ಅಭಿಷೇಕ್ ಬಚ್ಚನ್, ವಿಕ್ರಮ್, ಐಶ್ವರ್ಯಾ ರೈ ನಟಿಸುತ್ತಿರುವ ಮಣಿರತ್ನಂ ನಿರ್ದೇಶನದ 'ರಾವಣ್' ಚಿತ್ರ 'ರಾಮಾಯಣ'ವನ್ನು ಅವಲಂಭಿಸಿದ ಚಿತ್ರವಲ್ಲವೇ? ಮೂಲಗಳ ಪ್ರಕಾರ 'ರಾಮಾಯಣ'ಕ್ಕೂ ಮಣಿರತ್ನಂ 'ರಾವಣ'ನಿಗೂ ಯಾವುದೇ ಸಂಬಂಧವಿಲ್ಲವಂತೆ.
"ರಾಮಾಯಣ ಮಹಾಕಾವ್ಯಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಆಧುನಿಕತೆಯ ಕಥೆ ಹೊಂದಿರುವ ಚಿತ್ರ" ಎಂದು ಮೂಲವೊಂದು ತಿಳಿಸಿದೆ. ಆದರೆ ತನ್ನ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಕಥೆಯನ್ನು ಗೌಪ್ಯವಾಗಿಟ್ಟಿರುವ ನಿರ್ದೇಶಕ ಮಣಿರತ್ನಂ ತನ್ನ ಚಿತ್ರದ ಚಿತ್ರೀಕರಣವನ್ನು ಕೂಡ ಮುಂಬೈಯಿಂದ ಹೊರಗೆ ಹೆಚ್ಚು ಮಾಡುತ್ತಿದ್ದಾರೆ. ಕೇರಳ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚುಕಡಿಮೆ ಶೂಟಿಂಗ್ ಮಾಡಲಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.
ಹಿಂದಿ ಅವತರಣಿಕೆಯಲ್ಲಿ ಆಭಿಷೇಕ್ ಬಚ್ಚನ್ ಹಾಗೂ ತಮಿಳಿನಲ್ಲಿ ವಿಕ್ರಮ್ ನಾಯಕರಾಗಿರುತ್ತಾರೆ. ಎರಡರಲ್ಲೂ ನಾಯಕಿ ತೌಳವ ಸುಂದರಿ ಐಶ್ವರ್ಯಾ ರೈ. ಹಿಂದಿಯಲ್ಲಿ 'ರಾವಣ' ಹಾಗೂ ತಮಿಳಿನಲ್ಲಿ 'ಅಶೋಕವನಂ' ಹೆಸರಿನಲ್ಲಿ ಚಿತ್ರ ತಯಾರಾಗುತ್ತಿದೆ.
ಆದರೆ ಮತ್ತೊಂದು ವರದಿ ಬೇರೆಯೇ ಕಥೆ ಹೇಳುತ್ತದೆ. ಅದರ ಪ್ರಕಾರ ಇದು ರಾಮಾಯಣದ ಕಥೆಯಲ್ಲದಿದ್ದರೂ ಅದೇ ರೀತಿಯಲ್ಲಿರುತ್ತದೆ. ರಾಮನ ಪಾತ್ರವನ್ನು ವಿಕ್ರಮ್ ಮಾಡುತ್ತಾರೆ. ಅಭಿಷೇಕ್ ಬಚ್ಚನ್ ರಾವಣನಾಗಿರುತ್ತಾರೆ ಎಂದೂ ಹೇಳಲಾಗುತ್ತದೆ. ಮತ್ತೊಂದು ಕಡೆ ವಿಕ್ರಮ್ ರಾಮನ ಪಾತ್ರ ಹಾಗೂ ಪೃಥ್ವಿರಾಜ್ ಸುಕುಮಾರನ್ ರಾವಣನ ಪಾತ್ರ... ರಾವಣನ ಪಾತ್ರ ವಿಕ್ರಮ್ ಮಾಡುತ್ತಾರೆ ಎಂದಿದೆ. ಹಾಗಾಗಿ ಇವ್ಯಾವುವೂ ಸ್ಪಷ್ಟವಿಲ್ಲ. ಹೇಗಿದ್ದರೂ ಸೀತೆಯ ಪಾತ್ರ ಮಾತ್ರ ಐಶ್ವರ್ಯಾ ರೈಳದ್ದೇ ಎನ್ನುವುದು ಮಾತ್ರ ಸ್ಪಷ್ಟ. ಜತೆಗೆ ಗೋವಿಂದ ಕೂಡ ಚಿತ್ರದಲ್ಲಿದ್ದು, ಅರಣ್ಯಾಧಿಕಾರಿಯ ಪಾತ್ರ ಇವರದ್ದು ಎನ್ನಲಾಗಿದೆ. ರಾವಣನ ಸಹೋದರರಾದ ಕುಂಭಕರ್ಣ ಮತ್ತು ವಿಭೀಷಣನ ಪಾತ್ರವನ್ನು ರವಿ ಕಿಶನ್ ಮತ್ತು ಅಜಯ್ ಗೇಹಿ ಮಾಡುತ್ತಿದ್ದಾರೆ ಎಂಬ ವರದಿಗಳೂ ಇವೆ. ಜತೆಗೆ ತೇಜಸ್ವಿನಿ ಕೊಲ್ಹಾಪುರೆ ಕೂಡ ಮಹತ್ವದ ಪಾತ್ರವೊಂದನ್ನು ಇದರಲ್ಲಿ ಮಾಡುತ್ತಿದ್ದಾರಂತೆ. ಹನುಮಂತ ಯಾರೆಂದು ತಿಳಿದು ಬಂದಿಲ್ಲ !