ಬಹುನಿರೀಕ್ಷಿತ ಬಾಲಿವುಡ್ ಚಿತ್ರ 'ಗಜನಿ'ಗೆ ಮದ್ರಾಸ್ ಉಚ್ಛ ನ್ಯಾಯಾಲಯ ಮಂಗಳವಾರ ವಿಧಿಸಿದ್ದ ತಡೆಯಾಜ್ಞೆಯನ್ನು ಇಂದು ತೆರವುಗೊಳಿಸಿದ್ದು, ಗುರುವಾರ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ. ಅಮೀರ್ ಖಾನ್, ಆಸಿನ್ ತಾರಾಗಣವಿದ್ದ ಈ ಚಿತ್ರ ಜಗತ್ತಿನಾದ್ಯಂತದ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿತ್ತು.
ನ್ಯಾಯಮೂರ್ತಿ ವಿ. ಧನಪಾಲನ್ ಮತ್ತು ಎಂ. ಸತ್ಯನಾರಾಯಣನ್ ನೇತೃತ್ವದ ವಿಭಾಗೀಯ ಪೀಠವು ತಡೆಯಾಜ್ಞೆಯನ್ನು ಅಮಾನತ್ತಿನಲ್ಲಿಟ್ಟಿದ್ದು, 'ಗಜನಿ' ನಿರ್ಮಾಪಕರಾದ ಅಲ್ಲು ಎಂಟರ್ಟೈನ್ ಪ್ರೈವೆಟ್ ಲಿಮಿಟೆಡ್‌ನ ಭಾಗವಾದ ಎಂ.ಎಸ್. ಗೀತಾ ಆರ್ಟ್ಸ್ ಐದು ಕೋಟಿ ರೂಪಾಯಿಗಳ ಠೇವಣಿಯನ್ನಿಡಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತು.
'ಗಜನಿ'ಯ ತಮಿಳು ನಿರ್ಮಾಪಕರು, "ಹಿಂದಿ ಅವತರಣಿಕೆಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಮತ್ತು ತನಗೆ ಮೂಲಧನ ಸಂದಾಯವಾಗಿಲ್ಲ" ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ರೀತಿ ಮುಂಬೈಯಲ್ಲೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಚಿತ್ರ ನಿಗದಿಯಂತೆ ನಾಳೆ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
ಗೀತಾ ಆರ್ಟ್ಸ್ ಮಾಲಕರು ಖಾಲಿ ಸ್ಟಾಂಪ್ ಕಾಗದದ ಮೇಲೆ ನನ್ನ ಸಹಿ ತೆಗೆದುಕೊಂಡು ನಾನು ಅವರಿಗೆ ಚಿತ್ರದ ಎಲ್ಲಾ ಹಕ್ಕನ್ನು ನೀಡುವುದಕ್ಕೆ ಒಪ್ಪಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಎಪ್ರಿಲ್ 2008ರಿಂದ ಮದ್ರಾಸ್ ಹೈ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿತ್ತು ಮತ್ತು ದೇವರ ದಯೆಯಿಂದ ಇಂದು ತೀರ್ಪು ಹೊರಬಿದ್ದಿದೆ. ಇದುವರೆಗೆ, ಅಪಾದಿತರು ನನಗೆ ಕೇವಲ 1.6 ಕೋಟಿ ಮೊತ್ತವನ್ನು ಪಾವತಿಸಿದ್ದಾರೆ. ಆದರೆ ಅವರು ಮೂಲ ಮತ್ತು ತೆಲುಗು ಅವೃತ್ತಿಗಳಿಂದ ಡಜನ್‌ಗಟ್ಟಲೆ ಕೋಟಿಗಳನ್ನು ಗಳಿಸಿಕೊಂಡಿದ್ದಾರೆ. ಇದನ್ನು ಇತ್ಯರ್ಥಗೊಳಿಸುವ ನನ್ನ ವಿನಯಪೂರ್ವಕ ಮನವಿಯನ್ನು ಅವರು ಒಪ್ಪಲಿಲ್ಲ. ಈ ಚಿತ್ರದ ಮೇಲೆ 120 ಕೋಟಿ ರೂಪಾಯಿ ಹೂಡಲಾಗಿದೆ. ನನಗೆ ಮೋಸ ಮಾಡಲಾಗಿದೆ ಎಂದು ತಮಿಳು 'ಗಜನಿ' ನಿರ್ಮಾಪಕರಾದ ಚಂದ್ರಶೇಖರನ್ ಆರೋಪಿಸಿದ್ದರು.