ಇದು ಮೊನ್ನೆ ಮೊನ್ನೆ ಬಿಡುಗಡೆಯಾದ ಮಧುರ್ ಭಂಡಾರ್ಕರ್ ನಿರ್ದೇಶನದ 'ಫ್ಯಾಷನ್' ಚಿತ್ರದಲ್ಲಿ ನಾಯಕಿ ಪ್ರಿಯಾಂಕಾ ಛೋಪ್ರಾ ಉಟ್ಟೆಸೆದ ಉಡುಪುಗಳ ಸಂಖ್ಯೆ. ಹಾಗಂತ ಆಕೆಯೇ ತಿಳಿಸಿದ್ದಾಳೆ.
ಯಾವತ್ತೂ ಪ್ರಚಲಿತ ವಿಚಾರಗಳತ್ತ ಗಮನ ಹರಿಸಿ ಸಿನಿಮಾ ಮಾಡುವ ಮಧುರ್ ಭಂಡಾರ್ಕರ್ ಈ ಬಾರಿ ಆರಿಸಿಕೊಂಡದ್ದು ಫ್ಯಾಷನ್ ಲೋಕದ ಕರಾಳ ಜಗತ್ತನ್ನು. ಅಲ್ಲಿ ನಡೆಯುವ ಕತ್ತಲು-ಬೆಳಕಿನ ಆಟಗಳ ಬಗ್ಗೆ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಲಾಗಿದೆ. ಹೆಸರು ಮಾಡಬೇಕಾದರೆ ಯಾವ ರೀತಿಯಲ್ಲಿ ಬಳಕೆಯಾಗಬೇಕಾಗುತ್ತದೆ ಮತ್ತು ಯಾರೂ ಏನೂ ಆಗಬಹುದು ಎಂಬಂತಹ ಸತ್ಯಗಳನ್ನು ಬೆಳ್ಳಿ ತೆರೆಯ ಮೇಲೆ ಬಿಂಬಿಸಿದ್ದಾರೆ ಭಂಡಾರ್ಕರ್. ಅಲ್ಲಿ ಹುಟ್ಟುವ ಪ್ರೀತಿಗಳು, ಅಮಲಿನ ಜಗತ್ತಿನ ಬಗೆಗೂ ಬೆಳಕು ಚೆಲ್ಲಲಾಗಿದೆ. ಮಧುರ್ ಅವರ ಈ ಹಿಂದಿನ ಪೇಜ್ 3, ಕಾರ್ಪೊರೇಟ್, ಚಾಂದಿನಿ ಬಾರ್, ಟ್ರಾಫಿಕ್ ಸಿಗ್ನಲ್ ಚಿತ್ರಗಳು ಕೂಡ ಇಂತಹುದೇ ವಿಚಾರಗಳ ಮೇಲೆ ಹೆಣೆದ ಕಥೆಯಾಗಿತ್ತು.
ಹಳ್ಳಿ ಹುಡುಗಿಯ ಪಾತ್ರದೊಂದಿಗೆ ಆರಂಭವಾಗುವ ಪ್ರಿಯಾಂಕಾ ಪಾತ್ರ ಮುಂಬಯಿಯಲ್ಲಿ ಸೂಪರ್ ಮಾಡೆಲ್ ಆಗುವವರೆಗೂ ಮುಂದುವರಿಯುತ್ತದೆ. ಈ ನಡುವೆ ಸುಮಾರು ಐದು ಹಂತಗಳಲ್ಲಿ ಛೋಪ್ರಾಳನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ಮೇಘನಾ ಮಾಥುರ್ ಎಂಬ ಹುಡುಗಿಯ ಜೀವನದ ಒಂದೂವರೆ ವರ್ಷಗಳ ಬದಲಾವಣೆಯನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಚಿತ್ರದಲ್ಲಿನ ಕೆಲವು ಅಂಶಗಳ ಬಗ್ಗೆ ಇದೀಗ ಆಕ್ಷೇಪ ವ್ಯಕ್ತಪಡಿಸಿರುವ ಫ್ಯಾಷನ್ ಲೋಕದವರು, ಇದೊಂದು ಸಿನಿಮಾದಲ್ಲಿ ಹಣ ಮಾಡಲು ಉಪಯೋಗಿಸಿರುವ ಟ್ರಿಕ್ಸ್ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ಮಾತ್ರ ಇದು ಅಪ್ಪಟ ಸತ್ಯ. ಇದೆಲ್ಲ ನಾವು ಕಣ್ಣಾರೆ ಕಂಡಂತಹ ನಗ್ನಸತ್ಯಗಳು ಎಂದು ಹೇಳಿಕೊಂಡಿದ್ದಾರೆ.
"ನಾನು 137 ಬಗೆಯ ಉಡುಪುಗಳನ್ನು 'ಫ್ಯಾಷನ್' ಚಿತ್ರದಲ್ಲಿ ತೊಟ್ಟಿದ್ದೇನೆ. ನನ್ನ ಪಾತ್ರ ಒಂದೂವರೆ ವರ್ಷಗಳಷ್ಟು ಸುದೀರ್ಘ ಅವಧಿಯದ್ದಾಗಿರುವುದರಿಂದ ಇದು ಪಾತ್ರದ ಅಗತ್ಯವಾಗಿತ್ತು. ಫ್ಯಾಷನ್ ಶೋಗಳು, ಜಾಹೀರಾತು ವಿಚಾರಗಳು ಸೇರಿದಂತೆ ಇತರ ಸಂಯೋಜನೆಗಳು ನನ್ನ ಪಾತ್ರಕ್ಕೆ ವಸ್ತ್ರದ ಅನಿವಾರ್ಯತೆ ಹೆಚ್ಚಿಸಿದವು. ಮೊದಲು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಾನು ನಂತರ ಚಂಡೀಗಢಕ್ಕೆ ಬರುತ್ತೇನೆ. ಅಲ್ಲಿ ಸಣ್ಣ ನಗರಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಹೊಂದುತ್ತೇನೆ. ನಂತರ ಮಾಡೆಲ್ ಆಗುತ್ತೇನೆ. ಮತ್ತಷ್ಟು ಬದಲಾವಣೆ ಮಾಡಿಕೊಂಡು ತುಂಬಾ ಸ್ಟೈಲಿಶ್ ಹಾಗೂ ಸೂಪರ್ ಮಾಡೆಲ್ ಆಗುತ್ತೇನೆ" ಎಂದು ಪ್ರಿಯಾಂಕಾ ತನ್ನ ಪಾತ್ರದ ಬಗ್ಗೆ ತಿಳಿಸಿದ್ದಾರೆ.
ಪಾಪ.. ಪ್ರಿಯಾಂಕ ಎಷ್ಟು ಕಷ್ಟ ಪಟ್ಟಿದ್ದಾಳೋ ಏನೋ... ಅಷ್ಟೊಂದು ಬಟ್ಟೆಗಳನ್ನು ಹಾಕಬೇಕು.. ಮತ್ತೆ ಬಿಚ್ಚಬೇಕು ಎಂದು ಯಾರೂ ಸಿಂಪಥಿ ತೋರಬೇಕಾಗಿಲ್ಲ. ಅಲ್ಲಿ ಅವರಿಗೆ ಕೈ-ಕಾಲಿಗೊಬ್ಬರು ಬಣ್ಣ ಹಚ್ಚಲು-ಬಿಚ್ಚಲು ಸಹಾಯಕರು ಸಿದ್ಧರಾಗಿರುತ್ತಾರೆ.
ಈ ಸಿನಿಮಾ ಮಂದಿಗೆ ಬಟ್ಟೆ ಉಡೋದು ಮಾತ್ರ ಕಷ್ಟ... ಬಿಚ್ಚೋದು ತುಂಬಾ ಸುಲಭವಂತೆ!