ಬಾಲಿವುಡ್ಡಿನ ಸೆಕ್ಸೀ ಪುರುಷ ಜಾನ್ ಅಬ್ರಹಾಂಗೆ ಮದುವೆಯಾಗಿದೆಯಂತೆ. ಹೌದು. ಹಾಗಂತ ಅವರೇ ಹೇಳಿದ್ದಾರೆ. ಪ್ರೇಯಸಿ ಬಿಪಾಶಾಗೂ ಗೊತ್ತಿಲ್ಲದಂತೆ ಈ ಸತ್ಯವನ್ನು ಸ್ವತಃ ಜಾನ್ ಅಬ್ರಹಾಂ ಬಹಿರಂಗಪಡಿಸಿದ್ದಾರೆ.
ಬಿಪಾಶಾ ಅಲ್ಲದಿದ್ದರೆ ಆ ಹುಡುಗಿ ಯಾರಪ್ಪಾ? ಎಂದು ಮೂಗಿನ ಮೇಲೆ ಬೆರಳಿಟ್ಟು ತಲೆಕೆರೆದುಕೊಳ್ಳಬೇಡಿ. ಮದುವೆಯಾಗೋದಕ್ಕೆ ಹುಡುಗನಿಗೆ ಹುಡುಗೀನೇ ಬೇಕಾ ಎಂದು ಮರು ಪ್ರಶ್ನೆ ಹಾಕುವವರೂ ಸಿಕ್ಕಾರು. ಹಾಗಾಗಿ ಜಾನ್ ಹೇಳೋ ಮಾತನ್ನೇ ಕಿವಿಕೊಟ್ಟು ಹೇಳಿದರೆ ಸಾಕು. ಉತ್ತರ ಸಿಕ್ಕುತ್ತೆ.
ವಿಷಯ ಏನಪ್ಪಾ ಅಂದ್ರೆ, ಜಾನ್ ಮದುವೆಯಾಗಿದ್ದು ಇನ್ಯಾರನ್ನೋ ಅಲ್ಲ. ಸ್ವತಃ ತನ್ನ ಬೈಕನ್ನು. ಇಷ್ಟೆನಾ, ಅಂತ ಮೂಗು ಮುರಿಯಬೇಡಿ. ಜಾನ್ ಅಬ್ರಹಾಂನ ಜಾನ್ ಇರೋದೇ ಬೈಕ್‌ಗಳಲ್ಲಿ ಎಂಬ ಸತ್ಯವೂ ನಿಮಗೆ ಗೊತ್ತಿರಲಿ.
IFM
ಹೌದು. ಜಾನ್ ಅಬ್ರಹಾಂಗೆ ತರಹೇವಾರಿ ಬೈಕುಗಳೆಂದರೆ ಪಂಚಪ್ರಾಣ. ಅದರಲ್ಲೂ ಸ್ಪೋರ್ಟ್ಸ್ ಬೈಕುಗಳೆಂದರೆ ಕೇಳೋದೇ ಬೇಡ. ಧೂಮ್ ಚಿತ್ರದಲ್ಲಿ ಜಾನ್ ಬೈಕ್ ಜತೆಗೆ ಮಿಂಚಿದ್ದು ಎಲ್ಲರಿಗೂ ತಿಳಿದ ವಿಷಯವೇ. ಜಾನ್ ಬಳಿಯಲ್ಲಿ ಈಗಾಗಲೇ ಸಾಕಷ್ಟು ಬೈಕುಗಳ ಕಲೆಕ್ಷನ್ ಇದೆ. ಜಾನ್ ಹೇಳುವಂತೆ, ನನಗೆ ಈಗಾಗಲೇ ನನ್ನ ಬೈಕುಗಳ ಜತೆಗೆ ಮದುವೆಯಾಗಿದೆ. ಈಗಂತೂ ನಾನು ಹನಿಮೂನ್ ಖುಷಿ ಸವಿಯುತ್ತಿದ್ದೇನೆ. ನನ್ನ ಬೈಕಿನಲ್ಲಿ ಯಾರಾದರೂ ಕೂರುವುದಿರಲಿ, ಮುಟ್ಟುವುದಕ್ಕೂ ಬಿಡಲ್ಲ ಎನ್ನುತ್ತಾರೆ.
ನಾನು 11 ವರ್ಷದವನಿದ್ದಾಗ ಅಣ್ಣ ಬೈಕ್ ಖರೀದಿಸಿದ್ದ. ಆತನೂ ಬೈಕನ್ನು ತುಂಬ ಪ್ರೀತಿಸುತ್ತಿದ್ದ. ನನಗೆ ಆತನ ಬೈಕನ್ನು ಮುಟ್ಟಲು ಕೂಡಾ ಬಿಡುತ್ತಿರಲಿಲ್ಲ. ಆಗಲೇ ನಾನು ಬೈಕ್ ಕನಸು ಕಾಣಲು ಶುರು ಮಾಡಿದ್ದೆ ಎನ್ನುತ್ತಾರೆ ಜಾನ್.
IFM
ಜಾನ್ ಕೂಡಾ ಅಷ್ಟೆ. ಇನ್ನು ಯಾರದೋ ವಿಷಯ ಬಿಡಿ. ಸ್ವತಃ ತನ್ನ ಪ್ರೇಯಸಿಬಿಪಾಶಾಳನ್ನು ಕೂಡಾ ಬೈಕ್‌ನಲ್ಲಿ ಕೂರಲು ಬಿಡುವುದಿಲ್ಲವಂತೆ. ಬಿಪಾಶಾ ಕೂತರೆ ಬೈಕಿಗೆ ಎಲ್ಲಿ ಡ್ಯಾಮೇಜ್ ಆಗಿ ಬಿಡುತ್ತದೋ ಎಂಬ ಭಯವಂತೆ!
ಸ್ವಂತ ಪ್ರೇಯಸಿ ಬಿಪಾಶಾ ಯಾರ ಜತೆ ನಟಿಸಿದ್ರೂ, ಸಿನಿಮಾದಲ್ಲಿ ಚುಂಬಿಸಿದರೂ ಕೆಂಡಾಮಂಡಲವಾಗದಿರುವಷ್ಟು ಉದಾರಿಯಾಗಿರುವ ಜಾನ್ ಅಬ್ರಹಾಂ, ಬೈಕಿನ ಮೇಲೆ ಅಷ್ಟ್ಯಾಕೆ ಪ್ರೀತಿ ಇಟ್ಟಿದ್ದಾರೋ ಗೊತ್ತಿಲ್ಲ. ಬೈಕಿನ ಜತೆ ಮದುವೆಯಾಗಿದ್ದು ಹಾಗಿರಲಿ, ನಿಮ್ಮ ವಯಸ್ಸು 36 ಆಯಿತಲ್ಲ, ನೀವು ಹುಡುಗಿ ಜತೆ ಮದುವೆಯಾಗೋದು ಯಾವಾಗಪ್ಪಾ ಎಂದರೆ, ಜಾನ್ ತಲೆಕೆರೆದುಕೊಂಡು ಇನ್ನು ನನ್ನ ಕಲೆಕ್ಷನ್‌ಗೆ 4 ಬೈಕ್ ಕೊಳ್ಳಬೇಕು. ಆಮೇಲೆ ಮದ್ವೆ ಗಿದ್ವೆ ಎಲ್ಲ ಅಂತಾರೆ. ಅಬ್ಬಾ ಜಾನ್!!!