ಶಾರೂಕ್ ಜನಪ್ರಿಯತೆ ಹಾಲಿವುಡ್ ತಾರೆಗಳನ್ನೂ ಹಿಂದಿಕ್ಕಿದೆ. ಇವರ ಈ ಜನಪ್ರಿಯತೆ ಅವರಿಗೆ ದಿನ ಒಂದರ 18 ಲಕ್ಷರೂಪಾಯಿ ಬಾಡಿಗೆಯ ಅತ್ಯಂತ ದುಬಾರಿ ಕೊಠಡಿ ಒದಗುವ ಅವಕಾಶವನ್ನು ಲಭ್ಯವಾಗಿಸಿದೆ.
ಅತ್ಯಂತ ದುಬಾರಿ ಹಾಗೂ ಐಶಾರಾಮಿಯ ದುಬೈಯ ಅಟ್ಲಾಂಟಿಸ್ ಪಾಮ್ ಜುಮೆರಿಯಾದ ಆರಂಭಿಕ ಸಮಾರಂಭದಲ್ಲಿ ಇಲ್ಲಿ ತಂಗುವ ಅವಕಾಶ ಕಿಂಗ್ ಖಾನ್‌ಗೆ ಒದಗಿ ಬಂದಿತ್ತು. ಈ ಕೊಠಡಿ ಮೊದಲಿಗೆ ಟಾಕ್ ಶೋ ರಾಣಿ ಓಪ್ರಾ ವಿನ್ಫ್ರೆಗೆ ಅಂತ ಗೊತ್ತುಮಾಡಲಾಗಿತ್ತು. ಆದರೆ ಅವರು ಸಮಾರಂಭದಿಂದ ಹಿಂತೆಗೆದ ಕಾರಣ ಶಾರೂಕ್‌ಗೆ ನೀಡಲಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾರೂಕ್ ಅತ್ಯಂತ ಸುಪ್ರಸಿದ್ಧ ಸಿನಿಮಾ ತಾರೆ.
ದುಬೈಯ ಈ ಅಟ್ಲಾಂಟಿಸ್ ಪಾಮ್ ಜುಮೈರಾ ಎಂಬುದು ಮಾನವ ನಿರ್ಮಿತ ದ್ವೀಪವಾಗಿದ್ದು, ತಾಳೆಮರದ ಆಕಾರದಲ್ಲಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಎರಡು ಸಾವಿರಕ್ಕೂ ಅಧಿಕ ಸಿನಿಮಾ ತಾರೆಯರು, ಪಾಪ್ ತಾರೆಯರ, ರೂಪದರ್ಶಿಗಳು ಮತ್ತು ವಿಶ್ವಾದ್ಯಂತ ಕೋಟ್ಯಾಧಿಪತಿಗಳು ಭಾಗವಹಿಸಿದ್ದರು.
ಹಾಲಿವುಡ್ ದಂತಕತೆ ರಾಬರ್ಟ್ ಅವರಿಗೆ ಒದಗಿದ್ದು 11 ಲಕ್ಷರೂಪಾಯಿ ಬಾಡಿಗೆಯ ಸೂಟ್. ಈ ಜುಮೈರಾದಲ್ಲಿ ಒಂದು ಸೈಟ್ ಹೊಂದಿರುವ ನೋಬು ರೆಸ್ಟಾರೆಂಟ್ ಸರಣಿಯ ಪಾಲುದಾರ ರಾಬರ್ಟ್.
ಲಿಂಡ್ಸೆ ಲೋಹನ್ ಮತ್ತು ಚಾರ್ಲಿ ತೆರಾನ್ ಅವರುಗಳು ಲೋಸ್ಟ್ ಛೇಂಬರ್ಸ್‌ನಲ್ಲಿ ಏಳು ಲಕ್ಷರೂಪಾಯಿ ಕೊಠಡಿ ಪಡೆದಿದರು. ಈ ಅಟ್ಲಾಂಟಿಸ್ ರೆಸಾರ್ಟ್‌ನ ಕೊಠಡಿಗಳಿಂದ 65 ಸಾವಿರ ಶಾರ್ಕ್‌ಗಳು ಹಾಗೂ ಇತರ ಜಲಚರಗಳ ವೀಕ್ಷಣೆ ಅತಿಸುಂದರವಾಗಿರುತ್ತದೆ ಎಂದು ಡೇಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಉದ್ಘಾಟನ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಹಾಡುಗಾರ್ತಿ ಕಿಲೆ ಮಿನೋಗ್ ಅವರ ಹಾಡು ಮತ್ತು ಅವರ 113 ಮಂದಿಯ ನೃತ್ಯ ತಂಡ ನೀಡಿದ್ದ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು.
ಬಳಿಕ ಬೀಜಿಂಗ್ ಒಲಿಂಪಿಕ್ಸ್ ಆರಂಭದ ವೇಳೆ ಸಿಡಿಸಲಾಗಿದ್ದಕ್ಕಿಂತಲೂ ದೊಡ್ಡಮಟ್ಟದ ಸುಡುಮದ್ದುಗಳ ಆಕರ್ಷಕ ಪ್ರದರ್ಶನ ನೀಡಲಾಗಿತ್ತು. 100 ಕಂಪ್ಯೂಟರ್ ನಿರ್ದೇಶಿತ ರಾಕೆಟ್‌ಗಳ ಹಾರಾಟ ಸೇರಿದಂತೆ ಹತ್ತು ಲಕ್ಷ ರಾಕೆಟ್ ಹಾರಾಟ ಪ್ರದರ್ಶನ ಅತ್ಯಂತ ಆಕರ್ಷಕವಾಗಿದ್ದು, ಇದುವರೆಗಿನ ಸುಡುಮದ್ದು ಪ್ರದರ್ಶನದ ಇತಿಹಾಸದಲ್ಲೇ ಇದು ಅತಿ ದೊಡ್ಡ ಪ್ರದರ್ಶನವಾಗಿದೆ.
ಸಿನಿಮಾತಾರೆಯರಾದ ರಾಬರ್ಟ್ ಡಿ ನೀರೋ, ಚಾರ್ಲಿ ತೆರಾನ್, ಡೆಂಜಿಲ್ ವಾಶಿಂಗ್ಟನ್, ಮಿಸ್ಚಾ ಬಾರ್ಟನ್ ಮತ್ತು ಲಿಂಡ್ಸೆ ಲೋಹನ್, ರೂಪದರ್ಶಿಗಳಾದ ಅಗಿನೆಸ್ ಡೇನ್, ಪೆಟ್ರಾ ನೆಮ್ಕೋವಾ ಮತ್ತು ಯಾಸ್ಮಿನ್ ಲೆ ಬಾನ್, ಸಂಗೀತಗಾರರಾದ ಜಾನೆಟ್ ಜಾಕ್ಸನ್, ಲಿಲ್ಲಿ ಅಲೆನ್ ಮತ್ತು ಶಿರ್ಲೆ ಬಾಸ್ಸೆ, ಖ್ಯಾತ ಕ್ರೀಡಾಪಟುಗಳಾದ ಮೈಕೆಲ್ ಜೋರ್ಡಾನ್ ಮತ್ತು ಬೋರಿಸ್ ಬೆಕರ್, ದುಬೈನ ರಾಜಮನೆತನ ಸೇರಿದಂತೆ ಕೆಲವು ಸ್ಥಳೀಯ ಪ್ರಮುಖರೂ ಪಾಲ್ಗೊಂಡಿದ್ದರು.