ಬಾಲಿವುಡ್‌ನ ಮಹಾನ್ ನಟರಾದ ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ ಅವರುಗಳು ಮುಂಬೈ ಲೋಕಲ್ ಟ್ರೇನಲ್ಲಿ ಪ್ರಯಾಣಿಸಿದರಂತೆ. ಭಯೋತ್ಪಾದನೆ ಮತ್ತು ರೈಲು ಸ್ಫೋಟಗಳ ಕಥೆಯನ್ನು ಹೊಂದಿರುವ 'ಎ ವೆನಸ್ಡೇ' ಸಿನಿಮಾದಲ್ಲಿ ಈ ಇಬ್ಬರು ನಟಿಸಿದ್ದು, ಸಿನಿಮಾದ ಪ್ರೊಮೋಷನ್‌ಗಾಗಿ ಈ ತಂತ್ರಕ್ಕಿಳಿದಿದ್ದಾರೆ.
ಈ ಹಿಂದೆ ಶಾಹಿದ್ ಕಪೂರ್ ತನ್ನ ಸಿನಿಮಾ 'ಜಬ್ ವೀ ಮೆಟ್' ಸಿನಿಮಾ ಪ್ರಚಾರಕ್ಕಾಗಿ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಿದ್ದರು. ಇದು ಗಲ್ಲಾಪೆಟ್ಟಿಗೆಯನ್ನು ಗೆಲ್ಲಿಸಿದ್ದು, ಇದುವರೆಗೆ ಕರಿನಾ ಕಪೂರ್ ಅವರ ಇದುವರೆಗಿನ ಚಿತ್ರಗಳಲ್ಲೇ ಉತ್ತಮ ಚಿತ್ರವೆಂದು ಪರಿಗಣಿತವಾಗಿದೆ.
ನಾಸಿರ್ ಮತ್ತು ಅನುಪಮ್ ಅವರು ನಗರದ ಹೊಟೇಲೊಂದರಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಅನುಪಮ್ ಖೇರ್ ಅವರು ನಿಗದಿತ ಸಮಯಕ್ಕೆ ಸರಿಯಾಗಿ ಬಂದರೂ, ಟ್ರಾಫಿಕ್ ಸಮಸ್ಯೆಯಿಂದಾಗಿ ನಾಸಿರುದ್ದೀನ್ ಶಾ ಬರುವಾಗ ತಡವಾಯಿತಂತೆ. ಆದರೆ ಟೈಮ್ ವೇಸ್ಟ್ ಮಾಡದ ಅನುಪಮ್, ಸರ್ಕಾರ್ ರೆಸ್ಟೋರೆಂಟ್‌ನಲ್ಲಿ ಪಾವ್ ಬಾಜಿ ತಿಂದು ಅಲ್ಲಿದ್ದವರನ್ನೆಲ್ಲ ಅಚ್ಚರಿಯಲ್ಲಿ ಕೆಡವಿದರು. ನಾಸಿರ್ ಬಂದ ತಕ್ಷಣ ಚರ್ಚ್‌ಗೇಟ್ ರೈಲ್ವೇ ಸ್ಟೇಶನ್‌ಗೆ ತೆರಳಿ ಬೊರಿವಿಲಿ ರೈಲು ಹತ್ತಿ ಫರ್ಸ್ಟ್ ಕ್ಲಾಸಿನಲ್ಲಿ ಕುಳಿತರು.
ನಾಸಿರುದ್ದೀನ್ ಶಾ ಅವರು ಬಾಂದ್ರಾದಿಂದ ಮುಂಬೈ ಸೆಂಟ್ರಲ್ ತನಕ ಟಿಕೆಟ್ ಇಲ್ಲದೆ ಟಿಕೆಟ್ ಇಲ್ಲದೆ ಆರು ತಿಂಗಳ ಕಾಲ ಪ್ರಯಾಣಿಸಿದ ತನ್ನ ಮರೆಯಲಾಗದ ಹಳೆಯ ಅನುಭವವನ್ನು ಹೇಳಿಕೊಂಡರು. ಇದಕ್ಕೆ ಈಗ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ರೈಲ್ವೇ ಇಲಾಖೆಯೂ ಹೇಳಿತು.
ಅನುಭವ ಕಥನದಲ್ಲಿ ಅನುಪಮ್ ಖೇರ್ ಸಹ ತನ್ನ ಅನುಭವ ಹಂಚಿಕೊಳ್ಳುವುದರಲ್ಲಿ ಹಿಂದೆ ಬೀಳಲಿಲ್ಲ. ಒಮ್ಮೆ ಅವರು ರೈಲ್ವೇ ಹಳಿಗಳನ್ನು ದಾಟಿ ಇನ್ನೊಂದು ಪ್ಲಾಟ್‌ಫಾರಂಗೆ ಹೋಗುತ್ತಿದ್ದರು. ಅಷ್ಟರಲ್ಲಿ ಅವರಿಗೆ ಪ್ಲಾಟ್‌ಫಾರಂ ಏರಲು ವ್ಯಕ್ತಿಯೊಬ್ಬ ಸಹಾಯ ಹಸ್ತ ಚಾಚಿದ್ದರು. ಆದರೆ ಅವರು ಪ್ಲಾಟ್‌ಫಾರಂ ಏರಿದರೂ ಹಸ್ತವನ್ನು ಬಿಡಲೇ ಇಲ್ಲವಂತೆ. ಬಳಿಕ ಹಿಡಿದ ಕೈಯನ್ನು ಬಿಟ್ಟದ್ದು ಪೊಲೀಸ್ ಠಾಣೆಯಲ್ಲಿ! ಕೈ ಕೊಟ್ಟವರು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಅವರಿಗೆ ಆಗಲೇ ತಿಳಿದದ್ದಂತೆ!
ಬಳಿಕ ವಿಲ್ಲೆ ಪಾರ್ಲೆ ನಿಲ್ದಾಣದಲ್ಲಿ ಈ ಘನಾನುಘಟಿಗಳು ಇಳಿದರು. ಅಲ್ಲಿ ಪ್ರಯಾಣಿಕರು ಪರಸ್ಪರ ತಳ್ಳಾಟ ನಡೆಸದಂತೆ ಇವರು ವಿನಂತಿಸುತ್ತಿದ್ದುದು ಕಂಡು ಬಂತೆಂದು ವರದಿ ಹೇಳಿದೆ.