ತಾನು ಮುಸ್ಲಿಂ ಆದ ಕಾರಣಕ್ಕೆ ತನಗೆ ನಿವಾಸ ಮಂಜೂರು ಮಾಡಿಲ್ಲ ಎಂಬ ವಿವಾದಾಸ್ಪದ ಹೇಳಿಕೆ ನೀಡಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿರುದ್ಧ ವಿವಿಧ ಸಮುದಾಯಗಳ ನಡುವೆ ವೈರತ್ವ ಹುಟ್ಟಿಸುವ ಆಪಾದನೆ ಹೊರಿಸಿ ಪೊಲೀಸ್ ದೂರು ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಬಿಜೆಪಿಯ ರಾಷ್ಟ್ರೀಯ ಯುವ ಸಮಿತಿ ನಾಯಕ ಸಂಜಯ್ ಬೇಡಿಯಾ ಅವರು ಡಿ.ಬಿ. ಮಾರ್ಗ್ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ದೂರು ನೀಡಿದ್ದು, ಹಶ್ಮಿ ಹಾಗೂ ಖ್ಯಾತ ಸಿನಿಮಾ ನಿರ್ದೇಶ ಮಹೇಶ್ ಭಟ್ ಅವರುಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಾಯ್ದೆಗಳಡಿ ಹಲವಾರು ಅರೋಪಗಳನ್ನು ಹೇರಿರುವುದಾಗಿ ಬೇಡಿಯಾ ಅವರ ವಕೀಲ ಕೇತನ್ ಮೆಹ್ತಾ ಹೇಳಿದ್ದಾರೆ.
ಹಶ್ಮಿ ಮನೆಮಾಲಿಕರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಅಥವಾ ಅವರಿಗೆ ಯಾವುದೇ ಟೋಕನ್ ಅಡ್ವಾನ್ಸೂ ನೀಡಿಲ್ಲ ಎಂಬುದಾಗಿ ಬೊಟ್ಟು ಮಾಡಿರುವ ಬೇಡಿ, ತಾನು ಮುಸ್ಲಿಂ ಎಂಬ ಕಾರಣಕ್ಕೆ ತನಗೆ ಎನ್ಒಸಿ ನೀಡಿಲ್ಲ ಎಂಬ ವಿಚಾರವನ್ನು ಹಶ್ಮಿಅನಗತ್ಯವಾಗಿ ಎಳೆದು ತಂದಿದ್ದಾರೆ ಎಂದು ದೂರಿದ್ದಾರೆ.
ಮಹೇಶ್ ಭಟ್ ವಿರುದ್ಧ ಸೆಕ್ಷನ್ 120ಬಿ(ಸಂಚು) ಹಾಗೂ 34(ಸಮಾನ ಉದ್ದೇಶ)ದಡಿ ಆರೋಪ ಹೊರಿಸಲಾಗಿದೆ. ಭಟ್ ಅವರು ಹಶ್ಮಿಯವರನ್ನು ಬೆಂಬಲಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದಕ್ಕೆ ಅವರ ವಿರುದ್ಧವೂ ದೂರು ನೀಡಲಾಗಿದೆ.