ತಮ್ಮ ವಿಭಿನ್ನ ಚಿತ್ರಗಳಿಂದ ಗುರುತಿಸಲ್ಪಟ್ಟಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತಮಿಳುನಾಡಿನ ವಿಶೇಷ ಕಾರ್ಯದಳದ ಗುಂಡಿಗೆ ಬಲಿಯಾದ, ಕುಖ್ಯಾತ ದಂತ ಚೋರ ''ವೀರಪ್ಪನ್'' ಕುರಿತು ಚಿತ್ರ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದ್ದಾರೆ.
ವರ್ಮಾರ ಇತ್ತೀಚಿನ ಚಿತ್ರ 'ಸರ್ಕಾರ್ ರಾಜ್' ನಿರ್ದೇಶಕ ಪ್ರಶಾಂತ್ ಪಾಂಡೆಯವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಮತ್ತು ಕಥೆ ಈಗಾಗಲೇ ತಯಾರಾಗಿದೆ ಎಂದು ಕಾಡುಗಳ್ಳನ ಪತ್ನಿ ಮುತ್ತುಲಕ್ಷ್ಮಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
IFM
IFM
ಈ ಹಿಂದೆ ಚಿತ್ರವನ್ನು ಸ್ವತಃ ನಿರ್ಮಿಸುವ ಕಲ್ಪನೆ ಹೊಂದಿದ್ದ ಮುತ್ತುಲಕ್ಷ್ಮಿ , ಇತ್ತೀಚೆಗೆ ವರ್ಮಾರನ್ನು ಭೇಟಿಯಾಗಿ ಚಿತ್ರಕ್ಕೆ ಬೇಕಾದ ಅಮೂಲ್ಯ ಮಾಹಿತಿಗಳನ್ನು ಒದಗಿಸಿದ್ದಾಗಿ ತಿಳಿಸಿದ್ದಾರೆ.
ವೀರಪ್ಪನ್‌ನ ಮೊದಲ ದಿನಗಳಿಂದ ಪ್ರಾರಂಭಿಸಿ, 2004ರಲ್ಲಿ ಎಸ್‌ಟಿಎಫ್‌ನಿಂದ ಎನ್‌ಕೌಂಟರ್ ಆಗುವವರೆಗಿನ ಆತನ ಹೆಜ್ಜೆ ಗುರುತುಗಳನ್ನು ಚಿತ್ರ ಬಿಂಬಿಸಲಿದೆ ಎಂದು ಮುತ್ತುಲಕ್ಷ್ಮಿ ಹೇಳಿದ್ದಾರೆ.
ದಂತಕಳ್ಳನಾಗಿರುವುದರ ಜೊತೆಗೆ , ಪೊಲೀಸ್ ಸಿಬ್ಬಂದಿಗಳು ಸೇರಿದಂತೆ 100 ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯ ಪ್ರೇಮದ ಬಲೆಗೆ ಮುತ್ತುಲಕ್ಷ್ಮಿ ಹೇಗೆ ಬಿದ್ದಳು ಎಂಬ ಒಳನೋಟವನ್ನು ಸಹ ಚಿತ್ರ ಒದಗಿಸಲಿದೆ.
ಚಿತ್ರಕ್ಕಾಗಿ ಹೊಸ ಮುಖಗಳನ್ನು ಆರಿಸಿಕೊಳ್ಳಲಾಗುವುದು ಮತ್ತು ಇಷ್ಟರಲ್ಲೆ ಮಾಹಿತಿಗಳ ಬಿತ್ತರಿಕೆಗಾಗಿ ವರ್ಮಾ ಪತ್ರಿಕಾಗೋಷ್ಠಿ ಕರೆಯಲಿದ್ದಾರೆ ಎಂದು ಅವರು ತಿಳಿಸಿದರು.
ತನ್ನ ನಿಜ ಜೀವನದ ಪಾತ್ರವನ್ನು ಅಭಿನಯಿಸಲು ಒಲ್ಲದ ಮುತ್ತುಲಕ್ಷ್ಮಿ, ಚಿತ್ರದಲ್ಲಿ ತನ್ನ ಇಬ್ಬರು ಪುತ್ರಿಯರು ಕೂಡ ಅಭಿನಯ ಮಾಡುವುದನ್ನು ವಿರೋಧಿಸಿದ್ದಾರೆ.
ಒಬ್ಬ ಭಯಾನಕ ಹಂತಕನನ್ನು ಯಾವುದೇ ರೀತಿಯಾಗಿ ವೈಭವಿಕರಿಸುವುದನ್ನು ಸರಕಾರ ವಿರೋಧಿಸುತ್ತಿರುವುದರಿಂದ, ವೀರಪ್ಪನ್‌ನ ದೇಹವನ್ನು ಸಮಾಧಿ ಮಾಡಲಾದ ಮೂಲಕಾಡು ಪ್ರದೇಶದ ಸಮೀಪ ಸ್ಮಾರಕ ನಿರ್ಮಿಸುವ ಮುತ್ತುಲಕ್ಷ್ಮಿ ಬಯಕೆ, ಸಮಸ್ಯೆಯ ಸುಳಿಗೆ ಸಿಲುಕಿದೆ.