ಜಾನ್ ಅಬ್ರಹಾಂ ಅವಸರದಲ್ಲಿಲ್ಲ. ಬಹಳಷ್ಟು ನಟರು ದೊಡ್ಡ ಮೊತ್ತಕ್ಕಾಗಿ ಬಹಳಷ್ಟು ಚಿತ್ರಗಳಿಗೆ ಸಹಿ ಹಾಕುತ್ತಿದ್ದರೂ, ಜಾನ್ ನಿಧಾನವಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ತಾನು ನಿಜವಾಗಿಯೂ ಅವಸರದಲ್ಲಿಲ್ಲ ಎನ್ನುತ್ತಾರೆ ಜಾನ್.
ತಮ್ಮ ಸಹನಟನೊಬ್ಬ 60 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುವಾಗ ಜಾನ್ಗೆ ಅಸುರಕ್ಷಿತ ಭಾವ ಹುಟ್ಟುವುದಿಲ್ಲವೇ ಅಥವಾ ಇನ್ನೊರ್ವ ನಟ ದೊಡ್ಡ ಮೊತ್ತಕ್ಕಾಗಿ ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿದಾಗ, ಜಾನ್ಗೂ ಈ ರೇಟ್ ರೇಸ್ನಲ್ಲಿ ಭಾಗವಹಿಸಬೇಕೆಂದು ಮನಸ್ಸಾಗುವುದಿಲ್ಲವೇ ಎಂದು ಪ್ರಶ್ನಿಸಿದರೆ, "ನನ್ನನ್ನು ನಂಬಿ, ನನಗೆಂದು ಅಸುರಕ್ಷಿತ ಭಾವ ಬಂದಿಲ್ಲ. ಮತ್ತು ದೊಡ್ಡ ಮೊತ್ತದ ಹಣವಿದ್ದರೂ ಮೂರು-ನಾಲ್ಕು ಚಿತ್ರಗಳಿಗೆ ಸಹಿ ಹಾಕುವುದು ನನಗಿಷ್ಟವಿಲ್ಲ. ನಾವು ಯಾವುದಾದರೊಂದು ವಿಷಯದಲ್ಲಾದರೂ ನಮ್ಮದೇ ಆದ ಛಾಪನ್ನು ಮೂಡಿಸಬೇಕಾಗುತ್ತದೆ" ಎಂಬುದು ಜಾನ್ ಉತ್ತರ.
'ಆಶಿಯಾನೆ' ಚಿತ್ರ ಪೂರ್ಣಗೊಂಡಿದ್ದು ಹೊಸವರ್ಷದ ಆದಿಯಲ್ಲಿ ಬಿಡುಗಡೆಯಾಗಲಿದೆ, ನಂತರ ಯಶ್ ರಾಜ್ರ 'ನ್ಯೂಯಾರ್ಕ್', ಇದಾದ ನಂತರ ಅಬ್ಬಾಸ್ ಟರೈವಾಲಾರ ಚಿತ್ರದಲ್ಲಿ ಜಾನ್ ನಟಿಸಲಿದ್ದಾರೆ. "ಅಬ್ಬಾಸ್ರ ಚಿತ್ರ ಮುಗಿಸಿದ ನಂತರ ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಬಹಳ ಸಮಯದಿಂದ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದೇನೆ. ನಾನು ವಿಶ್ರಾಂತಿ ತೆಗೆದುಕೊಳ್ಳಬೇಕು" ಎನ್ನುತ್ತಾರೆ ಜಾನ್.
ಅಮೆರಿಕಾದಲ್ಲಿ ನ್ಯೂಯಾರ್ಕ್ ಚಿತ್ರೀಕರಣ ಸಂದರ್ಭ ಜಾನ್ ಮತ್ತು ಕತ್ರಿನಾ ಕೈಫ್ ನಡುವೆ ಕಲಹ ಉಂಟಾಗಿತ್ತು ಎಂಬ ವದಂತಿಗಳು ಮಾಧ್ಯಮ ವಲಯದಲ್ಲಿ ಹಬ್ಬಿತ್ತು. ಇದು ನಿಜವಾಗಿದ್ದಲ್ಲಿ, ಇದು ನಟನೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, "ಖಂಡಿತಾ ಪರಿಣಾಮ ಬೀರುತ್ತದೆ! ಆದರೆ ಕತ್ರಿನಾ ಮತ್ತು ನಾನು ವೃತ್ತಿನಿರತರು. ನಮ್ಮಿಬ್ಬರಿಗೆ ಸರಿಹೋಗುವುದಿಲ್ಲ ಎಂಬುದು ತಪ್ಪು ವರದಿ. ಇದು ಹೇಗೆ ಉದಯಿಸಿತು ಎಂದು ನನಗೆ ತಿಳಿಯುತ್ತಿಲ್ಲ" ಎಂಬುದು ಜಾನ್ ಸ್ಪಷ್ಟೀಕರಣ.
ಬಿಪಾಶ ಬಸು ಮತ್ತು ಜಾನ್ ಒಟ್ಟಿಗೆ ನಟಿಸುತ್ತಾರ?
"ಬಿಪಾಶರೊಂದಿಗೆ ನಟಿಸಲು ನಾನು ಬಹಳ ಇಷ್ಟಪಡುತ್ತೇನೆ. ರೇಸ್ ಮತ್ತು ಬಚನಾ ಎ ಹಸೀನೊ ಚಿತ್ರಗಳಲ್ಲಿ ಅವರ ಅಭಿನಯವನ್ನು ನಾನು ಮೆಚ್ಚಿದ್ದೇನೆ. ನಾನು ಏನೂ ಆಗಿಲ್ಲದೇ ಇದ್ದಾಗ ಬಿಪಾಶ ನನ್ನೊಂದಿಗೆ ನಟಿಸಿದ್ದರು(ಜಿಸ್ಮ್ ಚಿತ್ರದಲ್ಲಿ). ಅವರೊಂದಿಗೆ ಮತ್ತೆ ನಟಿಸುವ ಅವಕಾಶ ದೊರಕಿದಲ್ಲಿ ಅದು ಹೆಮ್ಮೆಯ ವಿಷಯವಾಗಿರುತ್ತದೆ" ಎಂದು ಜಾನ್ ಹೇಳುತ್ತಾರೆ.