ಅವಳು ಕರ್ನಾಟಕ ಸಂಜಾತೆ. ಮಂಗಳೂರಿನ ಬಂಟರ ಹುಡುಗಿ, ತೌಳವ ಸುಂದರಿ-ಕನ್ನಡತಿ, ವಿಶ್ವಸುಂದರಿ, ಬಾಲಿವುಡ್‌ನ ಖ್ಯಾತ ನಟಿ, ಬಿಗ್ ಬಿ ಸೊಸೆ ಅರ್ಥಾತ್ ಅಭಿಷೇಕ್ ಬಚ್ಚನ್ ಮನೆ-ಮನದೊಡತಿ. ಅವಳಿಗಿಂದು 35 ತುಂಬಿದೆ. ಹುಟ್ಟುಹಬ್ಬದ ಸಂಭ್ರಮ ನಳನಳಿಸುತ್ತಿದೆ. ಅವಳಿಗೇನೂ ಇದು ಹೊಸತಲ್ಲ. ಆದರೆ ಈ ಬಾರಿ ಗಂಡನ ಜತೆ ಆಚರಿಸುತ್ತಿರುವುದು ಮಾತ್ರ ವಿಶೇಷವಾಗಿರಬಹುದು. ಖಂಡಿತಾ ಕರ್ನಾಟಕ ರಾಜ್ಯೋತ್ಸವಕ್ಕೂ ಐಶ್ ಹುಟುಹಬ್ಬಕ್ಕೂ ಯಾವುದೇ ಸಂಬಂಧವಿಲ್ಲ!
ಖಾಸಗಿ ಜೀವನ ಸಾಕಷ್ಟು ಏರುಪೇರುಗಳನ್ನು ಕಂಡಿದ್ದರೂ, ಕೊನೆಗೆ ಉತ್ತಮ ಜಾಗವನ್ನೇ ಸೇರಿಕೊಂಡ ಐಶ್ವರ್ಯಾ ರೈ ಬಚ್ಚನ್‌ಳದ್ದು ಇದೀಗ ಸುಖ ಸಂಸಾರ. ಬಚ್ಚನ್ ಕುಟುಂಬದ ದೋಣಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಇವಳೂ ಸಾಗುತ್ತಿದ್ದಾಳೆ. ಎಲ್ಲರ ಪ್ರೀತಿಯನ್ನು ಬಹುಬೇಗನೆ ಗಳಿಸಿರುವ ಐಶ್‌ಗೆ ಇಂದು ಬರ್ತ್‌ಡೇ ಸಂಭ್ರಮ. ಐಶ್‌ಳನ್ನು ಕಟ್ಟಿಕೊಂಡು ದಿನಾ ಹಬ್ಬವನ್ನಾಚರಿಸುತ್ತಿರುವ ಗಂಡ ಅಭಿಷೇಕ್‌ಗೆ ಇಂದು ವಿಶೇಷ ಹಬ್ಬ.
ವಯಸ್ಸು ಮೂವತ್ತೈದಾದರೂ ಮುಖದಲ್ಲಿ 18ರ ಕಳೆಯಿದೆ. ಮನಸ್ಸಿನ್ನೂ ಕಾಲೇಜಿನ ಮೆಟ್ಟಿಲನ್ನು ಲೆಕ್ಕ ಹಾಕುತ್ತಿವೆ. ಗಂಡ ಜತೆಗಿದ್ದರೂ ಅವಳದ್ದು ಮನಸ್ಸಿಗೆ ಕಿಚ್ಚು ಹಚ್ಚುವ ಮೈಮಾಟ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಹನಿಮೂನ್, ಪ್ರೊಮೊ, ಬಿಡುಗಡೆ ಅಂತ ಊರೂರು ಸುತ್ತುವುದು ಆಕೆಗೆ ಮಾಮೂಲಿ. ಬರೇ ಭಾರತೀಯ ಚಿತ್ರರಂಗದ ನಟಿಯಾಗಿಯೂ ಆಕೆ ಉಳಿದಿಲ್ಲ. ಒಂದೆರಡು ಹಾಲಿವುಡ್ ಚಿತ್ರಗಳಲ್ಲಿಯೂ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡು ಗುರುತು ಮಾಡಿದ್ದಾಳೆ. ಇನ್ನು ಅವಳ ಕಣ್ಣುಗಳ ಬಗ್ಗೆ ಹಾಡಿಹೊಗಳದವರಿಲ್ಲ. ಅದಕ್ಕೂ ಇತ್ತೀಚೆಗೆ ಪ್ರಶಸ್ತಿಯೊಂದು ಬಂದಿತ್ತು.
ಇಷ್ಟೆಲ್ಲ ಗುಣಾವರೂಪವಿರುವಾಕೆಯನ್ನು ಸೊಸೆಯಾಗಿ ಪಡೆದಿರುವ ಬಾಲಿವುಡ್ ಮೆಘಾಸ್ಟಾರ್ ಏನು ಹೇಳುತ್ತಾರೆ ಕೇಳೋಣ...
"ಅವಳಿಗೆ ಶಾಂತಿ, ಸಮೃದ್ಧಿ, ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ. ನನ್ನ ಮಗನ ಆಯ್ಕೆ ಸರಿಯಾಗಿದೆಯೆಂದು ನನಗನ್ನಿಸುತ್ತಿದೆ. ಅವನ ನಿರ್ಧಾರದಿಂದ ನಾವೆಲ್ಲ ಖುಷಿಗೊಂಡಿದ್ದೇವೆ. ನಾವು ಹೆಮ್ಮೆಪಡುವಂತಹ ಕೆಲಸಗಳನ್ನು ಅವಳು ಮಾಡುತ್ತಿದ್ದಾಳೆ. ಅವಳು ನಮ್ಮ ಮನೆಗೆ ಬಂದ ನಂತರ ಮೂರಿದ್ದ ಡೈನಿಂಗ್ ಟೇಬಲ್ ಖುರ್ಚಿ ಇದೀಗ ನಾಲ್ಕಾಗಿದೆ" ಎಂದಿದ್ದಾರೆ ಐಶ್ ಮಾವ ಬಿಗ್ ಬಿ ಅಮಿತಾಬ್ ಬಚ್ಚನ್.
ಮಗಳು ಶ್ವೇತಾ ಮತ್ತು ಸೊಸೆ ಐಶ್‌ಗಿರುವ ಸಾಮ್ಯತೆ ಅಥವಾ ವ್ಯತ್ಯಾಸವೇನು ಎಂದು ಅಮಿತಾಬ್ ಬಳಿ ಕೇಳಿದಾಗ "ಜಗತ್ತಿನ ಎರಡು ಮಹಿಳೆಯರು ಸಂಪೂರ್ಣವಾಗಿ ಸಾಮ್ಯತೆ ಅಥವಾ ವ್ಯತ್ಯಾಸವನ್ನು ಹೊಂದಿರಲು ಸಾಧ್ಯವಿಲ್ಲ" ಎಂದುತ್ತರಿಸಿದ್ದಾರೆ. ತಿರುಗಿ ಮೊಮ್ಮಗುವಿನ ಬಗ್ಗೆ ಪ್ರಶ್ನಿಸಿದಾಗ, "ಯಾವ ತಂದೆಗೆ ತಾನೇ ಈ ಆಸೆ ಇರುವುದಿಲ್ಲ. ಆದರೆ ಪ್ರಕೃತಿಗೆ ತನ್ನದೇ ಆದ ಕಾಲಾವಕಾಶ ಕೂಡಿ ಬರಬೇಕಾಗಿದೆ. ಗಂಡಾಗಲಿ, ಹೆಣ್ಣಾಗಲಿ ನಿಸರ್ಗಕ್ಕೆ ಸವಾಲು ಹಾಕಲಾಗದು" ಎಂದು ತನ್ನ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.
ಐಶ್ ಬಗ್ಗೆ ಅಶುತೋಶ್ ಗೌರೀಕರ್, "ನಿಸ್ಸಂಶಯವಾಗಿ ಐಶ್ವರ್ಯಾ ಜಗದೇಕಸುಂದರಿ. ಆದರೆ ಆಕೆಯಲ್ಲಿ ಜಾಣತನ ಅದನ್ನೂ ಮೀರಿಸುತ್ತದೆ" ಎಂದಿದ್ದಾರೆ. ನಿರ್ದೇಶಕ ರೋಹನ್ ಸಿಪ್ಪಿ, "ಅವಳ ಚಿತ್ರಗಳಿಗಿಂತ ಅವಳು ದೊಡ್ಡವಳು. ಭಾರತೀಯ ಚಿತ್ರರಂಗದಲ್ಲಿ ಇಂಥವರು ತುಂಬಾ ಅಪರೂಪ" ಎಂದು ಹೇಳಿದ್ದು, ಮತ್ತೊಬ್ಬ ನಿರ್ದೇಶಕ ರಾಜೀವ್ ಮೆನನ್, "ಐಶ್ವರ್ಯಾ ರೈ ಆಧುನಿಕ ಭಾರತದ ಸುಂದರ ಭಾರತೀಯ ನಾರಿ ಮತ್ತು ಅವಳೇನು ಮಾಡಿದರೂ ಅದು ಸರಿಯಾಗಿಯೇ ಇರುತ್ತದೆ" ಎಂದು ಹೊಗಳಿಕೆಯ ಸುರಿಮಳೆಗೈದಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ಶಂಕರ್ ನಿರ್ದೇಶನದ 'ಇಂದಿರನ್' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ರಜನಿಕಾಂತ್ ನಾಯಕರಾಗಿರುವ ಈ ಚಿತ್ರದ ಸ್ಟಿಲ್‌ಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವುದನ್ನು ಕಂಡ ಶಂಕರ್ 40 ಜನ ಸೆಕ್ಯುರಿಟಿಗಳನ್ನು ನೇಮಿಸಿದ್ದಾರಂತೆ. ಅದರಲ್ಲಿ ಹೆಚ್ಚಿನವರು ಐಶ್ವರ್ಯಾ ಸುತ್ತ ಇರುತ್ತಿದ್ದರೆಂದೂ ವರದಿಯಾಗಿತ್ತು. ಭಾರತದ ಯಾವ ನಟಿಗೂ ಇಷ್ಟೊಂದು ಭದ್ರತೆಯ ಅವಶ್ಯಕತೆ ಕಂಡುಬರುವುದಿಲ್ಲ.
ಐಶ್ ಬಗ್ಗೆ ತಿಳಿಯದವರಿಲ್ಲ. ಆದರೂ ಹುಟ್ಟುಹಬ್ಬದ ಕಾರಣವಾಗಿ ಒಮ್ಮೆ ಕಣ್ಣಾಡಿಸೋಣ.
ಆಕೆ ಹುಟ್ಟಿದ್ದು 1973 ನವೆಂಬರ್ 1ರಂದು -ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ ರೈ, ತಾಯಿ ವೃಂದಾ ರೈ. ಬಂಟರ ಸಮುದಾಯದ ಇವರು ಕುಟುಂಬ ಉದ್ಯೋಗ ನಿಮಿತ್ತ ಮುಂಬೈಗೆ ವಲಸೆ ಹೋದವರು. ವಿದ್ಯಾಭ್ಯಾಸವನ್ನು ಮುಂಬೈಯಲ್ಲೇ ಮುಗಿಸಿದ ಐಶ್ 1994ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಅದೇ ವರ್ಷದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ವಿಜಯಿಯಾದಳು. ನಂತರದ ದಿನಗಳಲ್ಲಿ (1997) ಸಿನಿಮಾ ಕಡೆ ವಾಲಿದ ಅವಳ ಮೊದಲ ಚಿತ್ರ ತಮಿಳಿನ 'ಇರುವರ್'. ನಂತರ ಹಿಂದಿಯಲ್ಲಿ ಮೊದಲ ಚಿತ್ರ 'ಔರ್ ಪ್ಯಾರ್ ಹೋ ಗಯಾ'. ಬಾಲಿವುಡ್‌ನಲ್ಲಿ ಆಕೆಯ ಮೊದಲ ಹಿಟ್ ಚಿತ್ರ ಸಲ್ಮಾನ್ ಖಾನ್ ನಾಯಕನಾಗಿದ್ದ 'ಹಮ್ ದಿಲ್ ದೇ ಚುಕೇ ಸನಂ'. ತುಳು, ಇಂಗ್ಲೀಷ್, ಹಿಂದಿ, ಮರಾಠಿ ಮತ್ತು ತಮಿಳು ಭಾಷೆ ಐಶ್ವರ್ಯಾ ರೈಗೆ ಸಲೀಸು.
ಆ ದಿನಗಳಲ್ಲಿ ಸಲ್ಮಾನ್ ಖಾನ್ ಜತೆ ಪ್ರಣಯನಿರತಳಾಗಿದ್ದ ಐಶ್ ಕೆಲ ವರ್ಷಗಳಲ್ಲೇ ಆ ಸಂಬಂಧವನ್ನು ಕಡಿದುಕೊಂಡು ವಿವೇಕ್ ಓಬೆರಾಯ್‌ನತ್ತ ವಾಲಿದ್ದಳು. ಅಲ್ಪಾವಧಿಯಲ್ಲೇ ಮನಸ್ಸು ಬದಲಾಯಿಸಿದ ಆಕೆ ಕೊನೆಗೆ ಒಪ್ಪಿಕೊಂಡದ್ದು ಅಭಿಷೇಕ್ ಬಚ್ಚನ್‌ನನ್ನು. 2007 ಏಪ್ರಿಲ್ 20ರಂದು ಐಶ್‌ಳನ್ನು ವರಿಸಿದ ಬಚ್ಚನ್‌ರದ್ದು ಈಗ ಸುಖ ಸಂಸಾರ.
ಐಶ್ವರ್ಯಾ ರೈ ಬಚ್ಚನ್ ಹುಟ್ಟು ಹಬ್ಬಕ್ಕೆ ನಾವೂ ಶುಭ ಹಾರೈಸೋಣ...