಲುತ್ತದೆ. 'ದಾಮಿನಿ' ಚಿತ್ರದಲ್ಲಿ ಅವನ ತಂದೆಯೊಂದಿಗೆ ದುಡಿದದ್ದೆ. 'ಸಾವರಿಯಾ' ಚಿತ್ರದಲ್ಲಿ ಅವನನ್ನು ಕಂಡ ತಕ್ಷಣ ಅವನ ಜೊತೆ ಒಂದು ಚಿತ್ರ ಮಾಡಬೇಕೆಂದು ಬಯಸಿದ್ದೆ" ಎಂದು ತಿಳಿಸಿದರು.
ಏಳು ಕೋಟಿಯ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ನಿರ್ಮಾಪಕರು ಮತ್ತು ರಣಬೀರ್ಗೆ ಸೇರಿದ ವಿಷಯ ಎಂದಷ್ಟೆ ಹೇಳಿ ಜಾರಿಕೊಂಡರು.