ಬಾಲಿವುಡ್ ಬ್ಯಾಡ್ ಬಾಯ್ ಇಮೇಜಿನ ಸಲ್ಮಾನ್ ಹಾಗೂ ಕತ್ರಿನಾರ ಪ್ರೀತಿ ಕೊನೆಗೂ ಅಂತ್ಯ ಕಂಡಿದೆ ಎಂಬ ಸುದ್ದಿ ಬಾಲಿವುಡ್ಡಿನಲ್ಲಿ ದಟ್ಟವಾಗಿ ಹಬ್ಬಿದೆ. ಇವರಿಬ್ಬರ ಲವ್ ಮುಕ್ತಾವಾಗಿದೆಯಂತೆ ಎಂಬ ಸುದ್ದಿ ಹಬ್ಬುತ್ತಿರುವುದು ಇದೇ ಮೊದಲಲ್ಲ. ಕಳೆದೊಂದು ವರ್ಷದಿಂದಲೂ ಆಗಾಗ ಇಂತಹ ಸುದ್ದಿ ಬರುತ್ತಲೇ ಇತ್ತು. ಆದರೂ ಈ ಬಾರಿ ಅಂತ್ಯಗೊಂಡಿದ್ದು ದಿಟ ಎಂದು ಬಾಲಿವುಡ್ ಗಾಸಿಪ್ಪಿಗರು ಹೇಳುತ್ತಿದ್ದಾರಂತೆ.
ಹೀಗೆ ಬಲವಾಗಿ ಹೇಳಲು ಕಾರಣವೂ ಇದೆ. ಇತ್ತೀಚೆಗೆ ಕನ್ನಡಿಗ ಪ್ರಕಾಶ್ ರೈ ಅವರಿಗೆ ಕಾಂಚೀವರಂ ಚಿತ್ರದ ನಟನೆಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಗೊತ್ತೇ ಇದೆ. ಕಾಂಚೀವರಂ ಚಿತ್ರವೂ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತ್ತು. ಈ ಖುಷಿಯ ಹಿನ್ನೆಲೆಯಲ್ಲಿ ಕಾಂಚೀವರಂ ನಿರ್ದೇಶಕ ಪ್ರಿಯದರ್ಶನ್ ತಮ್ಮ ಬಾಲಿವುಡ್ ಗೆಳೆಯರಿಗೆಲ್ಲ ಒಂದು ಸಂತೋಷ ಕೂಟ ಕರೆದಿದ್ದರು. ಅದಕ್ಕ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಕೂಡಾ ಬಂದಿದ್ದರು!
ಸಂತೋಷ ಕೂಟಕ್ಕೆ ಸಲ್ಮಾನ್ ಕತ್ರಿನಾ ಬಂದಿದ್ದರು ಎನ್ನುವುದಕ್ಕಿಂತಲೂ ಅವರಿಬ್ಬರೂ ಬೇರೆಬೇರೆಯಾಗಿಯೇ ಬಂದಿದ್ದರು ಎಂಬುದು ಪ್ರಮುಖ ಅಂಶ. ಸಲ್ಮಾನ್ ತನ್ನಷ್ಟಕ್ಕೆ ತನ್ನ ಕಾರಿನಲ್ಲಿ ಬಂದರೆ, ಕತ್ರಿನಾ ಕೂಡಾ ತನ್ನದೇ ಬೇರೆ ಕಾರಿನಲ್ಲಿ ಬಂದಿದ್ದರು. ಇವರಿಬ್ಬರು ಈವರೆಗೆ ಪಾರ್ಟಿಗಳಿಗೆ, ಸಂತೋಷ ಕೂಟಕ್ಕೆ ಯಾವಾಗಲೂ ಜತೆಯಾಗಿಯೇ ಒಂದೇ ಕಾರಿನಲ್ಲಿ ಬರುತ್ತಿದ್ದರು.
ಇಷ್ಟೇ ಅಲ್ಲ, ಸಂತೋಷಕೂಟದಲ್ಲಿದ್ದ ಎರಡು ಗಂಟೆಗಳ ಕಾಲ ಇವರಿಬ್ಬರೂ ಒಬ್ಬರನ್ನೊಬ್ಬರು ಮುಖಾಮುಖಿಯಾಗಿ ಮಾತನಾಡಲಿಲ್ಲ. ಮುಗುಳ್ನಗು ಕೂಡಾ ಇವರಿಬ್ಬರ ನಡುವೆ ಇರಲಿಲ್ಲ. ಇಬ್ಬರೂ ಅವರವರದೇ ಬೇರೆ ಬೇರೆ ಗುಂಪುಗಳಲ್ಲಿ ಪ್ರತ್ಯೇಕವಾಗಿ ಬೇರೆಯವರ ಜತೆ ಮಾತನಾಡುತ್ತಿದ್ದರು. ಸಂತೋಷ ಕೂಟ ಮುಗಿದ ಬಳಿಕವೂ ಅಷ್ಟೇ, ಇಬ್ಬರಿಬ್ಬರೂ ಒಂದೇ ಒಂದು ಮಾತನ್ನೂ ಆಡದೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ಕಾರುಗಳಲ್ಲಿ ಹೊರಟು ಹೋದರು ಎನ್ನುತ್ತಾರೆ ಸಂತೋಷ ಕೂಟದಲ್ಲಿದ್ದ ಪ್ರತ್ಯಕ್ಷದರ್ಶಿಗಳು.
ಕೆಲ ತಿಂಗಳ ಹಿಂದೆ ಸಲ್ಮಾನ್ ಜೀವನದಲ್ಲಿ ಜರ್ಮನಿಯ ಹಾಟ್ ಮಾಡೆಲ್ ಒಬ್ಬಳ ಪ್ರವೇಶವಾದ್ದರಿಂದ ಕತ್ರಿನಾ ಮೂಲೆಗುಂಪಾಗಿದ್ದಾಳೆ ಎಂಬ ಸುದ್ದಿಯಿತ್ತು. ಅಷ್ಟೇ ಅಲ್ಲ, ಮುಂಬೈಯ ಬಾಂದ್ರಾದ ಕಾಫಿ ಶಾಪ್ ಒಂದರಲ್ಲಿ ಮಧ್ಯಾಹ್ನದ ವೇಳೆ ಎಲ್ಲರೆದರಲ್ಲೇ ಸಲ್ಮಾನ್ ಕತ್ರಿನಾಳ ಕೆನ್ನೆಗೆ ಬಾರಿಸಿದ್ದ ಎಂಬ ಸುದ್ದಿಯೂ ಇತ್ತು. ಆಗಲೇ ಇವರಿಬ್ಬರ ನಡುವೆ ವಿರಸ ಹೊಗೆಯೇಳೇತ್ತಿದೆ ಎಂಬ ಹವಾ ಇತ್ತು. ಈಗ ಅದು ದಿಟವಾಗಿದೆ ಎಂದು ಹಲವರ ಅಂಬೋಣ!!!