ಬಾಲಿವುಡ್‌ನ ಖ್ಯಾತ ನಟಿ ಮಾಜಿ ಮಿಸ್ ಇಂಡಿಯಾ ಜೂಹಿ ಇಂದು (ನವೆಂಬರ್ 13) ತನ್ನ 41ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡಲ್ಲೂ ನಟಿಸಿರುವ ಈ 'ನೆರೆಮನೆಯ ಹುಡುಗಿ' ಸರಳತೆ ಮತ್ತು ಪ್ರತಿಭೆಯಿಂದ ಬಾಲಿವುಡ್ ಪ್ರಿಯರ ಮನಗೆದ್ದವರು. ಹಿಂದಿ, ಕನ್ನಡವಲ್ಲದೆ ಇವರು ಮಲಯಾಳಂ ಮತ್ತು ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.
ಜೂಹಿ ಚಾವ್ಲ 1984ರ ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದರು. ನಂತರ ಇದೇ ವರ್ಷ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಅತ್ಯತ್ತಮ ಉಡುಗೆ(ಬೆಸ್ಟ್ ಕಾಸ್ಟ್ಯೂಮ್) ಪ್ರಶಸ್ತಿಯನ್ನು ಜಯಿಸಿದ್ದರು.
ಸೌಂದರ್ಯ ಕಿರೀಟ ತೊಟ್ಟ ಹೆಚ್ಚಿನೆಲ್ಲಾ ಸುಂದರಿಯರ ಮನಸ್ಸು ಹೊರಳುವುದು ಸಿನಿ ಪ್ರಪಂಚದತ್ತ. ಜೂಹಿ ಸಹ 1986ರಲ್ಲಿ ಸುಲ್ತನತ್ ಚಿತ್ರದಲ್ಲಿ ನಟಿಸಿದರು. ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ ಈ ತುಂಟ ನಗುವಿನ ಬೆಡಗಿ ರವಿಚಂದ್ರನ್‌ರ ಪ್ರೇಮಲೋಕ ಚಿತ್ರದಲ್ಲಿ ನಟಿಸಿದರು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರಾಂತಿಯುಂಟು ಮಾಡಿದ ಸೂಪರ್ ಹಿಟ್ ಚಿತ್ರವೆನಿಸಿದೆ. ಅವರು ಕನ್ನಡದ ಶಾಂತಿಕ್ರಾಂತಿ ಮತ್ತು ಕಿಂದರ ಜೋಗಿ ಚಿತ್ರಗಳಲ್ಲೂ ನಟಿಸಿದರು, ಆದರೆ ಈ ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ನೆಲಕಚ್ಚಿದವು. ಬಾಲಿವುಡ್‌ನಲ್ಲಿ ಅವರ ಪ್ರಥಮ ಹಿಟ್ ಚಿತ್ರ 1989ರ ಕಯಾಮತ್ ಸೇ ಕಯಾಮತ್ ತಕ್. ಈ ಚಿತ್ರದಲ್ಲಿ ಜೂಹಿ ಅಮೀರ್ ಖಾನ್ ಜೊತೆ ನಟಿಸಿದ್ದರು.
1993ರಲ್ಲಿ ಹಮ್ ಹೇ ರಾಹಿ ಪ್ಯಾರ್ ಕೇ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಜಯಿಸಿದರು. ಅಮೀರ್ ಖಾನ್ ಮತ್ತು ಜೂಹಿ ಜೋಡಿ ಬಾಕ್ಸ್ ಅಫೀಸ್ನಲ್ಲಿ ಮತ್ತೆ ಮತ್ತೆ ಮ್ಯಾಜಿಕ್ ಮಾಡುತ್ತಿತ್ತು. ಅವರು ಜೊತೆಯಾದ ಕಯಾಮತ್ ಸೇ ಕಯಾಮತ್ ತಕ್, ಹಮ್ ಹೇ ರಾಹಿ ಪ್ಯಾರ್ ಕೇ, ಮತ್ತು ಇಶ್ಕ್ ಚಿತ್ರಗಳು ಹಿಟ್ ಎನಿಸಿದವು.
IFM
ಶಾರುಖ್ ಖಾನ್‌ರೊಂದಿಗಿನ ಜೂಹಿ ಚಿತ್ರಗಳು ರಾಜು ಬನ್ ಗಯಾ ಜಂಟಲ್ ಮ್ಯಾನ್, ಅವರ ಫಿಲ್ಮಿ ಕೆರಿಯರ್‌ನ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾದ ಡರ್, ಮತ್ತು ಎಸ್ ಬಾಸ್ ಚಿತ್ರಗಳೂ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ್ದವು.
ನಂತರ ಜೂಹಿ, ಶಾರುಖ್ ಮತ್ತು ನಿರ್ದೇಶಕ ಅಜೀಜ್ ಮಿರ್ಜಾ ಸಹಭಾಗಿತ್ವದಲ್ಲಿ ನಿರ್ಮಾಣ ಸಂಸ್ಥೆ ಡ್ರೀಮ್ಸ್ ಅನ್‌ಲಿಮಿಟೆಡ್‌ನ ಸಹ ಮಾಲಿಕರಾದರು.
ಜೂಹಿ ನಟಿಸಿದ್ದ ದೀವಾರೇ ಚಿತ್ರಕ್ಕಾಗಿ ಅತ್ಯುತ್ತಮ ಸಹನಟಿ ಪ್ರಶಸ್ತಿ ಗಳಿಸಿದ್ದಾರೆ.
IFM
ಇತ್ತೀಚಿಗೆ ಅವರು ನಟಿಸಿದ ಚಿತ್ರಗಳೆಂದರೆ ಸಲಾಮೇ ಇಶ್ಕ, ಬಸ್ ಏಕ್ ಪಲ್, ಅಮಿತಾಬ್ ಬಚ್ಚನ್ ಮತ್ತು ಶಾರುಖ್‌ರೊಂದಿಗಿನ ಭೂತನಾತ್, ಈ ಚಿತ್ರದಲ್ಲಿ ಚಲೊ ಜಾನೆ ದೊ ಎಂಬ ಗೀತೆಯನ್ನು ಹಾಡುವ ಮೂಲಕ ಅವರು ಪ್ರಥಮ ಬಾರಿಗೆ ಗಾಯಕಿಯೆನಿಸಿದರು. ಅರ್ಶದ್ ವರ್ಸಿ ಮತ್ತು ಇರ್ಫಾನ್ ಖಾನ್ ಅವರೊಂದಿಗೆ ಕ್ರೇಜಿ 4 ಚಿತ್ರದಲ್ಲೂ ಜೂಹಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮ ನಿರೂಪಕಿಯಾಗಿ ಜೂಹಿ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಅವರು ಫಿಲ್ಮ್ ಫೇರ್ ಅವಾರ್ಡ್ ಮತ್ತು ಝೀ ಶೈನ್ ಅವಾರ್ಡ್ ಮುಂತಾದ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ನಿರೂಪಕಿಯಾಗಿ ಗುರುತಿಸಲ್ಪಟ್ಟಿದ್ದಾರೆ.
2006ರಲ್ಲಿ ಮಲೆಯಾಲಂ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ ಜೂಹಿ, ಆ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರ ಜೊತೆ ನಟಿಸಿದ್ದಾರೆ. ಅವರು ಶಹೀದ್ ಉಧಾಮ್ ಸಿಂಗ್(2000), ದೇಶ್ ಹೊ ಯಾ ಪರದೇಶ್(2004) ಮತ್ತು ಇಶ್ಕ ದ ವಾರಿಸ್(2006) ಎಂಬ ಮೂರು ಪಂಜಾಬಿ ಚಿತ್ರಗಳಲ್ಲೂ ಜೂಹಿ ನಟಸಿದ್ದಾರೆ.
IFM
ಜೂಹಿ ಚಾವ್ಲ, ಇಂಡಸ್ಟ್ರಿಯಲಿಸ್ಟ್ ಜೈ ಮೆಹ್ತಾರನ್ನು ವಿವಾಹವಾಗಿ ಎರಡು ಮಕ್ಕಳನ್ನು ಪಡೆದಿರುವ ಸಂತೃಪ್ತ ಗೃಹಿಣಿ.
ಇಂಡಿಯನ್ ಪ್ರಿಮಿಯರ್ ಲೀಗ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಜೈ ಮೆಹ್ತಾ ಮತ್ತು ಜೂಹಿ ಚಾವ್ಲ, ಶಾರುಖ್ ಖಾನ್‌ರೊಂದಿಗಿನ ಸಹ ಮಾಲಿಕರಾಗಿದ್ದಾರೆ.