ಬಾಲಿವುಡ್‌ನ ಸೆನ್ಸೇಷನಲ್ ದೀಪಿಕಾ ಹಾಟ್ ಸ್ಟಾರ್ ಹೃತಿಕ್ ಜತೆ ರೊಮ್ಯಾನ್ಸ್ ಮಾಡದಿದ್ದಾಳೆ. ಇದೇನಪ್ಪಾ ಮೊನ್ನೆ ಮೊನ್ನೆವರೆಗೆ ಯುವರಾಜ್, ಧೋನಿ ಜತೆ ಥಳಕು ಹಾಕಿಕೊಂಡಿದ್ದವಳು ನಂತರ ಹಳೆಗೆಳೆಯ ರಣ್‌ಬೀರ್ ಜತೆ ಮತ್ತೆ ಕೈ ಹೊಸೆದುಕೊಂಡು ಆರಾಮವಾಗಿದ್ದರಳಲ್ಲ. ಮುನಿಸಿಕೊಂಡು ಮತ್ತೆ ತೆಕ್ಕೆ ಬದಲಿಸಿದಳಾ! ಹೃತಿಕ್ ಮನ-ಮನೆಯರಸಿ ಸುಜಾನ್ನೆ ಕಣ್ಣಲ್ಲಿ ನೀರು ತರಿಸುವ ಸಂಚು ನಡೆದಿದೆಯಾ?
ಉತ್ತರ ಸಿಂಪಲ್ - ಹಾಗೇನಿಲ್ಲ. ಈ ಸಿನಿಮಾದವರು ನಿಂತರೂ ಸುದ್ದಿ, ಕುಂತರೂ ಸುದ್ದಿಯೇ ಆಗುವಾಗ ಅಂತದ್ದು ನಡೆದರೂ ಅತಿಶಯವಲ್ಲ ಬಿಡಿ.
ಈಗ ವಿಷಯಕ್ಕೆ ಬರೋಣ. ಸಂಜಯ್‌ಲೀಲಾ ಭನ್ಸಾಲಿಯ ಹೊಸ ಚಿತ್ರವೊಂದಕ್ಕೆ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ನಾಯಕ-ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಮೂಲಗಳ ಪ್ರಕಾರ ಇವರಿಬ್ಬರ ಆಯ್ಕೆ ಖಚಿತ, ಉಳಿದ ತಾರಾಗಣ ವಿವರ ತಕ್ಷಣಕ್ಕೆ ಅಲಭ್ಯ. ರಣ್‌ಬೀರ್ ಕಪೂರ್ ಕೂಡಾ ಈ ಚಿತ್ರದಲ್ಲಿದ್ದಾನೆ ಎಂಬ ಸುದ್ದಿಗಳೂ ಇವೆ.
ಇದರ ಬಗ್ಗೆ ಹೃತಿಕ್, ದೀಪಿಕಾ ತುಟಿ ಬಿಚ್ಚುತ್ತಿಲ್ಲ. ಹೃತಿಕ್ ಹೋಮ್ ಪ್ರೊಡಕ್ಷನ್ ಚಿತ್ರ 'ಕೈಟ್'ನಲ್ಲಿ ಬ್ಯುಸಿ. ದೀಪಿಕಾ ಸೈಫ್ ಜತೆಗಿನ ಹೆಸರಿಡದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ.
ಏನೇ ಆಗಲಿ, ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರಂತೂ ಕಾಯುತ್ತಿರುತ್ತಾರೆ. ಜೊತೆಗೆ ಖಾಮೋಶಿ, ಹಮ್ ದಿಲ್ ದೇ ಚುಕೇ ಸನಮ್, ದೇವದಾಸ್, ಬ್ಲ್ಯಾಕ್, ಸಾವರಿಯಾ ಎಂಬ ಕ್ಲಾಸ್ ಚಿತ್ರಗಳ ಭನ್ಸಾಲಿ ನಿರ್ದೇಶಕರೆಂದ ಮೇಲೆ ಖಂಡಿತಾ ಹೊಸತರ ನಿರೀಕ್ಷೆ ಇದ್ದೇ ಇರುತ್ತದೆ.