ಅಮಿತಾಬ್ ಬಚ್ಚನ್ ಡಾನ್ ಆಗಿ ಹಲವಾರು ಚಿತ್ರಗಳಲ್ಲಿ ನಟಿಸಿರಬಹುದು ಆದರೆ ಮುಂಬಯಿಯನ್ನು ನಡುಗಿಸಿದ ಉಗ್ರರ ದಾಳಿಯು ಪಿಸ್ತೂಲನ್ನು ದಿಂಬಿನ ಕೆಳಗಿರಿಸಿ ಅವರು ನಿದ್ರಿಸುವಂತೆ ಮಾಡಿದೆ.
"ಕಳೆದ ರಾತ್ರಿ ಉಗ್ರರ ದಾಳಿಯ ಘಟನಾವಳಿಗಳು ನನ್ನ ಮುಂದೆ ಬಿಚ್ಚಿಕೊಂಡಾಗ, ಮೊದಲ ಬಾರಿಗೆ ನಾನೇನನ್ನೊ ಮಾಡಿದೆ ಮಲಗುವ ಮುನ್ನ ನಾನು ನನ್ನ ಪರವಾನಗಿ ಹೊಂದಿದ .32 ರಿವಾಲ್ವರ್ ಅನ್ನು ಹೊರತೆಗೆದೆ, ಅದನ್ನು ಲೋಡ್ ಮಾಡಿದೆ ಮತ್ತು ನನ್ನ ದಿಂಬಿನ ಕೆಳಗಿರಿಸಿದೆ" ಎಂದು ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಭದ್ರತಾ ಸಿಬ್ಬಂದಿಗಳು ಉಗ್ರರೊಂದಿಗೆ ಕಾದಾಡುತ್ತಿದ್ದಾಗ ಬಚ್ಚನ್ ತಮ್ಮ ಟಿವಿ ಪರದೆಗೆ ಅಂಟಿಕೊಂಡಿದ್ದರು.
"ಉಗ್ರರ ದಾಳಿಗೆ ಸಿಲುಕಿ ನಲುಗಿದ, ಅಮಾಯಕ ಮತ್ತು ಪೂರ್ಣವಾಗಿ ಅಭದ್ರರಾಗಿರುವ ನನ್ನ ದೇಶಬಾಂಧವರ ನೋಟ ಮತ್ತು ದುರ್ದೆಸೆ ನನಗೆ ಬಹಳ ನೋವುಂಟು ಮಾಡಿತು. ನಮ್ಮ ಭದ್ರತೆಯನ್ನು ನೋಡಿಕೊಳ್ಳಲು ನೇಮಿಸಲ್ಪಟ್ಟ ಆಧಿಕಾರಿ ವರ್ಗದ ನಿಷ್ಪಲತೆ ನನ್ನಲ್ಲಿ ರೋಷ ಮೂಡಿಸುತ್ತದೆ" ಎಂದು ಅಮಿತಾಬ್ ನಮ್ಮ ವ್ಯವಸ್ಥೆಯ ಹುಳಿಕಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
"ಬ್ರಿಲಿಯಂಟ್ ಕಮಾಂಡೊಗಳು ಮತ್ತು ಪೊಲೀಸ್ ಅಧಿಕಾರಿಗಳು ನಮಗಾಗಿ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟಿದ್ದಾರೆ. ನಾನು ಅವರಿಗೆ ಸೆಲ್ಯೂಟ್ ಮಾಡಬಹುದಷ್ಟೇ ಮತ್ತು ಕರ್ತವ್ಯದ ಕರೆಗೆ ಓಗೊಟ್ಟ ಅವರ ಪ್ರಾಮಾಣಿಕತೆಯನ್ನು ಗೌರವಿಸುತ್ತೇನೆ" ಎಂದು ಅಮಿತಾಬ್ ಬರೆದಿದ್ದಾರೆ.