ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಜತೆ ದೀಪಾವಳಿಯನ್ನು ಭರ್ಜರಿಯಾಗಿಯೇ ಆಚರಿಸಲು ನಿರ್ಧರಿಸಿದಂತಿದೆ. ಅದಕ್ಕಾಗಿ ತಮ್ಮ ಜುಹುವಿನ ಮನೆಯಲ್ಲಿ ಇದೇ 28ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬಾಲಿವುಡ್ನ ಅತಿರಥ ಮಹಾರಥರನ್ನು ಆಹ್ವಾನಿಸಿದ್ದಾರೆ.
ಕಳೆದ ವಾರ ನಡೆದ ಶಬೀನಾ ಖಾನ್ ಪಾರ್ಟಿಯಲ್ಲಿ ಅಕ್ಷಯ್ ಮತ್ತು ಟ್ವಿಂಕಲ್ ದೀಪಾವಳಿ ಪಾರ್ಟಿಗಾಗಿ ಹಲವರನ್ನು ಅಲ್ಲೇ ಆಹ್ವಾನಿಸಿದರಂತೆ. ಇದುವರೆಗೆ ಈ ಸ್ಟಾರ್ ದಂಪತಿಗಳು ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಯಾವೊಂದು ದೊಡ್ಡ ಪಾರ್ಟಿಯನ್ನೂ ಆಯೋಜಿಸಿರಲಿಲ್ಲವೆಂಬುದು ಕೊರಗಾಗಿಯೇ ಉಳಿದಿತ್ತು. ಅಕ್ಷಯ್ ನಟನಾಗಿ ಈ ವರ್ಷ ಭಾರೀ ಯಶಸ್ಸು ಕಂಡಿರುವುದರಿಂದ ಇದೇ ಸೂಕ್ತ ಸಮಯ. ರಾತ್ರಿ ಬಿಡುವು ಮಾಡಿಕೊಂಡು ಸಂಭ್ರಮದಲ್ಲಿ ಪಾಲ್ಗೊಳ್ಳಿ ಎನ್ನುತ್ತಾ ಟ್ವಿಂಕಲ್ ಸ್ವತ: ಎಲ್ಲರನ್ನೂ ಕರೆಯುತ್ತಿದ್ದಾರೆ. ಅಕ್ಷಯ್ ಪ್ರಸಕ್ತ ಕೇಪ್ಟೌನ್ಲ್ಲಿದ್ದಾರೆ. ನಾಗೇಶ್ ಕುಕನೂರ್ರ 'ಎಯಿಟ್ ಬೈ ಟೆನ್' ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಪತ್ನಿ ಪ್ರಧಾನ ಪಾತ್ರವಹಿಸಿ ನಡೆಸುತ್ತಿರುವ ದೀಪಾವಳಿ ಪಾರ್ಟಿಗಾಗಿ ಒಂದು ದಿನ ಬಿಡುವು ಮಾಡಿಕೊಂಡು ಬರಲಿದ್ದಾರೆ.
ವಿಪುಲ್ ಶಾಹ್, ಕರೀನಾ ಕಪೂರ್, ಸೈಫ್ ಆಲಿ ಖಾನ್, ವಿವೇಕ್ ಒಬೇರಾಯ್, ಸಾಜಿದ್ ನಾದಿಯಾವಾಲಾ, ಸಾಜಿದ್ ಖಾನ್, ರಾಣಿ ಮುಖರ್ಜಿ, ಕತ್ರಿನಾ ಕೈಫ್ ಅಲ್ಲದೇ ಖಾನ್ಗಳು ಮತ್ತು ಬಚ್ಚನ್ಗಳನ್ನೂ ಆಹ್ವಾನಿಸಲಾಗಿದೆಯಂತೆ. ಯಶ್ ಛೋಪ್ರಾ, ಪಮೇಲಾ ಛೋಪ್ರಾ, ಆದಿತ್ಯಾ ಛೋಪ್ರಾ, ಕರಣ್ ಜೋಹರ್, ಫರ್ಹಾ ಖಾನ್, ಶಿರಿಸ್ ಕುಂದರ್, ಡೇವಿಡ್ ಧವನ್, ಅನಿಲ್ ಕಪೂರ್ಗಳು ಕೂಡಾ ಆ ಪಟ್ಟಿಯಲ್ಲಿದ್ದಾರೆ.
ಬಚ್ಚನ್ಗಳು ಕೂಡಾ ಪಾರ್ಟಿಗೆ ಬರುವ ನಿರೀಕ್ಷೆಯಿದೆ. ಟ್ವಿಂಕಲ್ ಸಹೋದರಿ ರಿಂಕಿ ಮತ್ತು ಶ್ವೇತಾ ನಂದಾ ಆತ್ಮೀಯರಾಗಿದ್ದ ಕಾರಣ ಮತ್ತು ಅಮಿತಾಭ್ಗೆ ಅಕ್ಷಯ್ ಮೇಲೆ ಅತೀವ ಪ್ರೀತಿಯಿರುವ ಕಾರಣ ಬಚ್ಚನ್ ಕುಟುಂಬ ಹಾಜರಿರಬಹುದು. ಅಭಿಷೇಕ್-ಐಶ್ವರ್ಯಾ ಕೂಡಾ ಬರಬಹುದು. ಶಾರೂಖ್-ಗೌರಿ ಕುಟುಂಬ ಸಮೇತ ದೆಹಲಿಗೆ ಹೋಗಲಿರುವ ಕಾರಣ ಪಾರ್ಟಿಗೆ ಬರುತ್ತಿಲ್ಲ.
ಸೊಹೈಲ್-ಸೀಮಾ, ಮಲೈಕಾ-ಅರ್ಬಾಜ್ ಮತ್ತು ಅಮೃತಾ ಅರೋರಾರನ್ನೂ ಕರೆಯಲಾಗಿದೆ. ಸಲ್ಮಾನ್ 25ರಂದು ಮುಂಬೈಗೆ ಬರಲಿದ್ದಾರೆ. ಸಲ್ಮಾನ್ ಮತ್ತು ಅಕ್ಷಯ್ ಒಟ್ಟಿಗೆ ನಟಿಸಿದ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿಕೊಂಡ ಕಾರಣದಿಂದಲೋ ಏನೋ ಅವರು ಸಹ ಪಾರ್ಟಿ ಮಿಸ್ ಮಾಡಲಿಕ್ಕಿಲ್ಲ ಅನ್ನುತ್ತವೆ ಆಪ್ತಮೂಲಗಳು.