ಅತಿ ಕಿರಿಯ ವಯಸ್ಸಿನಲ್ಲಿ ಕ್ಯಾಮೆರವನ್ನು ಪ್ರೀತಿಸತೊಡಗಿದ, ಹದಿಹರೆಯದಲ್ಲೆ ಮಿಸ್ ಯುನಿವರ್ಸ್ ಕೀರೀಟ ತೊಟ್ಟು ನಂತರ ಬಾಲಿವುಡ್‌ಗೆ ಲಗ್ಗೆಯಿಟ್ಟು, ಪಡ್ಡೆಗಳ ನಿದ್ದೆ ಕದ್ದ ಪೋರಿ ಸುಶ್ಮಿತಾ ಸೇನ್ ಬುಧವಾರ ತಮ್ಮ 33ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಮಾಜಿ ವಾಯುಪಡೆಯ ಕಮಾಂಡರ್ ಶುಬೀರ್ ಸೇನ್ ಮತ್ತು ಜ್ಯುವೆಲ್ಲರಿ ಡಿಸೈನರ್ ಮತ್ತು ಫ್ಯಾಶನ್ ಅರ್ಟಿಸ್ಟ್, ಶುಭ್ರ ಸೇನ್ ದಂಪತಿಗಳ ಮಗಳಾಗಿ ಬಂಗಾಳಿ ಕುಂಟುಂಬದಲ್ಲಿ ಸುಶ್ಮಿತಾ1975ರ ನವೆಂಬರ್ 19ರಂದು ಜನಿಸಿದರು. ಸುಶ್ ಬೆಳೆದಿದ್ದೆಲ್ಲಾ ನವದೆಹಲಿಯಲ್ಲಿ. ಹಲವಾರು ವ್ಯಕ್ತಿಗಳ ಜೊತೆ ಸುಶ್ಮಿತಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಇದುವರೆಗೆ ಅವಿವಾಹಿತರಾಗಿರುವ ಸುಶ್ಮಿತಾ 2000ರಲ್ಲಿ ರೀನಿ ಎಂಬ ಹೆಣ್ಣುಮಗುವನ್ನು ಸಿಂಗಲ್ ಪೇರೆಂಟ್ ಆಗಿ ದತ್ತು ಪಡೆದಿದ್ದಾರೆ.
ಹದಿನೆಂಟರ ಹರೆಯದಲ್ಲಿ ಸುಶ್ಮಿತಾ ಸೇನ್, ಐಶ್ವರ್ಯ ರೈ ಅವರನ್ನು ಸೋಲಿಸಿ 1994ರ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಐಶ್ವರ್ಯ ರೈ ರನ್ನರ್ ಅಪ್ ಆಗಿದ್ದರು. ನಂತರ ಮಾನಾಲಿ ಫಿಲಿಫೈನ್ಸನಲ್ಲಿ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಸೇನ್ ಕಿರೀಟವನ್ನು ಮುಡಿಗೇರಿಸಿಕೊಂಡೆ ಮರಳಿದರು. ಮಿಸ್ ಯುನಿವರ್ಸ್ ಗೆದ್ದುಕೊಂಡ ಭಾರತದ ಸುಂದರಿಯರಲ್ಲಿ ಸುಶ್ಮಿತಾ ಸೇನ್ ಮೊದಲಿಗರು.
IFM
'ದಸ್ತಕ್' ಚಿತ್ರದ ಮೂಲಕ 1996ರಲ್ಲಿ ಸುಶ್ಮಿತಾ ಬಾಲಿವುಡ್‌ಗೆ ಅಡಿಯಿಟ್ಟರು. ಇದೇ ಸಂದರ್ಭ ಅವರು ತಮಿಳಿನಲ್ಲಿ ನಟಿಸಿದ್ದ 'ರಾತಚಂಗನ' ಚಿತ್ರ ಬಹುದೊಡ್ಡ ಹಿಟ್ ಎನಿಸಿತ್ತು. ಎರಡು ವರ್ಷಗಳ ನಂತರ ಅವರು ನಟಿಸಿದ' ಬಿವಿ ನಂಬರ್ ಒನ್' ಚಿತ್ರಕ್ಕಾಗಿ ಅವರು 1999ರ ಸಾಲಿನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡರು. ಇದೇ ವರ್ಷ ಪೋಷಕ ಪಾತ್ರ ವಿಭಾಗದಲ್ಲಯೇ ಸಿರ್ಫ್ ತುಮ್ ಚಿತ್ರಕ್ಕಾಗಿಯೂ ಅವರು ನಾಮಾಂಕಿತರಾಗಿದ್ದರು. ಬಾಕ್ಸ್ ಅಫೀಸ್‌ನಲ್ಲಿ ಯಶಸ್ವಿಯೆನಿಸಿದ 'ಅಂಖೆ' ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಉತ್ತಮ ಮಾತುಗಳು ಸಹ ಕೇಳಿಬಂದವು.
ಸುಶ್ಮಿತಾರ ಕೆರಿಯರ್‌ನ ಅತ್ಯಂತ ಹಿಟ್ ಚಿತ್ರವೆನಿಸಿದ್ದು 2004ರ 'ಮೈ ಹೂ ನಾ'. ಈ ಚಿತ್ರದಲ್ಲಿ ಸುಶ್ಮಿತಾ ಶಾರುಖ್ ಖಾನ್ ಜೊತೆ ನಟಿಸಿದ್ದರು.
IFM
'ಬಿವಿ ನಂ.1' ಚಿತ್ರದ ಪೋಷಕ ನಟಿ ಪಾತ್ರ ಸುಶ್ಮಿತಾರ ಮಡಿಲಿಗೆ ಹಲವಾರು ಪ್ರಶಸ್ತಿಗಳನ್ನು ತಂದಿತ್ತಿತ್ತು. ಫಿಲ್ಮಫೇರ್‌ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಅವಾರ್ಡ್ಸ್, ಝೀ ಸಿನಿ ಅವಾರ್ಡ್ಸ್‌ಗಳು 'ಬಿವಿ ನಂಬರ್ 1' ಚಿತ್ರಕ್ಕಾಗಿ ಸುಶ್ಮಿತಾ ಪಡೆದ ಪ್ರಶಸ್ತಿಗಳು. 2003ರಲ್ಲಿ 'ಫಿಲ್‌ಹಾಲ್' ಚಿತ್ರಕ್ಕಾಗಿ ಮತ್ತೊಮ್ಮೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಅವರು ಗಿಟ್ಟಿಸಿಕೊಂಡರು. ಬಾಲಿವುಡ್‌ನಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜೀವ್ ಗಾಂಧಿ ಪ್ರಶಸ್ತಿಯನ್ನು ಕೇಂದ್ರ ಸರಕಾರ ಸುಶ್ಮಿತಾರಿಗೆ ನೀಡಿದೆ.
ಇವಿಷ್ಟು ಸುಶ್ಮಿತಾ ಸೇನ್ ಬದುಕಿನ ಇಣುಕು ನೋಟ. ಸುಶ್ಮಿತಾರ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ನಮ್ಮವರೇ ಆದ ಸುಶ್ ಹುಟ್ಟುಹಬ್ಬಕ್ಕೆ ಶುಭಕೋರಬೇಡವೇ...