'ಆಪ್ ಕಾ ಸುರೂರ್' ಚಿತ್ರದ ನಂತರ ಹಿಮೇಶ್ ರೇಶಮಿಯಾ ಕೇವಲ ಒಂದು ಚಿತ್ರಕ್ಕಷ್ಟೇ ಸಹಿ ಹಾಕಿದ್ದರು-'ಕರ್ಜ್'. ಆದರೆ 'ಕರ್ಜ್' ಚಿತ್ರ ಮಾಡುತ್ತಿರಬೇಕಾದರೆ, ಮ್ಯೂಸಿಶಿಯನ್, ಗಾಯಕ ಮತ್ತು ಈಗ ನಟರಾಗಿರುವ ಹಿಮೇಶ್ ನಾಲ್ಕು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ನಾಲ್ಕೂ ಚಿತ್ರಗಳು ಮುಂದಿನ ವರ್ಷ-2009ರಲ್ಲಿ ಬಿಡುಗಡೆಯಾಗಲಿವೆ. ಹಿಮೇಶ್ ಅತ್ಯಂತ ಬ್ಯೂಸಿ ನಟರಾಗಿ ಬಿಟ್ಟಿದ್ದಾರೆ!.
ಫೆಬ್ರವರಿಯಲ್ಲಿ 'ಕಜರಾರೆ' ಚಿತ್ರದ ಬಿಡುಗಡೆಯೊಂದಿಗೆ 2009ರಲ್ಲಿ ಹಿಮೇಶ್ ಚಿತ್ರಗಳ ಜಾತ್ರೆ ಆರಂಭಗೊಳ್ಳಲಿದೆ. 'ಕಜರಾರೆ' ನಂತರ 'ಮುಢ್ ಮುಢ್ ಕೆ ನಾ ದೇಖ್ '(ಅಷ್ಟವಿನಾಯಕ ಪ್ರೊಡಕ್ಷನ್, ಆದಿತ್ಯ ಸಿಂಗ್ ನಿರ್ದೇಶನ), 'ಹೇ ಗುಜ್ಜು' (ಸ್ಟುಡಿಯೋ 18, ಸತೀಶ್ ಕೌಶಿಕ್ ನಿರ್ದೇಶನ) ಮತ್ತು 'ಎ ನ್ಯೂ ಲವ್ ಇಸ್ಟೋರಿ' (ಭೂಷಣ್ ಕುಮಾರ್ ನಿರ್ಮಾಣ, ಮ್ಯಾಥ್ಯೂ ಮತನ್ ನಿರ್ದೇಶನ) ಚಿತ್ರಗಳು ಸಾಲುಗಟ್ಟಿವೆ.
ಆದರೆ ಪ್ರಸ್ತುತ ಹಿಮೇಶ್ 'ಕರ್ಜ್' ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 17 ತೀರ್ಪಿನ ದಿನ. "ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ನಾನು ಕಾತುರನಾಗಿದ್ದೇನೆ. ಒಬ್ಬ ನಟನಾಗಿ ನನ್ನಿಂದ ಸಾಧ್ಯವಿದ್ದ ಅತ್ಯುತ್ತಮ ಪ್ರದರ್ಶವನ್ನು ನಾನು ನೀಡಿದ್ದೇನೆ. ಆದರೆ ಕೊನೆಯ ನಿರ್ಣಯ ಸೇರಿದ್ದು ಪ್ರೇಕ್ಷಕನಿಗೆ" ಎಂಬುದು ಹಿಮೇಶ್ ನುಡಿ.