ಸೈಫ್ ಮತ್ತು ಕರೀನಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಈ ಹಿಂದೆ ಹಲವಾರು ಬಾರಿ ಸುದ್ದಿಯಾಗಿತ್ತು. ಜೋಡಿಯ ನಡುವೆ ಇಂತಹುದೆಲ್ಲಾ ಸಾಮಾನ್ಯ ಬಿಡಿ ಎಂದು ತಳ್ಳಿ ಹಾಕುವ ವಿಚಾರ ಇದಾದರೂ ಎಷ್ಟು ದಿನ ಹೀಗೇ ನಡೆಯಬಹುದಲ್ಲವೇ? ಹೌದು, ಬಾಲಿವುಡ್ ಮೂಲಗಳ ಪ್ರಕಾರ ಈ ಜೋಡಿಯ ನಡುವಿನ ಕಂದಕ ಹೆಚ್ಚಾಗುತ್ತಿದ್ದು, ಶೀಘ್ರವೇ ಬೇರ್ಪಡಲಿದ್ದಾರೆ.
ಸಣ್ಣ ಸಣ್ಣ ವಿಚಾರಗಳಿಗೂ ಸೈಫ್ ಅಲಿ ಖಾನ್ ಮೇಲೆ ನಮ್ಮ ಕರೀನಾ ಕಪೂರ್ ಸಿಡುಕುತ್ತಿದ್ದಾಳಂತೆ. ಇತ್ತೀಚೆಗೆ ಸೈಫ್ ನಾಯಕನಾಗಿರುವ ಚಿತ್ರವೊಂದಕ್ಕಾಗಿ ಕರೀನಾ ಬದಲಿಗೆ ದೀಪಿಕಾ ಪಡುಕೋಣೆಯನ್ನು ಆರಿಸಿದ್ದರಿಂದ ಕುಲುಮೆಯಂತಾಗಿದ್ದಾಳಂತೆ ಪ್ರೇಯಸಿ.
ಆದರೆ ಇದೆಲ್ಲವನ್ನೂ ಬದಿಗೆ ಸರಿಸಿ ಹಾಕುವ ಸೈಫ್ ಮತ್ತೊಂದು ಹಕ್ಕಿಯ ಬೆನ್ನು ಬಿದ್ದಿದ್ದಾನೆ ಎಂಬ ಸುದ್ದಿಗಳೂ ಇವೆ. ಕರೀನಾಳ ನಕರಾಗಳನ್ನು ಸಹಿಸಿಕೊಳ್ಳಲಾಗದೆ ನಿರ್ಲಕ್ಷ್ಯ ಮಾಡುವ ಸ್ಥಿತಿ ಅವನದಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆರೋಗ್ಯವೂ ಆಗಾಗ ಕೈ ಕೊಡುತ್ತಿದೆ. ಕರೀನಾ-ಪಡುಕೋಣೆ ಪ್ರಕರಣದ ಬಗ್ಗೆ ಮಾತನಾಡುತ್ತಾ ಆತ, "ಆ ಪಾತ್ರ ದೀಪಿಕಾಗೆ ಹೇಳಿದಂತಿದೆ ಮತ್ತು ಅದು ನನ್ನ ನಿರ್ಧಾರವಲ್ಲ. ಬಹುಶಃ ನಮ್ಮ ವ್ಯವಹಾರದ ವಿರೋಧಿಗಳು ಇಂತಹ ಸುದ್ದಿಗಳನ್ನು ಹರಡಿಸುತ್ತಿರಬಹುದು. ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಬಂದಿಲ್ಲ. ನಾವಿನ್ನೂ ಒಟ್ಟಿಗಿದ್ದೇವೆ" ಎಂದೆಲ್ಲಾ ಹೇಳಿಕೊಂಡಿದ್ದಾನೆ.
ಕರೀನಾ ಮಾತ್ರ ತುಟಿ ಬಿಚ್ಚುತ್ತಿಲ್ಲ. "ನಾನು ಈ ವರ್ಷ ನನ್ನ ಖಾಸಗಿ ವಿಚಾರಗಳನ್ನು ಹೊರಗೆ ಮಾತನಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಸೈಫ್ ಬಗ್ಗೆ ನನ್ನಲ್ಲಿ ಯಾವುದೇ ಉತ್ತರವಿಲ್ಲ" ಎಂದು ಪ್ರಶ್ನೆ ಕೇಳಿದವರ ಬಾಯಿಗೆ ಕಡುಬು ತಳ್ಳಿದ್ದಾಳೆ.
ಇರಲಿ ಬಿಡಿ... ಹೊಗೆ ಕಾಣಿಸಿಕೊಂಡ ಮೇಲೆ ಬೆಂಕಿ ಕಾಣಿಸಲೇ ಬೇಕು. ಸುಟ್ಟು ಕರಕಲಾದ ಮೇಲೆ ತಿಳಿಯದಿದ್ದರೆ ಸಾಕು.. ಅಷ್ಟೇ.. ಏನಂತೀರಾ?