ಮುಂಬಯಿ ಮೇಲಿನ ಉಗ್ರರ ದಾಳಿ ಬಾಲಿವುಡ್ ವಲಯದಲ್ಲಿ ಉಂಟುಮಾಡಿರುವ ತಲ್ಲಣದಿಂದಾಗಿ ಸ್ಟಾರ್ಗಳ ಸಂಭಾವನೆಗಳು ಇಳಿಮುಖವಾಗುವುದು ಅನಿವಾರ್ಯವಾಗಿದೆ. ಮತ್ತು ಈ ನಿಟ್ಟಿನಲ್ಲಿ ಸ್ವಂ ಪ್ರೇರಿತರಾಗಿ ಮೊದಲ ಹೆಜ್ಜೆ ಇಟ್ಟವರು ಎ-ಪಟ್ಟಿಯ ಸ್ಟಾರ್ ಸಂಜಯ್ ದತ್.
ಇತ್ತೀಚಿಗಷ್ಟೇ ತಮ್ಮ ಸಂಭಾವನೆ ಏರಿಸಿದ್ದ ಮುನ್ನಾಭಾಯಿ, ಈಗ ಅದನ್ನು ಕಡಿತಗೊಳಿಸಿ 15ಕೋಟಿಗಿಳಿಸಿದ್ದಾರೆ.
ಸಂಜಯ್ರನ್ನು ಸಂಪರ್ಕಿಸಿದಾಗ "ಈ ಬಾರಿ ಆರ್ಥಿಕ ಕುಸಿತ ದೊಡ್ಡ ಪ್ರಮಾಣದಲ್ಲಿ ಬಾಲಿವುಡ್ ಅನ್ನು ತಟ್ಟಿದೆ. ನಾವೆಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಮತ್ತು ನಮ್ಮ ಬೆಲೆಯನ್ನು ಇಳಿಸಬೇಕಾಗುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಿರ್ಧಾರವನ್ನು 172ಜನರನ್ನು ಬಲಿ ತೆಗೆದುಕೊಂಡ ಮುಂಬಯಿ ದಾಳಿಯ ನಂತರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
IFM
"ಮುಂಬಯಿ ದಾಳಿಯ ನಂತರ ಜನ ಶಾಪಿಂಗ್ ಮಾಲ್ ಮತ್ತು ಸಿನಿಮಾ ಮಂದಿರಗಳಿಗೆ ತೆರಳುವುದನ್ನು ಬಹಳ ಮಟ್ಟಿಗೆ ಕಡಿಮೆಗೊಳಿಸಿದ್ದಾರೆ. ಆದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಚಿತ್ರೋದ್ಯಮದಲ್ಲಿರುವ ನಾವೆಲ್ಲರೂ ಒಂದು ಕುಟುಂಬದಂತೆ ಮತ್ತು ಅತ್ಯಂತ ತೊಂದರೆಯ ಈ ಸಂದರ್ಭದಲ್ಲಿ ನಮ್ಮ ಪರಿವಾರ ಮೇಲೆದ್ದು ನಿಲ್ಲುವಂತೆ ನಾವು ಸಹಕರಿಸಬೇಕಾಗುತ್ತದೆ" ಎಂದು ಸಂಜಯ್ ಹೇಳಿದ್ದಾರೆ.
ನಟನಾಗಿ ತಮ್ಮ ನಟನಾ ಸಾಮರ್ಥ್ಯಕ್ಕೆ ಸವಾಲೊಡ್ಡುವ ಪಾತ್ರಗಳಿರುವುದಾದರೆ ನಿರ್ಮಾಪಕರ ಶಕ್ತಿಗನುಸಾರವಾದ ಸಂಭಾವನೆಗೆ ದುಡಿಯಲು ಸಂಜು ಸಿದ್ಧ.