ಇತ್ತೀಚಿಗೆ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಯಾ ಬಚ್ಚನ್ ಅವರು 'ಮರಾಠಿ ವಿರೋಧಿ' ಹೇಳಿಕೆಗಳನ್ನು ನೀಡಿದ್ದಾರೆಂಬ ಬಗೆಗೆ ಹುಟ್ಟಿಕೊಂಡಿದ್ದ ವಿವಾದದ ಹಿನ್ನೆಲೆಯಲ್ಲಿ, ಜಯ ಬಚ್ಚನ್ ಅವರು ತಾವು ಮಹಾರಾಷ್ಟ್ರದ ಜನತೆಯನ್ನು ನೋಯಿಸಲು ಉದ್ದೇಶಿಸಿರಲಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಮಹಾರಾಷ್ಟ್ರದ ಜನರನ್ನು ನೋಯಿಸಿದ್ದರೆ ಆ ಬಗ್ಗೆ ಕ್ಷಮೆ ಯಾಚಿಸುವುದಾಗಿ ಜಯಾ ಬಚ್ಚನ್ ಹೇಳಿದ್ದಾರೆ. ತಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ತಾವು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದರೂ ಇಂಗ್ಲೀಷ್‌ನಲ್ಲಿ ಮಾತನಾಡಲು ಬಯಸುವ ಕೆಲವು ನಟರನ್ನು ಸೂಚಿಸುತ್ತಾ ಆ ಹೇಳಿಕೆ ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ಕೆಲವು ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಜಯಾ ಬಚ್ಚನ್ ಅವರು ತಾವು ಎಂದಿಗೂ ಸಹ ಮುಂಬಯಿ ಅಥವಾ ಮುಂಬಯಿಯ ಜನತೆಯನ್ನು ಅವಮಾನಿಸಲು ಬಯಸುವುದಿಲ್ಲ, ಏಕೆಂದರೆ ಈ ನಗರವು 'ತಮಗೆ ಎಲ್ಲವನ್ನೂ ನೀಡಿದೆ' ಎಂದು ಹೇಳಿದ್ದಾಗಿ ವರದಿಯಾಗಿದೆ. ಏತನ್ಮಧ್ಯೆ, ಎಂಎನ್ಎಸ್ ಜಯಾರ ಕ್ಷಮೆಯಾಚನೆಯನ್ನು ತಿರಸ್ಕರಿಸಿದೆ ಮತ್ತು ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.
ಈ ಮೊದಲು ಎಂಎನ್ಎಸ್ ಜಯಾ ಬಚ್ಚನ್ ಅವರು ಯಾವುದೇ ಷರತ್ತುಗಳಿಲ್ಲದೆ ಕ್ಷಮೆಕೋರುವವರೆಗೆ ಹೊಸದಾಗಿ ಬಿಡುಗಡೆಯಾಗಿರುವ ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರು ನಟಿಸಿರುವ ಎಲ್ಲಾ ಚಿತ್ರಗಳಿಗೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿತ್ತು.
ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಜಯಾ ಬಚ್ಚನ್ ತಾವು ಉತ್ತರ ಪ್ರದೇಶಕ್ಕೆ ಸೇರಿರುವುದರಿಂದ ತಾವು ಹಿಂದಿಯಲ್ಲೇ ಮಾತನಾಡುವುದಾಗಿ ಮತ್ತು ಮಹಾರಾಷ್ಟ್ರದ ಜನತೆ ಇದಕ್ಕಾಗಿ ತಮ್ಮನ್ನು ಕ್ಷಮಿಸಬೇಕೆಂದು ಹೇಳಿದ್ದರು. ಜಯಾ ಬಚ್ಚನ್‌ರ ಈ ಹೇಳಿಕೆಯು ವಿವಾದ ಹುಟ್ಟುಹಾಕಲು ಎಂಎನ್ಎಸ್ ಸದಸ್ಯರಿಗೆ ಹೊಸ ಆಹಾರ ಒದಗಿಸಿತು.
ಇನ್ನೊಂದು ಘಟನೆಯಲ್ಲಿ ಸೋಮವಾರ ರಾತ್ರಿ ಜನರ ಗುಂಪೊಂದು ಜಾರ್ಗನ್‌ನಲ್ಲಿರುವ ಮೂವಿಟೈಮ್ ಚಿತ್ರಮಂದಿರದಲ್ಲಿ ನಟ ಅಮಿತಾಬ್ ಬಚ್ಚನ್ ಅವರ ಚಿತ್ರದ ಪೋಸ್ಟರ್‌ಗೆ ಕಪ್ಪು ಪೈಂಟ್ ಹಚ್ಚಿದೆ, ಇವರು ಯಾರು ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಜಾರ್ಗನ್ ಪೋಲಿಸರು ಪೋಸ್ಟರ್ ಅನ್ನು ತೆಗೆದು ಹಾಕಿದರು.