ಶಿಲ್ಪಾ ಶೆಟ್ಟಿ ಮತ್ತು ವಿವಾದಗಳು ಜತೆಜತೆಗೆ ಸಾಗಲಾರಂಭಿಸಿ ವರ್ಷಗಳೇ ಕಳೆದಿದೆ. ಏನೇ ವಿವಾದ ಎದುರಾದರೂ, ಅದನ್ನು ಅನುಕೂಲಕರವಾಗಿ ಪರಿವರ್ತಿಸುವಲ್ಲಿ ಜಾಣೆಯಾಗಿರುವ ಲಂಬೂ ಶಿಲ್ಪಾರನ್ನು ಇದೀಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.
IFM
ಕಲರ್ಸ್ ಚಾನೆಲ್‌ನಲ್ಲಿ 'ಬಿಗ್ ಬಾಸ್' ಕಾರ್ಯಕ್ರಮ ನಡೆಸಿಕೊಡುತ್ತಿರುವ ಶಿಲ್ಪಾ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅರ್‌ಪಿಐ)ದ ನಾಯಕ ರಾಮ್‌ದಾಸ್ ಅಟವಳೆ ಅವರ ಬೆಂಬಲಿಗರ ಕೋಪಕ್ಕೆ ತುತ್ತಾಗಿದ್ದು, ಅವರ ಕಾರು ಕಲ್ಲುಹೊಡೆಸಿಕೊಂಡಿರುವ ದುರ್ಘಟನೆ ಸಂಭವಿಸಿದೆ.
ಶುಕ್ರವಾರ ಶಿಲ್ಪಾ, ಧಾರಾವಾಹಿ ನಿರ್ಮಾಪಕರ ಸಾಲಿನಲ್ಲಿ ದೊಡ್ಡ ಹೆಸರಾಗಿರುವ ಏಕ್ತಾಕಪೂರ್ ಮತ್ತು ಅವರ ಸಹೋದರ ತುಶಾರ್ ಕಪೂರ್ ಅವರ ಸಂದರ್ಶನ ಮುಗಿಸಿ ಮರಳುವ ಹೊತ್ತಿಗೆ ಅಟವಳೆಯವರ ಬೆಂಬಲಿಗರು ಶಿಲ್ಪಾರ ಕಾರನ್ನು ಅಡ್ಡಕಟ್ಟಿ, ಕಾರಿಗೆ ಕಲ್ಲೆಸೆದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತನ್ನನ್ನು ಸಂಪರ್ಕಿಸಲಾಗಿತ್ತಾದರೂ, ಶಿಲ್ಪಾ ಕುತಂತ್ರದಿಂದ ಅದು ಕೈ ತಪ್ಪಿಹೋಯಿತು ಎಂಬುದು ಅಟವಳೆಯವರ ದೂರು. ಇದರಿಂದ ರೊಚ್ಚಿಗೆದ್ದಿರುವ ಅಟವಳೆ ಬೆಂಬಲಿಗರು ಶಿಲ್ಪಾ ವಿರುದ್ಧ ಹಲ್ಲುಮಸೆದಿದ್ದಾರೆ.
ಆದರೆ ಶಿಲ್ಪಾ ಹೇಳುವ ಪ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಆಯ್ಕೆಯಲ್ಲಿ ಅವರದ್ದೇನೂ ಪಾತ್ರವಿಲ್ಲವಂತೆ.
"ಅವರು ನನ್ನ ಕಾರಿಗೆ ಕಲ್ಲುತೂರುತ್ತಿದ್ದರು. ನನ್ನ ಬಡಕಾರು ಅವರಿಗೇನು ಮಾಡಿದೆ? ಇಲ್ಲವೇ, ನಾನೇನು ಮಾಡಿದ್ದೇನೆ ಅವರಿಗೆ? ಬಿಗ್ ಬಾಸ್ ಕಾರ್ಯಕ್ರಮದ ಅಭ್ಯರ್ಥಿಗಳ ನಾಮನಿರ್ದೇಶನದಲ್ಲಿ ನನ್ನ ಪಾತ್ರವೇನಿಲ್ಲ ಎಂಬುದಾಗಿ ಅಟವಳೆ ಮತ್ತು ಅವರ ಬೆಂಬಲಿಗರು ದಯವಿಟ್ಟು ಅರಿತುಕೊಳ್ಳುವಿರಾ?" ಇದು ದಾಳಿಯಿಂದ ಪಾರಾಗಿರುವ ಶೆಟ್ಟರ ಪ್ರಶ್ನೆ.
ಕಳೆದ ತಿಂಗಳ ಕಾರ್ಯಕ್ರಮ ಪ್ರಸಾರವಾದ ತಕ್ಷಣ, ಕಲರ್ಸ್ ವಾಹಿನಿಯ ಮುಂಬೈ ಕಚೇರಿಗೆ ಮುತ್ತಿಗೆ ಹಾಕಿರುವ ಅಟವಳೆ ಬೆಂಬಲಿಗರು, ಕಚೇರಿ ಹೊರಗಡೆ ರಸ್ತೆತಡೆಯುಂಟುಮಾಡಿ, ಶಿಲ್ಪಾರ ಪ್ರತಿಕೃತಿ ದಹಿಸಿದ್ದರು.