ಆಕೆಯೇನೂ ಖ್ಯಾತ ನಟಿಯಲ್ಲ; ಅಬ್ಬರದ ಹಿನ್ನಲೆಯೂ ಆಕೆಯಲ್ಲಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ತೇರೇ ಸಂಗ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಆಕೆಯ ಹೆಸರು ಶೀನಾ ಸಹಬಾದಿ. ಕೆಲ ದಿನಗಳವರೆಗೆ ತನ್ನ ಮದುವೆಯನ್ನೂ ಮುಚ್ಚಿಟ್ಟಿದ್ದ ಆಕೆ ಕೊನೆಗೂ ಅದನ್ನು ಬಹಿರಂಗಪಡಿಸಿದ್ದಳು. ಬೆನ್ನಿಗೆ ತನ್ನ 'ಖಾಸಗಿ' ಛಾಯಾಚಿತ್ರಗಳನ್ನು ಅಕ್ರಮವಾಗಿ ಸ್ವತಃ ಗಂಡನೇ ವೆಬ್‌ಸೈಟ್‌ನಲ್ಲಿ ಹಾಕಿದ್ದಾನೆಂದು ಶೀನಾ ಆರೋಪಿಸುವುದರೊಂದಿಗೆ ಆಕೆಯ ವೈವಾಹಿಕ ಜೀವನದ ಮತ್ತೊಂದು ಭಾಗವನ್ನು ದರ್ಶನ ಮಾಡಿಸಿದ್ದಾಳೆ.
ಮೂಲತಃ ಉತ್ತರ ಪ್ರದೇಶದವಳಾದ ಶೀನಾ ಮುಂಬೈಯಲ್ಲಿನ ನಟನಾ ತರಬೇತಿ ಕೇಂದ್ರವೊಂದರಲ್ಲಿ ಗೋರೆಗಾಂವ್ ನಿವಾಸಿ ವಿಶಾಲ್ ಗೋರೆ ಎಂಬವನನ್ನು ಭೇಟಿಯಾಗಿದ್ದಳು. ಅದು ಸ್ನೇಹವಾಗಿ ನಂತರ ಪ್ರೇಮವಾಗಿ ಎಲ್ಲರಂತೆ ಅವಳೂ ಮನೆಯವರನ್ನು ಧಿಕ್ಕರಿಸಿ ಆತನನ್ನು ಮದುವೆಯಾಗಿದ್ದಳು. ಇದು ನಡೆದದ್ದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ.
19ರ ಹರೆಯದ ಶೀನಾಳ ಗಂಡ ನಿವೃತ್ತ ಪೊಲೀಸ್ ಸಹಾಯಕ ಕಮೀಷನರ್ ಮಗ. ಗಂಡ-ಹೆಂಡತಿ ನಡುವೆ ಎಲ್ಲವೂ ಸರಿಯಿರಲಿಲ್ಲ. ಆಗಾಗ ಜಗಳ ಕಾಯುತ್ತಿದ್ದರು. 24ರ ಗಂಡನ ವಿರುದ್ಧ ಆಕೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನೂ ದಾಖಲಿಸಿದ್ದಳು. ಅವಳ ಗಂಡನೂ ಆಕೆಯ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದ ಹೂರಣವನ್ನು ವಿವರಿಸಿದ್ದಾರೆ.
IFM
ಕೆಲವು ಸಮಯದ ನಂತರ ಶೀನಾ ಗಂಡನನ್ನು ತೊರೆದು ತನ್ನ ಹೆತ್ತವರ ಜತೆ ಸೇರಿಕೊಂಡು ಲೋಖಾಂಡವಾಲಾಕ್ಕೆ ನಿವಾಸ ಬದಲಿಸಿದ್ದಳು. ತನ್ನ 'ಪ್ರೈವೆಟ್' ಚಿತ್ರಗಳನ್ನು ಗಂಡ 'ಫೇಸ್‌ಬುಕ್'ನಲ್ಲಿ ತನ್ನ ಸಿನಿಮಾ ಬಿಡುಗಡೆಗೂ ಮುಂಚೆ ಹಾಕಿದ್ದಾನೆ ಎಂಬುದು ಈಗ ಅವಳ ವಾದ. ಕಳೆದ ವಾರ ಸೈಬರ್ ಪೊಲೀಸ್ ವಿಭಾಗದಲ್ಲಿ ತನ್ನ ದೂರನ್ನೂ ಆಕೆ ದಾಖಲಿಸಿದ್ದಾಳೆ ಎಂದು ಪ್ರಕರಣದ ಸಂಬಂಧ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ತಿಳಿಸಿದ್ದಾರೆ.
ಇದೀಗ ಪೊಲೀಸರು ಗೋರೆ ಬಳಸಿದ ಕಂಪ್ಯೂಟರ್ ಕೂಡ ಪತ್ತೆ ಹಚ್ಚಿದ್ದಾರೆ. ಆತ ತನ್ನ ಗೆಳೆಯ ತರುಣ್ ಅಡ್ವಾಣಿಯ ಕಂಪ್ಯೂಟರ್ ಮೂಲಕ ಪತ್ನಿಯ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದ.
'ಶೀನಾಳ ಚಿತ್ರಗಳನ್ನು ವೆಬ್‌ಸೈಟ್‌ಗೆ ಹಾಕಲು ಇ-ಮೇಲ್ ಐಡಿಯನ್ನು ಸೃಷ್ಟಿಸಿದ್ದು ಅಡ್ವಾಣಿ ಎಂದು ನಾವು ತಿಳಿದುಕೊಂಡಿದ್ದೇವೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ಆದರೆ ಇದರಲ್ಲಿ ತನ್ನ ಗಂಡನ ಕೈವಾಡವಿದೆ. ಗಂಡನ ಹೊರತಾಗಿ ಅಡ್ವಾಣಿಗೆ ತನ್ನ ಚಿತ್ರಗಳು ಸಿಗಲು ಸಾಧ್ಯವೇ ಇಲ್ಲ. ಗೋರೆಯೇ ಆತನಿಗೆ ಸಹಾಯ ಮಾಡಿದ್ದಾನೆ ಎಂದು ಶೀನಾ ಆರೋಪಿಸಿದ್ದಾಳೆ. ಪ್ರಕರಣದ ಸಂಬಂಧ ಇದುವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ.
ವೆಬ್‌ಸೈಟಲ್ಲಿ ಅಪ್‌ಲೋಡ್ ಮಾಡಿದ ಚಿತ್ರಗಳು 'ಖಾಸಗಿ' ಎಂದಷ್ಟೇ ಹೇಳಲಾಗಿದೆ. ಅದು ತೀರಾ ಖಾಸಗಿ ಫೋಟೋಗಳೇ ಅಥವಾ ಯಾವ ರೀತಿಯದ್ದು ಎಂದು ಪೊಲೀಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.