ಶಿಲ್ಪಾ ಶೆಟ್ಟಿಗೆ ಮದುವೆ ದಿನಾಂಕ ಫಿಕ್ಸ್, ತಂಗಿಗೆ ಗೊತ್ತೇ ಇಲ್ಲ!!!
IFM
ಅಂತೂ ಇಂತೂ ಭಾರತೀಯ ಮೂಲದ ಲಂಡನ್ ವಾಸಿ ವಿಚ್ಛೇದಿತ ರಾಜ್ ಕುಂದ್ರಾ ಜತೆಗೆ ಹಗಲು ರಾತ್ರಿ ಪ್ರಪಂಚ ಪರ್ಯಟನೆ ಮಾಡುತ್ತಾ ಗಾಸಿಪ್ ಕಾಲಂಗಳಲ್ಲಿ ಮಿಂಚಿದ್ದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಜತೆಗೆ ಉಂಗುರ ಬದಲಾಯಿಸಿಕೊಂಡಿದ್ದಾಳೆ. ಇವರಿಬ್ಬರ ನಿಶ್ಚಿತಾರ್ಥ ಮೊನ್ನೆ ಶನಿವಾರ ಮುಂಬೈಲ್ಲಿ ನಡೆದಿದ್ದು ತಿಳಿದೇ ಇದೆ. ಇನ್ನೇನು ವಿಶೇಷ ಅಂತೀರಾ. ನಿಶ್ಚಿತಾರ್ಥ ಆದ ಮೇಲೆ ವಿಶೇಷವಿಲ್ಲದೆ ಇದ್ದೀತೇ ಹೇಳಿ.
ಹೌದು. ಶಿಲ್ಪಾಗೆ ಮೊನ್ನೆ ಶನಿವಾರ ರಾಜ್ ಕುಂದ್ರಾ ತೊಡಿಸಿದ ಉಂಗುರದಲ್ಲೇ ವಿಶೇಷವಿರೋದು. ನಿಶ್ಚಿತಾರ್ಥದಲ್ಲಿ ಉಂಗುರ ತೊಡಿಸಿದ್ದರಲ್ಲಿ ಏನಿದೆ ವಿಶೇಷ ಅಂತೀರಾ. ರಾಜ್ ತೊಡಿಸಿದ ಉಂಗುರ ಅಂತಿಂಥದ್ದಲ್ಲ. ಮುಂಬೈಯಂತಹ ಮಹಾ ನಗರಿಯಲ್ಲೇ ದೊಡ್ಡ ಭಾರೀ ಬಂಗಲೆ ಕೊಳ್ಳುವಷ್ಟು ಬೃಹತ್ ಮೊತ್ತದ್ದು ಆ ಉಂಗುರ. ಅಂದರೆ ಬರೋಬ್ಬರಿ 2 ಕೋಟಿ ರೂಪಾಯಿ ಮಾರಾಯ್ರೇ! 2 ಕೋಟಿ ರೂಪಾಯಿಗಳ ಆ ವಿಶೇಷ ವಜ್ರದುಂಗುರವನ್ನು ತನ್ನ ಬೆರಳಲ್ಲಿ ತೊಟ್ಟು ಶಿಲ್ಪಾ ತನ್ನ ನಿಶ್ಚಿತಾರ್ಥದ ದಿನದಂದು ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು.
ಅದೆಲ್ಲಾ ಹಾಗಿರಲಿ, ಶಿಲ್ಪಾ ತನ್ನ ಬಂಧು ಬಳಗಕ್ಕೆ ಯಾವಾಗ ಊಟ ಹಾಕಿಸ್ತಾಳೆ ಅಂತೀರಾ? ಇದನ್ನೇ ಶಿಲ್ಪಾಳಲ್ಲಿ ಕೇಳಿದರೆ ಆಕೆ, ಮದುವೆ ದಿನಾಂಕ ಫಿಕ್ಸಾಗಿದೆ. ಆದರೆ ಈಗೆಲ್ಲಾ ಡೇಟ್ ಮೊದಲೇ ಪ್ರಚಾರ ಮಾಡಲ್ಲ. ಮದುವೆ ದಿನಾಂಕ ಹೇಳಬೇಕಾದರೆ ನನ್ನ ತಂಗಿ ಬರಬೇಕು ಎಂದು ತಂಗಿಯೆಡೆಗೆ ಭಾರೀ ಮಮಕಾರ ತೋರಿದ್ದಾಳೆ ಈ ಅಕ್ಕ ಶಿಲ್ಪಾ ಶೆಟ್ಟಿ.
IFM
ಶಿಲ್ಪಾ ಶೆಟ್ಟಿ ಇತ್ತ 2 ಕೋಟಿ ರೂಪಾಯಿಗಳ ವಜ್ರದುಂಗುರ ತೊಡುವಾಗ ಅತ್ತ ತಂಗಿ ಶಮಿತಾ ಶೆಟ್ಟಿಯನ್ನು ತುಂಬ ಮಿಸ್ ಮಾಡಿಕೊಂಡಂತೆ ಅನಿಸಿದೆ ಶಿಲ್ಪಾಗೆ. ಶಮಿತಾಗೆ ನನ್ನ ನಿಶ್ಚಿತಾರ್ಥದ ವಿಷಯವನ್ನೂ ತಿಳಿಸಿಲ್ಲ. ಆಕೆ ಬಿಗ್ ಬಾಸ್-3 ಷೋನಲ್ಲಿ ಬ್ಯುಸಿಯಾಗಿದ್ದಾಳೆ. ನಾನಾಕೆಯನ್ನು ಪ್ರತಿದಿನವೂ ಟಿವಿಯಲ್ಲಿ ನೋಡುತ್ತೇನೆ. ಆದರೆ ಆಕೆ ನನ್ನನ್ನು ನೋಡಲಾರಳು. ಬಿಗ್ ಬಾಸ್ ಕಾರ್ಯಕ್ರಮ ಮುಗಿವವರೆಗೂ ಆಕೆಗೆ ನಾವು ಫೋನ್ ಮಾಡುವಂತಿಲ್ಲ. ನನಗೊತ್ತು. ಶಮಿತಾಗೆ ನಾನು ಆಕೆಗೆ ತಿಳಿಸದೆ ನಿಶ್ಚಿತಾರ್ಥ ಮಾಡಿಕೊಂಡದ್ದು ತುಂಬ ಬೇಸರವಾಗುತ್ತದೆ ಎಂದು. ಅವಳು ಖಂಡಿತ ನನ್ನನ್ನು ಕೊಂದೇ ಬಿಡುತ್ತಾಳೆ. ಆದರೆ ನಾನೇನು ಮಾಡಲಿ, ಪರಿಸ್ಥಿತಿ ಹಾಗಿತ್ತು. ರಾಜ್ ಕುಟುಂಬವಿಡೀ ಲಂಡನ್‌ನಿಂದ ಮುಂಬೈಗೆ ಒಂದು ವಾರಕ್ಕಾಗಿ ಬಂದಿತ್ತು. ಆಗಲೇ ನಿಶ್ಚಿತಾರ್ಥ ಮುಗಿಸಿಬಿಡುವ ಯೋಚನೆ ಅವರದ್ದು. ನನಗೆ ಪ್ರತಿ ಕ್ಷಣವೂ ಶಮಿತಾ ಇಲ್ಲವೆಂಬ ಬೇಸರ ಇತ್ತು. ಆದರೆ ಅವರೆಲ್ಲರಿಗಾಗಿ ನಾನು ಆಕೆಯಿಲ್ಲದೆ ನಿಶ್ಚಿತಾರ್ಥ ಮಾಡಬೇಕಾಯಿತು ಎನ್ನುತ್ತಾರೆ ಶಿಲ್ಪಾ.
IFM
ಮೂಲಗಳ ಪ್ರಕಾರ, 2010ರ ಜನವರಿಯಿಂದ ನಂತರವಾದರೆ, ಶಿಲ್ಪಾ-ರಾಜ್ ಜಾತಕದಲ್ಲಿ ಮದುವೆಗೆ ಸೂಕ್ತ ಉತ್ತಮ ದಿನ ಇಲ್ಲ. ಹಾಗಾಗಿ ಬಹಳ ಸಮಯ ತಡವಾಗುತ್ತದೆಯಾದ್ದರಿಂದ ಇದೇ ಡಿಸೆಂಬರ್ ಒಳಗೆ ಶಿಲ್ಪಾ ಮದುವೆಯಾಗಲಿದ್ದಾರೆ. ಆದರೆ ಬಿಗ್ ಬಾಸ್ ಕಾರ್ಯಕ್ರಮ ಮುಗಿಯುವುದು ಡಿಸೆಂಬರ್ ಅಂತ್ಯಕ್ಕೆ. ಚಾನಲ್‌ಗೆ ಕಾಡಿ ಬೇಡಿ ಶಮಿತಾಳನ್ನು ಹೇಗಾದರೂ ಮಾಡಿ ಮದುವೆಯಂದು ಕರೆತರುತ್ತೇನೆ ಎಂದೂ ಆತ್ಮವಿಶ್ವಾಸದಿಂದ ಹೇಳುತ್ತಾಳೆ ಶಿಲ್ಪಾ.
ತಂಗಿ ಶಮಿತಾ ಅಂದರೆ ನನಗೆ ಪಂಚಪ್ರಾಣ. ಆಕೆ ನಮ್ಮ ಮನೆಯಲ್ಲಿ ಈಗಲೂ ಪುಟ್ಟ ಮಗುವಿನಂತೆ. ಆಕೆಗೆ ಈವರೆಗೆ ಯಾವುದೇ ಅಡುಗೆ ಮಾಡಿ ಅಬ್ಯಾಸವಿಲ್ಲ. ಈಗ ಬಿಗ್ ಬಾಸ್‌ನಲ್ಿ ಆಕೆಯನ್ನು ನೋಡಿ ಖುಷಿಯಾಗುತ್ತದೆ. ಆಕೆ ರೋಟಿ ಮಾಡಬಲ್ಲವಳಾಗಿದ್ದಾಳೆ. ಆಕೆ ಈ ಟಿವಿ ಷೋನಲ್ಲೇ ಸಾಕಷ್ಟು ಪ್ರೌಢತೆ ಪಡೆದುಕೊಂಡದ್ದು ನೋಡಿದರೆ ನನಗೆ ಕಣ್ಣು ತುಂಬಿ ಬರುತ್ತದೆ ಎನ್ನುತ್ತಾಳೆ ಶಿಲ್ಪಾ.
ಹೋಗಲಿ ಬಿಡಮ್ಮಾ, ಮದುವೆ ಯಾವಾಗ ಅಂತಾದರೂ ಹೇಳುತ್ತೀರಾ ಅಂದರೆ, ಮದುವೆ ದಿನಾಂಕ ಫಿಕ್ಸಾಗಿದೆ. ಶೀಘ್ರದಲ್ಲೇ ಹೇಳುತ್ತೇನೆ. ಆದರೆ, ಅದಕ್ಕೂ ಮೊದಲು ಈ ನನ್ನ 2 ಕೋಟಿ ರೂಪಾಯಿಗಳ ವಜ್ರದುಂಗುರವನ್ನು ತಂಗಿಗೆ ತೋರಿಸಬೇಕಿತ್ತಲ್ಲಾ ಎಂದು ಕಣ್ಣು ಮಿಟುಕಿಸುತ್ತಾಳೆ ಶಿಲ್ಪಾ!!!