ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಮತ್ತು ಅವರ ಪುತ್ರ-ಬಾಲಿವುಡ್ ನಟ ರಿತೇಶ್ ದೇಶ್‌ಮುಖ್‌ರೊಂದಿಗೆ ಉಗ್ರರ ದಾಳಿಗೆ ಗುರಿಯಾದ ತಾಜ್ ಮತ್ತು ಟ್ರೈಡೆಂಟ್ ಹೋಟೆಲ್‌ಗಳಿಗೆ ಭೇಟಿ ನೀಡಿ ಭಾರೀ ವಿವಾದಕ್ಕೆ ಎಡೆ ಮಾಡಿದ್ದ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಾವು ಮುಂಬಯಿ ಉಗ್ರರ ದಾಳಿಯ ಕುರಿತು ಯಾವುದೇ ಚಿತ್ರ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಅರ್.ಜಿ.ವಿ, "ಸಿಎಂ ನನ್ನನ್ನು ತಾಜ್‌ಗೆ ಆಹ್ವಾನಿಸಿದ್ದರು ಎಂಬ ಕೆಲವು ವರದಿಗಳಿವೆ. ಇಂತಹ ಯಾವುದೇ ವಿಷಯ ನಡೆದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಯಾವುದೇ ಸಂದರ್ಭದಲ್ಲೂ ನಾನು ಸಿಎಂರೊಂದಿಗೆ ನೇರ ಪರಿಚಯವನ್ನು ಹೊಂದಿಲ್ಲ. ಭೇಟಿಯ ಸಂದರ್ಭದಲ್ಲಿ ನನಗೆ ಚೆನ್ನಾಗಿ ಪರಿಚಯವಿರುವ ರಿತೇಶ್ ಜೊತೆಗಿದ್ದೆ. ಅಲ್ಲಿ ಟಿವಿ ಕವರೇಜ್‌ಗಳು ತೋರದಿರುವ ಯಾವುದೇ ವಿಶೇಷ ವಿಷಯವನ್ನು ನಾನು ಗಮನಿಸಲಿಲ್ಲ. ಅಲ್ಲದೇ ಈ ಬಗ್ಗೆ ಚಿತ್ರ ಮಾಡುವ ಯಾವುದೇ ಯೋಚನೆಯೂ ನನಗಿಲ್ಲ. ಈ ಬಗ್ಗೆ ಯಾರೊಬ್ಬರು ಬೇರೆ ರೀತಿಯ ಅರ್ಥ ಕಲ್ಪಿಸಬಾರದು ಮತ್ತು ಒಂದಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಬೇಕಾಂದಂತಹ ಈ ಸಂದರ್ಭದಲ್ಲಿ ಇದಕ್ಕೆ ರಾಜಕೀಯ ಲೇಪ ಕೊಡಬಾರದು" ಎಂದು ಹೇಳಿದ್ದಾರೆ.
ಈ ಬಗ್ಗೆ ವರ್ಮಾರ ಕೆಲ ಸಹವರ್ತಿಗಳ ಅಭಿಪ್ರಾಯ: ರಿತೇಶ್ ಸಿಧ್ವಾನಿ: ಮುಖ್ಯಮಂತ್ರಿಗಳ ಮತ್ತು ಈ ಘಟನೆಗೆ ನೇರವಾಗಿ ಸಂಬಂಧಪಟ್ಟವರ ಹೊರತಾಗಿ, ಬೇರೆ ಯಾರೊಬ್ಬರು ಅಲ್ಲಿಗೆ ಹೋಗಬಾರದಾಗಿತ್ತು. ನ್ಯೂಯಾರ್ಕ್‌ನ 9/11 ದಾಳಿಯ ಸಂದರ್ಭ ಒಂದು ವಾರಕ್ಕಿಂತಲೂ ಹೆಚ್ಚಿನ ಕಾಲ ಯಾರಿಗೂ ಅಲ್ಲಿ ಪ್ರವೇಶಿಸುವ ಅನುಮತಿ ಇರಲಿಲ್ಲ.
ಕುನಾಲ್ ಕೊಹ್ಲಿ: ಒಬ್ಬ ಚಿತ್ರ ತಯಾರಕ ವೀಕ್ಷಣೆಗೆ ತೆರಳುವುದಕ್ಕೆ, ಇದು ಟೆರರ್ ಟೂರಿಸಮ್‌ನ ಸಮಯವಲ್ಲ. ಸಿಎಂ ಅವರನ್ನು ಜೊತೆಗೆ ಕರೆದೊಯ್ಯಬಾರದಿತ್ತು.
ಅಬ್ಬಾಸ್ ಟೆರೈವಾಲಾ: ಇದು ಅತ್ಯಂತ ಮೂರ್ಖತನದ ವರ್ತನೆ. ರಾಮ್ ಗೋಪಾಲ್ ವರ್ಮಾ ಅಲ್ಲಿ ಅಧ್ಯಯನ ನಡೆಸಲು ತೆರಳಿದ್ದರೇ? ಇದು ಅಸಭ್ಯತನ.
ವಿಕ್ರಂ ಭಟ್: ಇಂತಹ ಸಂದರ್ಭದಲ್ಲಿ ಚಿತ್ರ ನಿರ್ದೇಶಕನೊಬ್ಬನನ್ನು ಜೊತೆಗೆ ಕರೆದೊಯ್ದಿರುವುದು ಮುಖ್ಯಮಂತ್ರಿಯಿಂದ ಅತ್ಯಂತ ಬೇಜಾವಬ್ದಾರಿತನದ ವರ್ತನೆ. ನಾನು ಅವರನ್ನು ದೂಷಿಸುತ್ತೇನೆ ವರ್ಮಾರನ್ನಲ್ಲ.
ರಮೇಶ್ ಸಿಪ್ಪಿ: 'ಒಹ್ ಮೈ ಗಾಡ್' ಎಂಬುದು ನನ್ನ ಪ್ರಥಮ ಪ್ರತಿಕ್ರಿಯೆ. ಸ್ಥಳಕ್ಕೆ ರಾಮು ಭೇಟಿ ನೀಡಿದ್ದು ತಪ್ಪೆಂದು ನಾನು ಹೇಳುವುದಿಲ್ಲ ಆದರೆ ಅವರು ಹೋದ ರೀತಿ ಸ್ವಲ್ಪವೂ ಸರಿಯಲ್ಲ.