ಕೊನೆಗೂ ರಾಖಿ ಸಾವಂತ್ ತನ್ನ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾಳೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಇಲೇಶ್ ಪರುಂಜನ್‌ವಾಲಾನನ್ನು ಭಾನುವಾರ ನಡೆದ 'ಸ್ವಯಂವರ'ದ ಕೊನೆಯ ಕಂತಿನಲ್ಲಿ 'ತನ್ನ ಜೀವನ ಸಂಗಾತಿ'ಯಾಗಲಿರುವ ಪುರುಷ ಎಂದು ಘೋಷಿಸಿದ್ದಾಳೆ.
ಎನ್‌ಡಿಟೀವಿ ಇಮ್ಯಾಜಿನ್ ಚಾನೆಲ್‌ನಲ್ಲಿ ಕಳೆದ ಹಲವಾರು ಸಮಯಗಳಿಂದ ಪ್ರಸಾರವಾಗುತ್ತಿದ್ದ 'ರಾಖಿ ಕಾ ಸ್ವಯಂವರ'ದ ಕೊನೆಯ ಕಂತು ಭಾನುವಾರ ನಡೆಯಿತು. ತೀರಾ ಕುತೂಹಲ ಕೆರಳಿಸಿದ್ದ ರಾಖಿ ಮದುವೆ ಆಕೆ ಕೆಲ ದಿನಗಳ ಹಿಂದೆ ಹೇಳಿದಂತೆ ಕೇವಲ ನಿಶ್ಚಿತಾರ್ಥ ಎಂಬಷ್ಟಕ್ಕೇ ಸೀಮಿತಗೊಂಡಿದೆ.
ಆರಂಭದಲ್ಲಿ 16 ಸ್ಪರ್ಧಿಗಳಿದ್ದ ಈ ಕಾರ್ಯಕ್ರಮ 26 ಕಂತುಗಳಲ್ಲಿ ಪ್ರಸಾರವಾಗಿತ್ತು. ಅಂತಿಮ ಕಂತಿಗೆ ಮೂರು ಮಂದಿ 'ವರ'ಗಳು ಉಳಿದುಕೊಂಡಿದ್ದರು. ಅವರಲ್ಲಿಬ್ಬರೀಗ ರಾಖಿ ಸಿಗದ ನಿರಾಶೆ ಅನುಭವಿಸಿದ್ದಾರೆ. ಮನಸ್ ಕತ್ಯಾಲ್ ಮತ್ತು ಚಿತೀಜ್ ಜೈನ್ ಎಂಬ ದೆಹಲಿಯ ಯುವಕರಿಬ್ಬರು ಕೊನೆಯ ಕ್ಷಣದಲ್ಲಿ ರಾಖಿಯಿಂದ ತಿರಸ್ಕರಿಸಲ್ಪಟ್ಟವರು.
ಕಾರ್ಯಕ್ರಮ ಆರಂಭವಾದ ದಿನದಿಂದ ನಾನು ಇಲೇಶ್‌ನನ್ನು ಗಮನಿಸುತ್ತಿದ್ದೇನೆ. ಕ್ಯಾಮರಾದ ಎದುರಲ್ಲಾಗಲೀ ಅಥವಾ ಬೇರೆ ಸಂದರ್ಭದಲ್ಲಾಗಲೀ ಯಾವತ್ತೂ ನನ್ನ ಬಗ್ಗೆ ತಾತ್ಸರ ತೋರಿಲ್ಲ. ನನ್ನ ಸಂಪೂರ್ಣ ಕ್ಷೇಮದ ಬಗ್ಗೆ ಗಮನ ಹರಿಸುತ್ತಿದ್ದ. ನಾನು ಹುಡುಕುತ್ತಿದ್ದ ಎಲ್ಲವೂ ಆತನಲ್ಲಿದೆ. ಸ್ವಯಂವರದಲ್ಲಿ ಆತನನ್ನು ಪಡೆದಿರುವುದು ನಿಜಕ್ಕೂ ಹರ್ಷದಾಯಕ ಸಂಗತಿ. ಸ್ವಯಂವರವೆಂದರೆ ಜೀವನ ಸಂಗಾತಿಯನ್ನು ಹುಡುಕುವುದು. ಅಲ್ಲಿ ನಾನು ಇಲೇಶ್‌ನನ್ನು ಪಡೆದಿದ್ದೇನೆ ಎಂದು ರಾಖಿ ಸಂಗಾತಿಯನ್ನು ಆರಿಸಿದ ನಂತರ ಪ್ರತಿಕ್ರಿಯಿಸಿದ್ದಾಳೆ.
PR
ಈ ಕಾರ್ಯಕ್ರಮ ಆರಂಭವಾಗುವ ಮೊದಲೇ ಸಂಪ್ರದಾಯವಾದಿಗಳಿಂದ ತೀವ್ರ ಟೀಕೆ ಕೇಳಿ ಬಂದಿತ್ತು. ಈ ರಿಯಾಲಿಟಿ ಶೋ ಯಶಸ್ವಿಯಾಗದು ಅಂದೊಕೊಂಡಿದ್ದವರಿಗೆಲ್ಲ ಆಘಾತವಾಗಿದ್ದು ಕಾರ್ಯಕ್ರಮ ಆರಂಭವಾದ ನಂತರ. ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಅಲ್ಲಲ್ಲಿ ಬಟ್ಟೆ ಧರಿಸಿ ಮೈ ಕುಲುಕಿಸಿ ಹೋಗುತ್ತಿದ್ದ ರಾಖಿ ಈ ಕಾರ್ಯಕ್ರಮದಿಂದ ಹೊಸ ಇಮೇಜ್ ಗಿಟ್ಟಿಸಿಕೊಂಡಿದ್ದಳು.
ಇವತ್ತು ನನ್ನ ನಿಶ್ಚಿತಾರ್ಥ. ನನ್ನ ಪ್ರಕಾರ ಇದು ನಿಶ್ಚಿತಾರ್ಥಕ್ಕಿಂತಲೂ ಹೆಚ್ಚು. ನಾನೀಗ ಮದುವೆಗೆ ಸಿದ್ಧಳಾಗಿದ್ದೇನೆ. ಆದರೆ ಅದಕ್ಕೂ ಮೊದಲು ನಾವು ಕ್ಯಾಮರಾವಿಲ್ಲದ ವಾತಾವರಣದಲ್ಲಿ ಪರಸ್ಪರ ಅರ್ಥೈಸಿಕೊಳ್ಳಬೇಕಾಗಿದೆ. ನಮ್ಮ ಸಂಪ್ರದಾಯದ ಪ್ರಕಾರವೇ ಎಲ್ಲರೆದುರು ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ದೇಶದಾದ್ಯಂತ ಆಕೆಯ ಆಯ್ಕೆಯ ಅಣಿಮುತ್ತುಗಳಿಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ತಿಳಿಸಿದಳು.
ರಾಖಿಯ ಆಯ್ಕೆ ಹೇಗಿತ್ತು? ಮೂವರೂ 'ವರ'ಗಳು ಸಾಲಾಗಿ ಕುರಿಗಳಂತೆ ನಿಂತಿದ್ದರು. ಅಲ್ಲಿಗೆ ಮಾಲೆ ಹಿಡಿದುಕೊಂಡು ಬಂದ 'ವಧು'ವಿನ ವೇಷದಲ್ಲಿದ್ದ ರಾಖಿ ಎಲ್ಲರ ಮುಖವನ್ನೂ ನೋಡುತ್ತಾ ಎರಡೆರಡು ಬಾರಿ ಆಚೀಚೆ ಹೋಗಿ ಬಂದು ಸತಾಯಿಸಿದಳು. ಕೊನೆಗೆ ಇಲೇಶ್‌ನ ಕತ್ತಿಗೆ ಮಾಲೆಯನ್ನೆಸೆದಾಗ ಇಡೀ ಸಭಾಂಗಣವೇ ಚಪ್ಪಾಳೆಯೊಂದಿಗೆ ಆಕೆಯ ನಿರ್ಧಾರವನ್ನು ಸ್ವಾಗತಿಸಿತು.
ನಂತರ ನಿರಾಸೆ ಅನುಭವಿಸಿದ ಸ್ಪರ್ಧಿಗಳಿಬ್ಬರು ಇಲೇಶ್ ಮತ್ತು ರಾಖಿಗೆ ಶುಭ ಹಾರೈಸಿ ತಮ್ಮ ಪೇಟವನ್ನು ಮುಡಿಯಿಂದಿಳಿಸಿದರು. ನಿಶ್ಚಿತಾರ್ಥದಂಗವಾಗಿ ರಾಖಿ-ಇಲೇಶ್ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ 'ಐ ಲವ್ ಯೂ' ಎಂದೂ ಹೇಳಿಕೊಂಡಿದ್ದಾರೆ.
PTI
ಇಲೇಶ್‌ನ ಕುಟುಂಬಸ್ಥರು ಮತ್ತು ಕೊರಿಯೋಗ್ರಾಫರ್ ಸರೋಜ್ ಖಾನ್, ಟೀವಿ ಜಗತ್ತಿನ ಕೆಲವು ಪ್ರಮುಖರು ರಾಖಿ-ಇಲೇಶ್ ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು.
ಇಲೇಶ್‌ನ ತಂದೆಯಂತೂ ಆನಂದತುಂದಿಲರಾಗಿದ್ದರು. ಅವರು ಮಾತನಾಡುತ್ತಾ, ನನ್ನ ಕಿರಿಯ ಮಗಳ ಮದುವೆ ಆಗಸ್ಟ್ 16ರಂದು ನಡೆಯಲಿದೆ. ಅವಳು ನಮ್ಮನ್ನು ಅಗಲಲಿದ್ದಾಳೆ. ಆದರೆ ಈಗ ಆ ಜಾಗವನ್ನು ರಾಖಿ ಸಾವಂತ್ ಮಗಳಾಗಿ ತುಂಬಲಿದ್ದಾಳೆ ಎಂದರು.
ರಾಖಿಗಾಗಿ ಹಿಂದಿ ಕಲಿಯಲಿರುವ ಇಲೇಶ್ ಟೊರಂಟೋದ ಉದ್ಯಮಿ ಇಲೇಶ್ ರಾಖಿಯ ಬಾಳ ಸಂಗಾತಿಯಾಗಿ ಆಯ್ಕೆಯಾದ ನಂತರ ಮಾತನಾಡಿದ ಇಲೇಶ್, 'ರಾಖಿ ನನ್ನ ಗಂಡ' ಎಂದು ಹಿಂದಿಯಲ್ಲಿ ತಪ್ಪಾಗಿ ಹೇಳಿದ ನಂತರ ಆತನಿಗೆ ಹಿಂದಿ ಕಲಿಯುವಂತೆ ಸಲಹೆ ಮಾಡಲಾಗಿದೆ.
ಸ್ವಯಂವರದಲ್ಲಿ ರಾಖಿಯನ್ನು ಗೆದ್ದುಕೊಂಡ ನಂತರ ಮಾತನಾಡಿದ ಇಲೇಶ್ ತೀರಾ ಭಾವುಕನಾಗಿದ್ದ. ತಾನು ಕಾರ್ಯಕ್ರಮಕ್ಕೆ ಬಂದಾಗಿನಿಂದ ನನ್ನ ಬಾಳ ಸಂಗಾತಿಯಾಗುವವಳ ಬಗ್ಗೆ ಯೋಚಿಸುತ್ತಿದ್ದೆ. ಆ ಹುಡುಕಾಟ ಈಗ ಮುಗಿದಿದೆ. ನಾನೀಗ ರಾಖಿಯನ್ನು ಗಂಡನನ್ನಾಗಿ ಪಡೆದುಕೊಂಡಿದ್ದೇನೆ ಎಂದಿದ್ದ.
ಆತ ನಿಜಕ್ಕೂ ಹೇಳಬೇಕಾಗಿದ್ದುದು ಹೆಂಡತಿಯೆಂದು. ಆದರೆ ಹಿಂದಿಯಲ್ಲಿ ತಪ್ಪಾಗಿ ಹೇಳಿದ್ದಕ್ಕೆ ನಂತರ ಇಲೇಶ್ ಕ್ಷಮೆಯನ್ನೂ ಕೇಳಿಬಿಟ್ಟ.
ಆತ ರಾಖಿಯನ್ನು ಮದುವೆಯಾಗಿದ್ದಲ್ಲ; ಆಕೆ ಇಲೇಶ್‌ನನ್ನು ಮದುವೆಯಾಗಿದ್ದು. ಹಾಗಾಗಿ ರಾಖಿ ಆತನ ಗಂಡನಂತೆ ಮುಂದಿನ ದಿನಗಳಲ್ಲಿ ಇರಬಹುದು ಎಂಬುದಕ್ಕೆ ಆತ ಉದ್ದೇಶಪೂರ್ವಕವಾಗಿ ಹಾಗೆ ಹೇಳಿದ್ದಿರಬಹುದು ಎಂದು ಕುಹಕಿಗಳು ಇದೇ ಸಂದರ್ಭದಲ್ಲಿ ಮಾತನಾಡಿಕೊಂಡರಂತೆ..!