ಸಸ್ಯಾಹಾರಕ್ಕೂ ಸೆಕ್ಸೀಯಾಗಿರೋದಕ್ಕೂ ಸಂಬಂಧ ಇದೆಯಾ?.. ಕೇಳಿದರೆ ಯಾರಾದರೂ ಫಳ್ಳನೆ ನಕ್ಕಾರು. ಆದರೆ ಪ್ರಾಣಿವಧೆಯನ್ನು ವಿರೋಧಿಸುವ ಪೇಟಾ ಸಂಸ್ಥೆ ಮಾತ್ರ ಇದನ್ನು ಹೌದು ಎನ್ನುತ್ತಿದೆ. ಸಸ್ಯಾಹಾರಿಗಳೂ ಮಾಂಸಾಹಾರಿಗಳಿಗಿಂತಲೂ ಹೇಗೆ ಸೆಕ್ಸೀಯಾಗಿ ಇರುತ್ತಾರೆ ಎಂಬುದನ್ನು ಶಾಹಿದ್ ಹಾಗೂ ಅಮೃತಾ ರಾವ್ ಮುಖಾಂತರ ತೋರಿಸಿಕೊಡಲಿದೆ. ಅದೂ ಕೂಡಾ ಅವರಿಬ್ಬರನ್ನು ತೆರೆಯ ಮೇಲೆ ಸಂಪೂರ್ಣ ಬೆತ್ತಲಾಗಿಸುವ ಮೂಲಕ!!!
ಮುಂದಿನ ತಿಂಗಳಿಂದ ಪೇಟಾ ಕ್ಯಾಂಪೇನ್ ಶುರುವಾಗಲಿದೆ. ಟೋಮ್ಯಾಟೋ ಹಣ್ಣು ಹಾಗೂ ಸಸಿಯ ಜತೆಗೆ ಕಾಳುಮೆಣಸಿನ ಬಳ್ಳಿ ಬೆತ್ತಲ ದೇಹಕ್ಕೆ ಹಬ್ಬಿದ ಮಾದರಿಯಲ್ಲಿ ಈ ಜಾಹಿರಾತಿನಲ್ಲಿ ಅಮೃತಾ ಹಾಗೂ ಶಾಹಿದ್ ಕಾಣಿಸಿಕೊಳ್ಳಲಿದ್ದಾರೆ. ಸಸ್ಯಾಹಾರ ನಿಮ್ಮಲ್ಲಿ ಬೆಳೆಯಲಿ ಎಂಬುದೇ ಈ ಬಾರಿಯ ಪೇಟಾ ಕ್ಯಾಂಪೇನ್‌ನ ಥೀಮ್.
IFM
ಶಾಹಿದ್ ಹಾಗೂ ಅಮೃತಾ ಆಯ್ಕೆಯಾಗಲು ಕಾರಣವಾದರೂ ಏನು ಎಂಬುದಕ್ಕೂ ಕಥೆಯಿದೆ. ಇತ್ತೀಚೆಗೆ ಶಾಹಿದ್ ಕಪೂರ್ ಎಂಬ ಚಾಕೋಲೇಟ್ ಸುಂದರಾಂಗ ಕಮೀನೇ ಚಿತ್ರದಲ್ಲಿ ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಿಕೊಂಡು ತಾನು ಚಾಕೋಲೇಟ್ ಹೀರೋ ಮಾತ್ರವಲ್ಲ, ಎಷ್ಟು ಹಾಟ್ ಹಾಗೂ ಸೆಕ್ಸೀ ಎಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ಈ ಚಿತ್ರ ಬಿಡುಗಡೆಗೂ ಮೊದಲೇ ಶಾಹಿದ್ ಏಷ್ಯಾದ ಅತಿ ಸೆಕ್ಸೀ ಸಸ್ಯಾಹಾರಿ ಪುರುಷ ಎಂಬ ಕಿರೀಟವನ್ನೂ ಧರಿಸಿದ. ಸಂಪೂರ್ಣ ಸಸ್ಯಾಹಾರಿಯಾಗಿರವ ಶಾಹಿದ್ ಅಲ್ಲದೆ ಪೇಟಾಕ್ಕೆ ಇನ್ಯಾರು ಸಿಕ್ಕಾರು ಹೇಳಿ. ಶಾಹಿದ್‌ನನ್ನು ಗಬಕ್ಕಂತ ತನ್ನ ಜಾಹಿರಾತು ಬುಟ್ಟಿಗೆಳೆದಿದೆ.
ಅತ್ತ ಅಮೃತಾ ರಾವ್ ಇದೇ ಶಾಹಿದ್ ಕಪೂರ್ ಜತೆಗೆ ಇಶ್ಕ್ ವಿಶ್ಕ್, ವಿವಾಹ್‌ನತರ ಸಿನಿಮಾಗಳಲ್ಲಿ ಕಾಣಿಸಿಕೊಂಡವಳು. ಈ ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿ ಮೊನ್ನೆ ಮೊನ್ನೆಯವರೆಗೂ ಪಕ್ಕದ್ಮನೆ ಗೌರಮ್ಮನಂತಿದ್ದರೂ, ಶಾರ್ಟ್‌ಕಟ್ ಚಿತ್ರದ ಮೂಲಕ ಹಾಟ್ ಆಗಿ ತಾನೆಷ್ಟು ಸೆಕ್ಸೀ ಎಂದು ಸಾಬೀತು ಪಡಿಸಿದ್ದಾಳೆ. ಈಕೆಯೂ ಪಕ್ಕಾ ಸಸ್ಯಾಹಾರಿ. ಮೇಲಾಗಿ ಶಾಹಿದ್ ಜತೆಗೆ ಈಕೆ ಚೆಂದದ ಜೋಡಿಯಾಗಿಯೂ ಕಾಣಿಸಿಕೊಂಡಿದ್ದಾಳೆ. ಈಕೆಗಿಂತ ಪರ್ಫೆಕ್ಟ್ ಯಾರೂ ಇಲ್ಲ ಅಂತ ತೀರ್ಮಾನಿಸಿ ಪೇಟಾ ಅಮೃತಾಳನ್ನೂ ಬುಟ್ಟಿಗೆ ಹಾಕಿದೆ.
IFM
ಈ ಹಿಂದೆ ಪೇಟಾಗಾಗಿ ಬಟ್ಟೆ ಬಿಚ್ಚಿದ ಸುಂದರಿಯರಿಗೇನೂ ಕಡಿಮೆಯಿಲ್ಲ. ಪುರುಷ ಜಗತ್ತಿಗೇ ಸೆಕ್ಸೀ ರಾಣಿಯಾಗಿ ಬಳುಕಿದ ಹಾಲಿವುಡ್ ನಟಿ ಪಮೇಲಾ ಅಂಡರ್‌ಸನ್ ಕೇವಲ ಕ್ಯಾಬೇಜ್ ಮೂಲಕ ತನ್ನ ಕೆಲವೇ ಭಾಗಗಳನ್ನು ಬೇಕಾದಷ್ಟೇ ಮುಚ್ಚಿ ಸೆಕ್ಸೀಯಾಗಿ ಪೇಟಾಗೆ ಜಾಹಿರಾತು ನೀಡಿದಳು. ಪ್ರಾಣಿಗಳನ್ನು ತಿನ್ನಬೇಡಿ, ಸಸ್ಯಾಹಾರಿಗಳಾಗಿ ಎಂಬುದೇ ಆಕೆ ಬೆತ್ತಲಾದುದರ ಪರಮ ಉದ್ದೇಶ. ಅದೆ್ಟು ಜನ ಸಸ್ಯಾಹಾರಿಗಳಾದರೋ ಗೊತ್ತಿಲ್ಲ. ಆದರೆ ಆಕೆಯ ಸೆಕ್ಸೀ ಫೋಟೋವನ್ನು ಮಾತ್ರ ಕೋಟಿಗಟ್ಟಲೆ ಜನ ಆರಾಧಿಸಿದರು ಎಂಬುದೇ ಹೆಚ್ಚು ಸತ್ಯ. ಅದೇನೇ ಇರಲಿ, ನಂತರ ಅದಿತಿ ಗೋವಿತ್ರೀಕರ್ ಕೇವಲ ಎಲೆಗಳನ್ನೇ ಉಡುಪಾಗಿ ಧರಿಸಿ ವಸ್ತ್ರ ತ್ಯಾಗ ಮಾಡಿ ಪ್ರಾಣಿಗಳ ಪರ ಹೋರಾಡಿದಳು! ಶೆರ್ಲಿನ್ ಛೋಪ್ರಾ ಇನ್ನೂ ಹಾಟ್ ಆಗಿ ಕೇವಲ ಟೂ ಪೀಸ್‌ನಲ್ಲಿ ಕಾಣಿಸಿಕೊಂಡು ಪುರುಷರ ನಿದ್ದೆಗೆಡಿಸಿದಳು. ಇದೀಗ ಅಮೃತಾ ರಾವ್ ಹಾಗೂ ಶಾಹಿದ್ ಸರದಿ.
ಶಾಹಿದ್ ಕಪೂರ್ ಎಂಬ ಸುಂದರಾಂಗನನ್ನು ಇಷ್ಟಪಡುವ ಲಕ್ಷೋಪಲಕ್ಷ ತರುಣಿಯರೂ ಸಸ್ಯಾಹಾರಿಗಳಾಗುವ ಮೂಲಕ ಸೆಕ್ಸೀಯಾಗುತ್ತಾರೋ... ಅಮೃತಾಳ ಹಾಟ್ ಜಗತ್ತನ್ನು ನೋಡಿ ಅದೆಷ್ಟು ಪುರುಷರು ನಿದ್ದೆಗೆಟ್ಟು ಕೃಶವಾಗುತ್ತಾರೋ...ನೋಡಬೇಕು!