ಚಮ್ಕು ಚಿತ್ರದಲ್ಲಿ ಸೀದಾಸಾದ ಶಾಲಾಶಿಕ್ಷಕಿಯ ಪಾತ್ರವನ್ನು ಯಾವ ಮುಲಾಜೂ ಇಲ್ಲದೆ ಮಾಡಿರುವ ಪ್ರಿಯಾಂಕ ಚೋಪ್ರಾರನ್ನು ನಟ ಬಾಬ್ಬಿ ಡಿಯೋಲ್ ಹಾಡಿ ಹೊಗಳಿದ್ದಾರೆ.
ಚಮ್ಕು ಚಿತ್ರದಲ್ಲಿ ಬಾಬ್ಬಿಯದ್ದು ಮಾವೋವಾದಿಯ ಪಾತ್ರ. ಇಲ್ಲಿ ಪ್ರಿಯಾಂಕ ಓರ್ವ ಶಾಲಾಶಿಕ್ಷಕಿಯಾಗಿದ್ದು, ಯಾವುದೇ ಆಡಂಬರವಿಲ್ಲದ ಸರಳ ಪ್ಲೇನ್ ಶಿಫಾನ್ ಸಾರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾವೋವಾದಿ ನಕ್ಸಲ್‌ಗೆ ಶಿಕ್ಷಕಿಯಲ್ಲಿ ಪ್ರೇಮಾಂಕುರವಾಗುತ್ತದೆ.
ಪ್ರಿಯಾಂಕಳನ್ನು ಹೊರತು ಪಡಿಸಿದರೆ, ಚಮ್ಕುಗಾಗಿ ರಿತೇಶ್ ದೇಶ್‌ಮುಖ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಿತೇಶ್ ಅವರು ತಮ್ಮ ಎಡೆಬಿಡದ ಕಾರ್ಯಗಳ ನಡುವೆಯೂ, ಚಮ್ಕುವಿನಲ್ಲಿ ತನ್ನ ಸ್ನೇಹಿತನ ಪುಟ್ಟ ಪಾತ್ರವೊಂದನ್ನು ಮಾಡಲು ತಕ್ಷಣ ಒಪ್ಪಿದರು ಎಂಬುದು ಬಾಬ್ಬಿ ಮೆಚ್ಚುಗೆ.
ಚಮ್ಕು ಪಾತ್ರಕ್ಕಾಗಿ 10 ಕೆಜಿಯಷ್ಟು ಮೈ ಇಳಿಸಿಕೊಂಡಿರುವ ಬಾಬ್ಬಿ ಇದೀಗ ಎಡೆಬಿಡದೆ ಚಾಕಲೇಟುಗಳನ್ನು ತಿನ್ನಲಾರಂಭಿಸಿದ್ದಾರಂತೆ. ಇದು ಅವರ ಮನೆಯವರಿಗೆ ಚಿಂತೆಯುಂಟುಮಾಡಿದೆ.
ತನ್ನ ಕುಟುಂಬವು ಭೀಕರವಾಗಿ ಕೊಲೆಗೀಡಾದ ಬಳಿಕ ನಕ್ಸಲ್ ಆಗುವ ಹುಡುಗನೊಬ್ಬನ ಕತೆ ಚಮ್ಕು. ಇದರಲ್ಲಿ ಆಯ್ಕೆಗಳು, ಇಚ್ಚೆಗಳು, ನಂಬುಗೆಗಳು ಯಾವುದೂ ಇಲ್ಲದ ಯುವಕನೊಬ್ಬ ಮಹಿಳೆಯೊಬ್ಬಳನ್ನು ಭೇಟಿಯಾಗಿದ್ದು, ಆಕೆ ಈತನಿಗೆ ಸಂತಸ ಪಡುವ ಹಕ್ಕಿದೆ ಎಂಬುದನ್ನು ಮನವರಿಕೆ ಮಾಡುತ್ತಾಳಂತೆ. ಆ ಮಹಿಳೆ ಪ್ರಿಯಾಂಕ ಅಂತ ಮತ್ತೆ ಹೇಳುವ ಅವಶ್ಯಕತೆ ಇಲ್ಲ ತಾನೆ?