ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ನಂತರ ಈಗಲೂ ಮುಂಬಯಿ ನಿವಾಸಿಗಳು ಸಿನಿಮಾ ಮಂದಿರಕ್ಕೆ ತೆರಳುವ ಮೂಡ್‌ಗೆ ಮರಳಿಲ್ಲ, ಆದರೆ ಚಿತ್ರಪ್ರೇಮಿಗಳು, ಅದರಲ್ಲೂ ಹೆಚ್ಚು ನಿರ್ದಿಷ್ಟವಾಗಿ ಶಾರುಖ್ ಖಾನ್ ಅಭಿಮಾನಿಗಳು ಅವರ ಬಹುನಿರೀಕ್ಷಿತ ಚಿತ್ರ 'ರಬ್ನೆ ಬನಾ ದಿ ಜೋಡಿ'ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಚಿತ್ರ ಅತ್ಯುತ್ತಮವಲ್ಲದಿದ್ದರೂ ಗೌರವಾನ್ವಿತ ಆರಂಭ ಕಂಡಿದೆ.
ಮುಂಬಯಿಯಲ್ಲಿ ಆರಂಭಿಕ ಕಲೆಕ್ಷನ್‌ಗಳು 70 ರಿಂದ 80 ಪ್ರತಿಶತದಷ್ಟಿತ್ತು ಮತ್ತು ಇತರೆಡೆ ಇನ್ನೂ ಉತ್ತಮವಾಗಿತ್ತು. ಉತ್ತರ ಭಾರತದ ಹಲವು ಚಿತ್ರಮಂದಿರಗಳಲ್ಲಿ ನೂರು ಪ್ರತಿಶತ ಟಿಕೆಟ್‌ಗಳು ಮಾರಾಟವಾದ ವರದಿಗಳಿವೆ.
ಇತ್ತೀಚಿಗೆ ಸತತ ಸೋಲುಗಳನ್ನುಂಡು ಆರ್ಥಿಕ ನಷ್ಟ ಎದುರಿಸುತ್ತಿದ್ದ ಯಶ್ ರಾಜ್ ಫಿಲಮ್ಸ್ ಇದಕ್ಕಿಂತ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ.
ಒಂದೇ ಮಾತಿನಲ್ಲಿ ಹೇಳುವುದಾದರೆ 'ರಬ್ನೆ ಬನಾ ದಿ ಜೋಡಿ' ಯಶ್ ರಾಜ್ ಫಿಲಮ್ಸ್‌ನ ಪ್ರತಿಷ್ಠೆಯನ್ನು ಪುನಃ ಪ್ರತಿಷ್ಠಾಪಿಸಿದೆ. ಚಿತ್ರೋಧ್ಯಮ ಬಹುಮಂದಿ ಹೇಳುವಂತೆ ಇದರ ಶ್ರೇಯ ಸಲ್ಲಬೇಕಾದ್ದು ಶಾರುಖ್ ಖಾನ್ ಮತ್ತು ಆದಿತ್ಯ ಚೋಪ್ರಾ ಜೋಡಿಗೆ. ಈ ಜೋಡಿ ಈ ಹಿಂದೆ ಎಲ್ಲಾ ಕಾಲದ ಬಹುದೊಡ್ಡ ಹಿಟ್‌ಗಳಲ್ಲಿ ಒಂದಾದ 'ದಿಲ್‌ವಾಲೇ ದುಲ್ಹನಿಯಾ ಲೇಜಾಯೆಂ'ಗೆ ಚಿತ್ರ ನೀಡಿದ್ದರು.
'ರಬ್ನೆ ಬನಾ ದಿ ಜೋಡಿ' ಈ ವರ್ಷ ಶಾರುಖ್‌ರ ಏಕೈಕ ಬಿಡುಗಡೆ. ಇದಲ್ಲದೆ ಎಂಟು ವರ್ಷಗಳ ನಂತರ ಶಾರುಖ್ ಮತ್ತು ಆದಿತ್ಯ ಚೋಪ್ರಾ ಮತ್ತೆ ಒಂದಾಗಿದ್ದಾರೆ. ಕೊನೆಯ ಬಾರಿಗೆ 'ಮೊಹಬ್ಬತೇ' ಚಿತ್ರ ನೀಡಿದ್ದರು.
ಅಮೀರ್ ಖಾನ್‌ರ 'ಗಜನಿ' ಬಿಡುಗಡೆಗೆ ಮೊದಲು ಎರಡು ವಾರಗಳ ಕಾಲ ಉತ್ತಮ ಓಟ ನಡೆಸುವ ಅವಕಾಶ ಯಶ್ ರಾಜ್ ಫಿಲಮ್ಸ್ ಬಳಿ ಇದೆ. ಆದರೆ 'ಗಜನಿ' ಬಿಡುಗಡೆ ವೇಳೆಗೆ 'ರಬ್ನೆ...' ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುತ್ತದೆ ಮತ್ತು ಸೂಪರ್ ಹಿಟ್ ಎಂದು ಘೋಷಿತವಾಗಿರುತ್ತದೆ ಎಂದು ಟ್ರೇಡ್ ಅನಾಲಿಸ್ಟ್ ಐ.ಎಂ. ಪನ್ನು ಹೇಳುತ್ತಾರೆ.