'ಬ್ಲೂ' ಫಿಲ್ಮ್‌ನಲ್ಲಿ ಹಾಟ್ ಆದ ಲಾರಾ ದತ್ತ, ಅಕ್ಷಯ್ ಕುಮಾರ್, ಸಂಜಯ್ ದತ್!
IFM
ಹೌದು. ಬ್ಲೂ ಫಿಲ್ಮ್‌ನಲ್ಲಿ ಲಾರಾ ದತ್ತ, ಅಕ್ಷಯ್ ಕುಮಾರ್, ಸಂಜಯ್ ದತ್ ನಟಿಸುತ್ತಿದ್ದಾರೆ. ಇವರಿಗ್ಯಾಕಪ್ಪಾ ಈ ಗತಿ ಬಂತು ಎಂದು ಹುಬ್ಬೇರಿಸಬೇಡಿ. ಇದೇನು ಬ್ಲೂ ಫಿಲ್ಮ್ ಅಲ್ಲ. ಚಿತ್ರದ ಹೆಸರೇ 'ಬ್ಲೂ' ಅಷ್ಟೇ.
ಸದ್ಯಕ್ಕೆ ಬಾಲಿವುಡ್ಡಿಗೆ ಬಾಲಿವುಡ್ಡೇ ಮಾತಾಡಿಕೊಳ್ಳುತ್ತಿರುವ ಸಿನಿಮಾವೆಂದರೆ ಬ್ಲೂ. ಸಾಗರದಡಿಯಲ್ಲಿ ಶಾರ್ಕ್ ಮೀನುಗಳ ಜತೆಗಿನ ಸರಸ- ಸಾಹಸಮಯ ದೃಶ್ಯಗಳನ್ನೊಳಗೊಂಡ ರೋಮಾಂಚಕ ಥ್ರಿಲ್ಲರ್ ಕಥಾನಕ ಈ 'ಬ್ಲೂ'. ಬಾಲಿವುಡ್ಡೇಕೆ, ಸದ್ಯ ಹಾಲಿವುಡ್‌ನಲ್ಲೂ ಬ್ಲೂ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಅಮೆರಿಕದಲ್ಲಿ ಹಲವು ಸಿನಿಮಾ ಪತ್ರಿಕೆಗಳು ಬ್ಲೂ ಬಗ್ಗೆ ಆಶಾದಾಯಕ ವರದಿಗಳನ್ನೂ ಬರೆದಿವೆ.
ಭುವನ ಸುಂದರಿಯಾದರೂ ಲಾರಾ ಆಮೇಲೆ ಬಾಲಿವುಡ್‌ನಲ್ಲಿ ಮಿಂಚಿದ್ದು ಕಡಿಮೆಯೇ. ಈಗ ಬ್ಲೂ ಮೂಲಕ ಹಾಟ್ ಹಾಗೂ ಸೆಕ್ಸೀಯಾಗಿ ಕಂಗೊಳಿಸುತ್ತಾ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಟು ಪೀಸ್ ಸ್ವಿಮ್ ಸೂಟ್ ಮೂಲಕ ಬ್ಲೂ ಚಿತ್ರದಲ್ಲಿ ನೀರಿನಾಳದಲ್ಲಿ ಜಿಗಿದೆದ್ದಿದ್ದಾರೆ.
IFM
ಚಿತ್ರದಲ್ಲಿ ಸಾಗರ್ (ಸಂಜಯ್ ದತ್) ಒಬ್ಬ ಬಡ ಡೀಪ್ ಸೀ ಡೈವರ್ (ಸಾಗರದಡಿಯಲ್ಲಿ ಮೀನಿನಂತೆ ಈಜಬಲ್ಲವನು). ಆತನ ಗೆಳೆಯ ಆರವ್ (ಅಕ್ಷಯ್ ಕುಮಾರ್ ಕೂಡಾ ಆತನಂತೆಯೇ ಪರಿಣತಿ ಪಡದವನು. ಆದರೆ ಸಾಗರ್ ಬಡವ. ಆರವ್ ಶ್ರೀಮಂತ. ಇಬ್ಬರಿಗೂ ತಮ್ಮದೇ ಸ್ವಂತ ಬೋಟ್ ಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದವರು. ಹೀಗಿರುವ ಚಿತ್ರಕ್ಕೆ ಭೂಗತ ಲೋಕದ ಮಾಫಿಯಾ ಪರಿಚಯವಾಗುತ್ತದೆ. ಎರಡು ಬಣಗಳ ನಡುವೆ ತಿಕ್ಕಾಟ ನಡೆಯುತ್ತದೆ. ಇಲ್ಲಿ ಮೋನಾ (ಲಾರಾ ದತ್ತ) ಸಾಗರ್‌ನ ಗರ್ಲ್‌ಫ್ರೆಂಡ್. ಹೀಗೆ ಸಾಗರದಡಿಯಲ್ಲಿ ರೋಮಾಂಚಕ ಥ್ರಿಲ್ಲರ್ ಕಥಾನಕವನ್ನು ಹೆಣೆದಿದ್ದಾರೆ ನಿರ್ದೇಶಕರು. ಸಾಹಸ ದೃಶ್ಯಗಳಿಗಾಗಿ ಹಾಲಿವುಡ್ ಅನುಭವಿಗಳನ್ನೂ ಕರೆತಂದಿದ್ದಾರೆ.
IFM
ಈ ಸಿನಿಮಾದ ನಿರ್ದೇಶಕರು ಆಂಟೊನಿ ಡಿಸೋಜಾ. ಈ ಹಿಂದೆ ಬಿಗ್ ಹಿಟ್‌ಗಳಾದ ಜಬ್ ವಿ ಮೆಟ್, ಗೋಲ್‌ಮಾಲ್ ರಿಟರ್ನ್ಸ್‌ಗಳನ್ನು ನಿರ್ಮಿಸಿದ 'ಶ್ರೀ ಅಷ್ಟವಿನಾಯಕ ಸಿನಿ ವಿಷನ್ಸ್ ಲಿಮಿಟೆಡ್' ಬ್ಯಾನರ್‌ನಡಿಯ ಆಶ್ರಯವೂ ಬ್ಲೂಗೆ ಸಿಕ್ಕಿದೆ. ಸಿನಿಮಾದ ಚಿತ್ರೀಕರಣ ಬಹಾಮಾ ದ್ವೀಪಗಳಲ್ಲಿ ಮಾಡಲಾಗಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದು ಎರಡು ಆಸ್ಕರ್ ಗರಿ ಹೊತ್ತಿರುವ ಎಲ್ಲರ ಹೆಮ್ಮೆಯ ಎ.ಆರ್.ರೆಹಮಾನ್. ಜತೆಗೆ ಆಸ್ಟ್ರೇಲಿಯಾದ ಸೆನ್ಸೇಶನಲ್ ಪಾಪ್ ಗಾಯಕಿ ಕೈಲಿ ಮಿನಾಗ್. ಸಿನಿಮಾದ ಸಂಗೀತವನ್ನು ಕೇಳುತ್ತಿದ್ದರೆ, ಮಗ್ನರಾಗಿಬಿಡುವಷ್ಟು ಚೆನ್ನಾಗಿದೆ ಎಂಬ ವಿಮರ್ಶೆಗಳೂ ಕೇಳಿ ಬಂದಿವೆ. ಸಾಹಸಮಯ ರೋಮಾಂಚನಗೊಳಿಸುವ ದೃಶ್ಯಗಳ ಜತೆಗೆ ಉತ್ತಮ ಸೌಂಡ್ ಎಫೆಕ್ಟ್ ಕೂಡಾ ಇದರಲ್ಲಿದೆಯಂತೆ. ಆಸ್ಕರ್ ಪಡೆದ ಭಾರತೀಯ ರೆಸಲ್ ಪೂಕುಟ್ಟಿ ಈ ಚಿತ್ರದಲ್ಲಿ ಸೌಂಡ್ ಮಿಕ್ಸಿಂಗ್ ಮಾಡಿದ್ದಾರೆ.
IFM
ಬಾಲಿವುಡ್ ಪಂಡಿತರ ಅಭಿಪ್ರಾಯದಂತೆ, ಬಾಲಿವುಡ್ ಮಟ್ಟಿಗೆ ಇಂಥದ್ದೊಂದು ಸಿನಿಮಾ ಈವರೆಗೆ ಬಂದಿಲ್ಲ. ಸಾಹಸ ಪ್ರವೃತ್ತಿಯ ಸಿನಿಮಾಗಳು ಭಾರತೀಯ ಸಿನಿಮಾ ರಂಗದಲ್ಲಿ ಬಂದುದೇ ಕಡಿಮೆ ಎನ್ನಬಹುದು. ಅದರಲ್ಲೂ ಸಾಗರದೊಳಗಿನ ಅಡ್ವೆಂಚರ್ ದೂರದ ಮಾತೇ ಸರಿ. ಮೊದಲೆಲ್ಲ ಪಾಶ್ಚಾತ್ಯ ಸಿನಿಮಾಗಳ ಸಂಸ್ಕೃತಿಗೂ ಭಾರತೀಯ ಚಿತ್ರರಂಗದ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸ ಕಾಣುತ್ತಿತ್ತು. ಮೊದಲು ಇಂತಹುದಕ್ಕೆ ಬೇಕಾದ ತಾಂತ್ರಿಕತೆ ನೈಪುಣ್ಯ, ಬಜೆಟ್ ಎಲ್ಲವೂ ಸಾಲುತ್ತಿರಲಿಲ್ಲ. ಈಗ ಇವೆಲ್ಲವನ್ನು ಕ್ರೋಢೀಕರಿಸಿಕೊಂಡು ಹಾಲಿವುಡ್ ಮಾದರಿಯ ಸಾಗರದೊಳಗಿನ ಅಡ್ವೆಂಚರ್ ಹೊರಬರಲಿದೆ. ಇದಲ್ಲದೆ, ಹಲವರು ಇದನ್ನು ಕೇವಲ ಹಾಲಿವುಡ್‌ನ ಕಾಪಿ ಎಂದು ಟೀಕಿಸಿ ಗೇಲಿ ಮಾಡಿದ್ದಾರೆ. ಸಿನಿಮಾದಲ್ಲಿ ನಿಜವಾಗಿಯೂ ಏನಿದೆ ಎಂದು ತಿಳಿಯಲು, ಚಿತ್ರ ಬಿಡುಗಡೆಯಾಗುವ ಅಕ್ಟೋಬರ್ 16ರವರೆಗೂ ಕಾಯಬೇಕು.