ತಮ್ಮ ಚಿತ್ರ ಫ್ಯಾಶನ್‌ಗೆ ದೊರಕುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದ ಪ್ರಿಯಾಂಕ ಚೋಪ್ರಾ ಖುಷಿಯಾಗಿದ್ದಾರೆ. "ನನ್ನ ಚಿತ್ರಗಳು ಬಿಡುಗಡೆಯಾದಾಗ ಬಗ್ಗೆ ಖುಷಿಪಡುವುದಕ್ಕಾಗಲಿ ಅಥವಾ ದುಃಖಿಸುವುದಕ್ಕಾಗಲಿ ನನಗೆ ಸಮಯವೇ ದೊರಕಿಲ್ಲ. ಈ ವರ್ಷದ ನನ್ನ ಚಿತ್ರಗಳ ಸೋಲಿನ ಬಗ್ಗೆ ಬೇಸರಿಸುವುದಕ್ಕೆ ನನಗೆ ಸಮಯ ಸಿಗಲಿಲ್ಲ ಏಕೆಂದರೆ ಒಂದು ಚಿತ್ರ ಬಿಡುಗಡೆಯಾಗುತ್ತಿದ್ದಂತೆ ನಾನು ಇನ್ನೊಂದು ಚಿತ್ರದ ಪ್ರಚಾರದಲ್ಲಿ ತೊಡಗಿರುತ್ತಿದ್ದೆ. ಆದರೆ ಲವ್ ಸ್ಟೋರಿ 2050 ಮತ್ತು ದ್ರೋಣ ಚಿತ್ರಗಳು ಸೋತಾಗ ನನಗೆ ತುಂಬಾ ನೋವುಂಟಾಗಿತ್ತು. ನನ್ನ ಹೃದಯ ಒಡೆದಂತಾಗಿತ್ತು" ಎಂದು ಪ್ರಿಯಾಂಕ ಹೇಳುತ್ತಾರೆ.
ಪ್ರಿಯಾಂಕ ವಿವಾದಗಳಿಗೆ ಮಣೆ ಹಾಕಿದ್ದು ಕಡಿಮೆ, ಆದರೆ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕರ ನಡುವಿನ ಸಂಬಂಧ ಅಷ್ಟೇನು ಚೆನ್ನಾಗಿಲ್ಲ ಎಂಬ ಗುಸುಗುಸು ಹಬ್ಬಿತ್ತು, ಅಲ್ಲದೆ ಇವರಿಬ್ಬರು ನಟಿಸಿರುವ ಗಾಡ್ ತೂಸಿ ಗ್ರೇಟ್ ಹೊ ಚಿತ್ರದ ಬಿಡುಗಡೆ ವಿಳಂಬಗೊಂಡಿದ್ದಕ್ಕೆ ಇದೇ ಕಾರಣ ಎಂದು ಸಹ ಹೇಳಲಾಗಿದೆ. ಈ ಬಗ್ಗೆ ಪ್ರಿಯಾಂಕ "ಚಿತ್ರದ ಬಿಡುಗಡೆ ವಿವಿಧ ಕಾರಣಗಳಿಗಾಗಿ ವಿಳಂಬಗೊಂಡಿತು. ಖಂಡಿತವಾಗಿಯೂ ನಾನು ಇದಕ್ಕೆ ಕಾರಣವಲ್ಲ. ಸಲ್ಮಾನ್ ನನ್ನೊಡನೆ ದುಡಿಯಲು ಇಷ್ಟಪಡುವುದಿಲ್ಲ ಎಂಬ ವದಂತಿಯ ಬಗ್ಗೆ ಹೇಳಬೇಕೆಂದರೆ, ಇದನ್ನು ಮೂರನೆಯವರಿಂದ ಕೇಳಿ ತಿಳಿದಿದ್ದೇನೆ. ಆದರೆ ನಾವಿಬ್ಬರು ಭೇಟಿಯಾದಾಗ ಅವರು ಬಹಳ ಉತ್ತಮವಾಗಿ ನಡೆದುಕೊಂಡಿದ್ದಾರೆ. ಅವರೊಡನೆ ನನಗಾವುದೇ ಸಮಸ್ಯೆಯೂ ಇಲ್ಲ" ಎಂದು ಹೇಳಿದ್ದಾರೆ.
ಈ ಹಿಂದೆ ಬಹಳಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕ ಒಂದಾಗಿ ಮತ್ತೆ ನಟಿಸುತ್ತಾರೆಯೇ ಎಂದು ಪ್ರಶ್ನಿಸಿದರೆ ಅದಕ್ಕೂ ಪ್ರಿಯಾಂಕ ನೀಡುವ ಉತ್ತರ "ಖಂಡಿತವಾಗಿಯೂ, ನನಗಾವುದೇ ತೊಂದರೆಯಿಲ್ಲ".