ವೈವಿಧ್ಯಮಯ ವೇದಿಕೆಗಳ ಮೂಲಕ ಸಮಕಾಲೀನ ಚಿತ್ರಗಳ ರಸದೌತಣ ಉಣಬಡಿಸಲು ಪ್ರಯತ್ನಿಸುತ್ತಿರುವ ಎನ್ಡಿಟಿವಿ ಲೂಮಿಯೇರ್, ಗೃಹ ವೀಡಿಯೋ ವಿಭಾಗದ ಪ್ರಮುಖ ಸಂಸ್ಥೆ ಎಕ್ಸೆಲ್ ಹೋಮ್ ವೀಡಿಯೋಸ್ ಸಹಯೋಗದೊಂದಿಗೆ 10 ಡಿವಿಡಿ ಚಿತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರು ಡಿವಿಡಿಗಳನ್ನು ಬಿಡುಗಡೆಗೊಳಿಸಿದರು. ಎನ್ಡಿಟಿವಿ ಲೂಮಿಯೇರ್ ನಿರ್ದೇಶಕ, ಬೇಜಾ ಫ್ರೈ ಮತ್ತು ಮಿಕ್ಸೆಡ್ ಡಬಲ್ಸ್ ಮುಂತಾದ ಚಿತ್ರಗಳ ಖ್ಯಾತಿಯ ಸುನಿಲ್ ದೋಶಿ, ಮತ್ತೊಬ್ಬ ನಿರ್ದೇಶಕ ಹಾಗೂ ಅಡ್ಲ್ಯಾಬ್ಸ್ ಸಂಸ್ಥಾಪಕ ಮನಮೋಹನ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದರು.
ಪ್ರಖ್ಯಾತ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳಾದ ದಿ ಆರ್ಫನೇಜ್, ಕ್ಲೈಮೇಟ್ಸ್, ಅಂಡರ್ ದಿ ಬಾಂಬ್ಸ್, ಕ್ರಾಸಿಂಗ್ ದಿ ಬ್ರಿಡ್ಜ್, ಹೆಡಾನ್, ಗುಡ್ಬೈ, ಚಿಲ್ಡ್ರನ್, ದಿ ಲವರ್ಸ್, ಬ್ರೆಥ್, ಯೆಲ್ಲಾ ಮತ್ತು ಹಾಫ್ ಮೂನ್ಗಳ ಡಿವಿಡಿಗಳನ್ನು ಬಿಡುಗಡೆಗೊಳಿಸಲಾಯಿತು.
ವಿಶ್ವದ ಪ್ರಮುಖ ನಟರು ನಟಿಸಿರುವ ಈ ಡಿವಿಡಿಯ ಬೆಲೆ ತಲಾ 499 ರೂ. ಆಗಿದ್ದು, ಈ ವಿಶ್ವದರ್ಜೆಯ ಚಲನಚಿತ್ರಗಳು ದೇಶದ ಚಿತ್ರರಸಿಕರ ಮನ ತಣಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.