ಪ್ರಿಯಾಂಕ ಚೋಪ್ರಾ ಬಾಲಿವುಡ್‌ನ ಹಲವಾರು ದೊಡ್ಡ ಬ್ಯಾನರ್‌ಗಳ ಚಿತ್ರಗಳನ್ನು ಮಾಡಿದ್ದಾರೆ, ಆದರೆ ಯಶ್ ರಾಜ್ ಬ್ಯಾನರ್ ಅವರನ್ನು ದೂರವೇ ಇಟ್ಟಿತ್ತು. ಇತರ ಎಲ್ಲಾ ನಟರಂತೆ ಪ್ರಿಯಾಂಕರಿಗೂ ಈ ಬ್ಯಾನರ್‌ನಡಿ ಚಿತ್ರ ಮಾಡುವ ಹಂಬಲವಿತ್ತು, ಈಗ ಅದು ಪೂರ್ಣವಾಗುತ್ತಿದೆ. ಯಶ್ ರಾಜ್ ಬ್ಯಾನರ್‌ನ ಮುಂದಿನ ಚಿತ್ರಕ್ಕೆ ಪ್ರಿಯಾಂಕ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆಧೀಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಫ್ಯಾಶನ್ ಮತ್ತು ದೋಸ್ತಾನ ಚಿತ್ರಗಳ ನಂತರ ಪ್ರಿಯಾಂಕರ ಚಿತ್ರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳು ಕಾಣಿಸಿಕೊಂಡಿವೆ. ಫ್ಯಾಶನ್‌ನಲ್ಲಿ ಪ್ರಿಯಾಂಕರ ಅಭಿನಯ ಕಲೆ ವ್ಯಕ್ತವಾದರೆ, ದೋಸ್ತಾನದಲ್ಲಿ ಅವರು ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿಕೊಂಡರು. ಈ ಎರಡೂ ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ಗೆದ್ದು ನಿರ್ಮಾಪಕರ ಗಲ್ಲಾಪೆಟ್ಟಿಗೆಯನ್ನು ತುಂಬಿದವು. ಬಾಕ್ಸ್ ಅಫೀಸ್‌ನಲ್ಲಿ ಹಿಟ್ ಎನಿಸಿಕೊಂಡ ಕಲಾವಿದರನ್ನೇ ಯಶ್ ರಾಜ್ ಬ್ಯಾನರ್ ತಮ್ಮ ಚಿತ್ರಗಳಿಗೆ ಆರಿಸುತ್ತಾರೆ. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಪ್ರಿಯಾಂಕರನ್ನು ಆರಿಸಲಾಗಿದೆ.
ಯಶ್‌ರಾಜ್ ಫಿಲಂಸ್‌ನ ಚಿತ್ರದ ಕುರಿತು ಪ್ರಿಯಾಂಕ ಗೊಂದಲದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಇಷ್ಟು ದೊಡ್ಡ ಬ್ಯಾನರ್ ಇದೆ, ಅದೇ ಇನ್ನೊಂದು ಕಡೆ ಈ ಚಿತ್ರದ ನಾಯಕ ಉದಯ್ ಚೋಪ್ರಾ. ನಾಯಕಿಯಾಗಿ ಪ್ರಿಯಾಂಕ ಮಟ್ಟ ಎತ್ತರಕ್ಕೇರಿದೆ, ಇತ್ತ ಉದಯ್ ಆರಕ್ಕೇರದ ಮೂರಕ್ಕಿಳಿಯದ ನಟ. ಅವರಂತಹ ಫ್ಲಾಪ್ ನಾಯಕನೊಂದಿಗೆ ನಟಿಸುವುದು ಪ್ರಿಯಾಂಕ ಕೆರಿಯರ್ ದೃಷ್ಟಿಯಿಂದ ಸರಿಕಾಣಿಸುತ್ತಿಲ್ಲ. ಆದರೆ ಯಶ್‌ರಾಜ್ ಬಳಗಕ್ಕೆ ಎಂಟ್ರಿಯಾಗುವ ಅವಕಾಶವನ್ನು ಪ್ರಿಯಾಂಕ ಕಳೆದುಕೊಳ್ಳಲು ಬಯಸುತ್ತಿಲ್ಲ.
ಉದಯ್ ಪೂರ್ಣಪ್ರಮಾಣದಲ್ಲಿ ನಾಯಕರಾಗಿದ್ದ ಯಾವುದೇ ಚಿತ್ರ ಗೆದ್ದಿಲ್ಲ. ಧೂಮ್ ಸರಣಿಯಲ್ಲಿ ಅಭಿಷೇಕ್, ಜಾನ್, ಹೃತಿಕ್, ಐಶ್ವರ್ಯ ಮುಂತಾದ ಸ್ಟಾರ್ ಕಲಾವಿದರೊಂದಿಗೆ ಉದಯ್ ಅಷ್ಟರ ಮಟ್ಟಿಗೆ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿಲ್ಲ. ಅವರು ಉತ್ತಮ ನಟರೂ ಅಲ್ಲ, ಸ್ಟಾರ್‌ಗಿರಿಯೂ ಇಲ್ಲ. ಆದರೆ ಅವರ ಸೋದರ ಆದಿತ್ಯ ಚೋಪ್ರಾಗೆ ತಮ್ಮನಲ್ಲಿ ಇನ್ನೂ ವಿಶ್ವಾಸವಿದೆ. ಅವರು ಉದಯ್ ಹೆಸರಿನಲ್ಲಿ ಇನ್ನೊಮ್ಮೆ ರಿಸ್ಕ್ ತೆಗೆದುಕೊಳ್ಳಲು ತಯಾರಾಗಿದ್ದಾರೆ.
IFM
ಉದಯ್‌ರ ಕೆರಿಯರ್ ಅರಳಿಸುವ ಜವಾಬ್ದಾರಿಯನ್ನು ಆದಿತ್ಯ ಚೋಪ್ರಾ ಜುಗಲ್ ಹಂಸರಾಜ್‌ಗೆ ಒಪ್ಪಿಸಿದ್ದಾರೆ. ಇತ್ತೀಚೆಗಷ್ಟೇ ಯಶ್‌ರಾಜ್ ಬ್ಯಾನರ್‌ನಡಿ ರೋಡ್ ರೋಮಿಯೊ ಹೆಸರಿನ ಫ್ಲಾಫ್ ಫಿಲ್ಮ್ ನೀಡಿದ್ದ ಜುಗಲ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜುಗಲ್, ಆದಿತ್ಯರ ಆತ್ಮೀಯರು ಎನ್ನಲಾಗುತ್ತದೆ.
ಮೂಲಗಳ ಪ್ರಕಾರ ಉದಯ್‌ಗೆ ನಾಯಕಿಯಾಗುವ ಪ್ರಸ್ತಾವನೆಯನ್ನು ಆನೇಕ ಸಣ್ಣಸಣ್ಣ ನಾಯಕಿಯರಿಗೂ ನೀಡಲಾಗಿತ್ತು ಆದರೆ ಅವರು ತಿರಸ್ಕರಿಸಿದ್ದರು. ಕೊನೆಗೆ ಯಶ್‌ರಾಜ್‌ರ ಚಿತ್ರ ಮಾಡಲು ಬಹಳ ಸಮಯದಿಂದ ಕಾಯುತ್ತಿರುವ ಪ್ರಿಯಾಂಕರನ್ನು ಚಿತ್ರಕ್ಕೆ ಆರಿಸಲಾಗಿದೆ.