ಗೆಳೆಯ ನೆಸ್ ವಾಡಿಯಾ ಜತೆಗಿನ ಪ್ರೀತಿ ಜಿಂಟಾಳ ಸಂಬಂಧ ಮುರಿದು ಬಿದ್ದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವುದಕ್ಕೆ ಮತ್ತು ಕ್ರಿಕೆಟಿಗ ಯುವರಾಜ್ ಸಿಂಗ್ ಜತೆ ತಿರುಗುತ್ತಿರುವುದಕ್ಕೆ ಸ್ಪಷ್ಟನೆ ಬಂದಿದೆ. "ಅದು ಹಾಗಲ್ಲ.. ಹೀಗೆ.. ತನ್ನ ಪ್ರೀತಿಯಲ್ಲಿ ಭಿನ್ನರಾಗವಿಲ್ಲ.. ಯುವಿ ಜತೆಗೆ ನನಗೆ ಸಂಬಂಧವಿಲ್ಲ.. ನನ್ನ ಅವನ ನಡುವೆ ಏನಿಲ್ಲ... ಏನೇನೂ ಇಲ್ಲ" ಎಂದಿದ್ದಾರೆ ಪ್ರೀತಿಯಿಂದ ಪ್ರೀತಿ ಜಿಂಟಾ.
ಐಪಿಎಲ್ ಪಂದ್ಯ ನಡೆಯುತ್ತಿರುವಾಗ ಯುವಿಗೆ ಪ್ರೀತಿ ಮೆಚ್ಚುಗೆ ವ್ಯಕ್ತ ಪಡಿಸಿದ ಪರಿ ನೋಡಿ ಕೆಲವರು ದಂಗಾದರೆ, ಮತ್ತೆ ಕೆಲವರು ಅಸೂಯೆ ಪಟ್ಟಿದ್ದುಂಟು. ಈಕೆ ಸಾರ್ವಜನಿಕವಾಗಿ ಅಪ್ಪುಗೆ, ಮುತ್ತುಗಳನ್ನು ನೀಡಿದ್ದಾಗ ಸ್ವತಃ ಯುವಿಯೇ ಮುಜುಗರಪಟ್ಟುಕೊಂಡಿರಬಹುದು. ಆಗಿಂದ ಇವರ ಮೇಲೆ ಹಲವರು ಕಣ್ಣು ನೆಟ್ಟಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿನ ಶಾರೂಖ್ ಖಾನ್ ಬರ್ತ್ ಡೇ ಪಾರ್ಟಿಗೆ ಪ್ರೀತಿ-ಯುವರಾಜ್ ಜತೆಯಾಗಿ ತೆರಳಿದ್ದರು. ಅವರನ್ನಲ್ಲಿ ಜತೆಯಾಗಿ ಕಂಡವರು ಸುದ್ದಿ ಮಾಡಿದ್ದಾರೆ. ಅದಕ್ಕೀಗ ಪ್ರೀತಿ ಸ್ಪಷ್ಟವಾಗಿ ಹೇಳಿದ್ದಾಳೆ.. "ಯುವಿ ನನ್ನವನಲ್ಲ" ಎಂದು.
PTI
"ನೆಸ್ ವಾಡಿಯಾ ನಗರದಿಂದ ಹೊರಗಿದ್ದಾರೆ. ಯುವರಾಜ್ ನನ್ನ ಐಪಿಎಲ್ ಮೊಹಾಲಿ ತಂಡದ ಕಪ್ತಾನ. ಅವರು ಶಾರೂಕ್ ಪಾರ್ಟಿಗೆ ಒಬ್ಬಂಟಿಯಾಗಿ ಹೋಗಲಿದ್ದರು. ನಾನು ಕೂಡ ಏಕಾಂಗಿಯಾಗಿ ಹೋಗಬೇಕಿತ್ತು. ಹಾಗಾಗಿ ನಾವಿಬ್ಬರೂ ಜತೆಗೆ... ಅದರಲ್ಲೇನಿದೆ ವಿಶೇಷ. ಇತರರ ನಾಲಿಗೆಗಳನ್ನು ಹಿಡಿತದಲ್ಲಿಡಲು ನಾನು ಗೆಳೆಯರನ್ನು ನಿರ್ಲಕ್ಷಿಸಬೇಕೇ? ಅದು ಸಾಧ್ಯವಿಲ್ಲ. ನನಗ್ಯಾವುದು ಸರಿ ಅನ್ನಿಸುತ್ತಿದೆಯೋ ಅದನ್ನು ಮಾಡಿಯೇ ತೀರುತ್ತೇನೆ" ಎಂದು ಎಲ್ಲವನ್ನೂ ಪ್ರೀತಿ ಸ್ಪಷ್ಟಪಡಿಸಿದ್ದಾಳೆ.
"ಶಾರೂಕ್ ಅವರ ಈ ಹಿಂದಿನ ಹುಟ್ಟುಹಬ್ಬಗಳಿಗೆ ಹೋಲಿಸಿದರೆ ಈ ಬಾರಿಯ ಹುಟ್ಟುಹಬ್ಬ ನಮಗೆ ಹೆಚ್ಚು ಆಪ್ತವಾಗಿತ್ತು. ಅಲ್ಲಿ ಹೊರಗಡೆ ತುಂಬಾ ಟೀವಿಯವರೂ ಇದ್ದರು. ನಾನಂತೂ ತುಂಬಾ ಸಂಭ್ರಮಿಸಿದ್ದೇನೆ"
ಮತ್ತೂ ಮುಂದುವರಿಸಿ, ಪ್ರತೀ ಬಾರಿ ಐಶ್ವರ್ಯಾ ಬರ್ತ್‌ಡೇ ಸಂದರ್ಭದಲ್ಲಿ ಆಕೆಯ ವಯಸ್ಸನ್ನು ಒತ್ತಿಹೇಳುವ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ಜಿಂಟಾ, ರೈ-ಬಚ್ಚನ್‌ಗಿರುವ ವಯಸ್ಸಿನ ವ್ಯತ್ಯಾಸವನ್ನೂ (ಐಶ್ವರ್ಯಾ ರೈಗೆ 35 ವರ್ಷ, ಅಭಿಷೇಕ್ ಬಚ್ಚನ್‌ಗೆ 32 ವರ್ಷ) ಮಾಧ್ಯಮಗಳು ಹೈಲೈಟ್ ಮಾಡುತ್ತಿವೆ ಎಂದು ದೂರಿದ್ದಾರೆ. "ಅದನ್ನೆಲ್ಲ ದೊಡ್ಡ ಅಕ್ಷರಗಳಲ್ಲಿ ಎದ್ದು ಕಾಣುವಂತೆ ಪ್ರಕಟಿಸುವ ಅಗತ್ಯವಿಲ್ಲ. ಮಹಿಳಾ ಸೆಲೆಬ್ರಿಟಿಗೆ ಒಂದು ವರ್ಷ ಹೆಚ್ಚಾದರೆ ಅದೇನು ದೊಡ್ಡ ವಿಷಯವೇನು?" ಎಂದು ಗುಳಿಕೆನ್ನೆಯ ಲಿರಿಲ್ ಹುಡುಗಿ ಪ್ರಶ್ನಿಸಿದ್ದಾರೆ.
ಪ್ರೀತಿ ಜಿಂಟಾಳ ಹಿನ್ನಲೆ ಆಕೆಯ ಹೆಸರಿನಷ್ಟು ಸುಂದರವಾಗಿಲ್ಲ. ಆಕೆ ಸಂತೋಷಕ್ಕಿಂತ ಹೆಚ್ಚು ಕಷ್ಟಗಳನ್ನು, ಸಾಕಷ್ಟು ವಿವಾದಗಳನ್ನು ದಾಟಿ ಬಂದಿದ್ದಾರೆ. ಅವೆಲ್ಲದರ ಬಗ್ಗೆ ಒಂದು ಪಕ್ಷಿನೋಟ ಇಲ್ಲಿದೆ...
ಪ್ರೀತಿ ಜಿಂಟಾ ಹುಟ್ಟಿದ್ದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ. 1975 ಜನವರಿ 31ರಂದ ಜನಿಸಿದ ಆಕೆ ತನ್ನ 13ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಳು. ಕಾರು ಅಪಘಾತವೊಂದರಲ್ಲಿ ತಂದೆ ಮೃತಪಟ್ಟ ಕೆಲವೇ ವರ್ಷಗಳಲ್ಲಿ ಅದೇ ಅಪಘಾತದಿಂದ ಗಾಯಗೊಂಡಿದ್ದ ತಾಯಿ ಕೂಡ ತೀರಿಕೊಂಡರು. ಈಕೆಗೆ ಇಬ್ಬರು ಸಹೋದರರು. ಒಬ್ಬ ಮಿಲಿಟರಿ ಅಧಿಕಾರಿ. ಮತ್ತೊಬ್ಬ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ.
ಅಪರಾಧ ಶಾಸ್ತ್ರ, ಮನಶಾಸ್ತ್ರಗಳಲ್ಲಿ ಉನ್ನತ ಅಧ್ಯಯನ ನಡೆಸಿದ ಪ್ರೀತಿ ಬಂದದ್ದು ಬಣ್ಣದ ಜಗತ್ತಿಗೆ. ಮೊದಲ ಚಿತ್ರ ಮಣಿರತ್ನಂರ 'ದಿಲ್ ಸೇ'. ನಂತರ ಬಾಲಿವುಡ್‌ನಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಅದರ ಜತೆಗೆ ಗಾಸಿಪ್‌ಗಳನ್ನು ಕೂಡ. ಪ್ರೀತಿ ಮೊದಲು ಡೇಟಿಂಗ್ ಮಾಡಿದ್ದು ಮಾಡೆಲ್ ಮಾರ್ಕ್ ರಾಬಿನ್‌ಸನ್ ಜತೆ. ನಂತರ 2005ರಿಂದ ಬಾಂಬೆ ಡೈಯಿಂಗ್ ಮಾಲಕ ಉದ್ಯಮಿ ನೆಸ್ ವಾಡಿಯಾ ಜತೆ ಸಂಬಂಧ ಬೆಳೆಸಿದಳು. ಈ ನಡುವೆ ಗಾಯಕಿ ಸುಚಿತ್ರ ಕೃಷ್ಟಮೂರ್ತಿ ಗಂಡ ಶೇಖರ್ ಕಪೂರ್ ಜತೆ ಸಂಬಂಧ ಹೊಂದಿದ್ದಳು ಎಂದೂ ಆರೋಪಿಸಲಾಯಿತು. ಸಲ್ಮಾನ್ ಖಾನ್ ಟೇಪ್ ವಿವಾದದಲ್ಲಿ ಈಕೆ ಜತೆಗಿನ ಸಂಬಂಧದ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು.
'ಚೋರಿ ಚೋರಿ ಚುಪ್ಕೆ ಚುಪ್ಕೆ' ಚಿತ್ರದ ಭರತ್ ಶಾ, ಅಂಡರ್‌ವರ್ಲ್ಡ್ ವಿವಾದದಲ್ಲೂ ಈಕೆ ಸಾಕ್ಷಿಯಾಗಬೇಕಾಯಿತು. ಇವೆಲ್ಲದರ ಜತೆಗೆ ಎರಡು ಬಾರಿ ಸಾವಿನ ದವಡೆಯಿಂದಲೂ ಪಾರಾಗಿ ಬಂದಳು ಪ್ರೀತಿ. ಒಮ್ಮೆ ಕೊಲೊಂಬೋದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಪಕ್ಕದಲ್ಲೇ ಬಾಂಬ್ ಸ್ಫೋಟ ನಡೆದಿತ್ತು. ಮತ್ತೊಮ್ಮೆ ಭೂಕಂಪದಿಂದ ಪಾರಾಗಿದ್ದರು.