ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಆಜಾ ನಾಚ್ಲೆ ಮೂಲಕದ ಬಾಲಿವುಡ್‌ನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸೋತಿರಬಹುದು. ಆದರೆ, ಅವರು ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಮನರಂಜನೆ ಒದಗಿಸುವಲ್ಲಿ ಗೆದ್ದಿದ್ದಾರೆ.
ಪಾಕಿಸ್ತಾನದಿಂದ ಸೌದಿ ಅರೇಬಿಯಾ ಮತ್ತು ಯುಎಇಗೆ ಹಾರುವ ವಿಮಾನದಲ್ಲಿ ಮಾಧುರಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಕಳೆದ ತಿಂಗಳು ಆರಂಭಗೊಂಡಿದ್ದು, ಇದು ಅಕ್ಟೋಬರ್ ತನಕ ಮುಂದುವರಿಯಲಿದೆ.
ಮಾಧುರಿ ಮಾತ್ರವಲ್ಲದೆ, ಬಾಲಿವುಡ್‌ನ ಇನ್ನೋರ್ವ ಸುಂದರಿ, ರಾಣಿಮುಖರ್ಜಿಯ ಕಾರ್ಯಕ್ರಮವೂ ವಿಮಾನ ಪ್ರಯಾಣಿಕರನ್ನು ರಂಜಿಸಲಿದೆ.
ಇಷ್ಟು ಮಾತ್ರವಲ್ಲ. ಕೆಲವು ವಿಮಾನಗಳಲ್ಲಿ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭಗಳು ಮತ್ತು ಪ್ರುಮು ಭಾರತೀಯ ನಟರ ಸ್ಟೇಜ್ ಶೋ ಕಾರ್ಯಕ್ರಮಗಳೂ ಪ್ರಸಾರವಾಗುತ್ತಿದೆ. ಪಾಕಿಸ್ತಾನಿ ಸೆಲೆಬ್ರಿಟಿಗಳ ಆಯ್ಕೆಯ ಜನಪ್ರಿಯ ಬಾಲಿವುಡ್ ಹಾಡುಗಳೂ ತೇಲಿಬರಲಿವೆಯಂತೆ.
ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಸೇರಿದಂತೆ ಹೆಚ್ಚಿನ ಪಾಕಿಸ್ತಾನಿಯರು ಬಾಲಿವುಡ್ ಸಿನಿಮಾ ಪ್ರೇಮಿಗಳು. ಗಿಲಾನಿಗೆ ಐಶ್ವರ್ಯಾ ರೈ ಸಿನಿಮಾಗಳ ಹುಚ್ಚಿದೆ. ಮೇ ತಿಂಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ, ಒಂದು ಪೆಟ್ಟಿಗೆ ತುಂಬ ರೈ ಸಿನಿಮಾಗಳ ಡಿವಿಡಿಯನ್ನು ಉಡುಗೊರೆಯನ್ನಾಗಿ ನೀಡಿದ್ದರು.