ತಮಿಳಿನ ಸೂಪರ್ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ನಿಮಗೆ ಗೊತ್ತು. ಗ್ಲ್ಯಾಮರ್ ಜಗತ್ತಿಗೆ ಅಂಬೆಗಾಲಿಡುತ್ತಿರುವ ಆಕೆಯ ಸುತ್ತ ಗಾಸಿಪ್ ಹರಿದಾಡಲು ಶುರುವಾಗಿದೆ. ಮೂಲಗಳು ಹೇಳುವ ಪ್ರಕಾರ ಆಕೆಗೊಂದು ಅಫೇರ್ ಇರುವುದು ಹೌದಂತೆ.
ಬಾಲಿವುಡ್ನ ಸೋಹಂ ಶಾಹ್ ನಿರ್ದೇಶನದ 'ಲಕ್' ಚಿತ್ರದ ಮೂಲಕ ಬಿಗ್ ಎಂಟ್ರಿ ಕೊಟ್ಟು ಲಕ್ ಪರೀಕ್ಷೆಗಿಳಿದಿರುವ ಶ್ರುತಿಗೆ ಜೆರ್ರಿ ಎಂಬಾತನ ಜತೆ ಲವ್ವೋ ಲವ್ವು. ಆತ ಒಂದು ಮ್ಯೂಸಿಕಲ್ ಟ್ರೂಪ್ ಕೂಡಾ ಹೊಂದಿದ್ದು ಅದರಲ್ಲಿ ಡ್ರಮ್ಮರ್ ಆಗಿದ್ದಾನಂತೆ. ಶೂಟಿಂಗ್ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸುವಷ್ಟು ಅವರಿಬ್ಬರೂ ಹತ್ತಿರವಾಗಿದ್ದಾರೆಂದರೆ ನೀವೇ ಊಹಿಸಿ ಹೇಗಿರಬಹುದೆಂದು! ಈ ಜೋಡಿ ಅಕ್ಷರಶ: ಬೇರ್ಪಡಿಸಲಾಗದಷ್ಟು ಪ್ರೀತಿಸುತ್ತಿದೆ ಎನ್ನುವುದು ಅವರನ್ನು ಶೂಟಿಂಗ್ ಲೋಕೇಶನ್ನಲ್ಲಿ ನೋಡಿದ ಕೆಲವರ ಅಂಬೋಣ.
ಇತ್ತೀಚೆಗೆ ಶ್ರುತಿ ದಕ್ಷಿಣ ಆಫ್ರಿಕಾಕ್ಕೆ ಚಿತ್ರೀಕರಣಕ್ಕೆಂದು ತೆರಳಿದ್ದಾಗ ಇದೇ ಜೆರ್ರಿ ಕೂಡಾ ಅಲ್ಲಿಗೆ ಹೋಗಿದ್ದರಂತೆ. ಚಿತ್ರದ ನಿರ್ಮಾಪಕ ಶ್ರುತಿಯ ಪ್ರಿಯಕರ ಜೆರ್ರಿಯ ಖರ್ಚುಗಳನ್ನೂ ಭರಿಸಬೇಕಾಯ್ತಂತೆ! ಮುಂದಿನ ಚಿತ್ರಗಳಿಗೆ ನಿರ್ಮಾಪಕರು ಆಕೆಯನ್ನು ಸೇರಿಸಿಕೊಳ್ಳುವಾಗ ಇದನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗಬಹುದು !