ಮಂಗಳೂರು ಸುಂದರಿ ಶಿಲ್ಪಾ ಶೆಟ್ಟಿ ಹಾಗೂ ಲಂಡನ್‌ನ ಭಾರತೀಯ ಮೂಲದ ಉದ್ಯಮಿ ರಾಜ್ ಕುಂದ್ರಾ ಅವರ ಮದುವೆ ದಿನಾಂಕ ನಿಗದಿಯಾಗಿದೆ. ಇದೇ ನವೆಂಬರ್ 22ರಂದು ಶಿಲ್ಪಾ ಹಾಗೂ ರಾಜ್ ಕುಂದ್ರಾ ಖಂಡಾಲಾದ ತಮ್ಮ ಸ್ನೇಹಿತರ ಬಂಗಲೆಯಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಶಿಲ್ಪಾ ಶೆಟ್ಟಿ ಡಿಸೆಂಬರ್‌ನಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದೀಗ ನವೆಂಬರ್‌ನಲ್ಲೇ ನಡೆಯುತ್ತಿರುವುದು ವಿಶೇಷ. ಡಿಸೆಂಬರ್ ಕಳೆದ ಮೇಲೆ, ಮತ್ತೆ ಉತ್ತಮವಾದ ಮಹೂರ್ತ ಇಲ್ಲದಿರುವುದೇ ಈ ಅವಸರದ ಮದುವೆಗೆ ಕಾರಣ ಎನ್ನಲಾಗಿದೆ.
ಇತ್ತೀಚೆಗಷ್ಟೆ ತರಾತುರಿಯಲ್ಲಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿಲ್ಪಾ ಹಾಗೂ ರಾಜ್ ಕುಂದ್ರಾ ನವೆಂಬರ್ 22ರಂದು ಮಂಗಳೂರು ಶೈಲಿಯಲ್ಲಿ ಶಾಸ್ತ್ರೋಕ್ತವಾಗಿಯೇ ವಿವಾಹವಾಗಲಿದ್ದಾರೆ. ಅದಕ್ಕೂ ಮೊದಲು ಮೆಹೆಂದಿ ಶಾಸ್ತ್ರ ಹಾಗೂ ಸಂಗೀತ್ ಶಾಸ್ತ್ರಗಳು ಪಂಜಾಬಿ ಶೈಲಿಯಲ್ಲಿ ನಡೆಯಲಿದೆ. ಆದರೆ ಇವೆಲ್ಲ ಸಾಂಪ್ರದಾಯಿಕ ಸಮಾರಂಭಗಳು ಪಕ್ಕಾ ಖಾಸಗಿಯಾಗಿದ್ದು, ಮಾಧ್ಯಮ ಸೇರಿದಂತೆ ಯಾರಿಗೂ ಪ್ರವೇಶವಿಲ್ಲ. ಕುಟುಂಬದ ಆಪ್ತ ಗೆಳೆಯರು ಹಾಗೂ ಬಂಧುಗಳು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದು ಶಿಲ್ಪಾ ಕುಟುಂಬ ತಿಳಿಸಿದೆ.
ಇದಾದ ಮೇಲೆ ನವೆಂಬರ್ 24ರಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾರಿಂದ ಮುಂಬೈನಲ್ಲಿ ದೊಡ್ಡ ಅತಿಥಿ ಸತ್ಕಾರ ಕೂಟ ನಡೆಯಲಿದೆ. ಈ ಸಮಾರಂಭಕ್ಕೆ ಬಾಲಿವುಡ್‌ನ ಆಪ್ತರು, ಗೆಳೆಯರು ಉದ್ಯಮಿಗಳಿಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ.
ಆದರೆ ಅತ್ತ ಶಿಲ್ಪಾಳ ಅತ್ಯಂತ ಪ್ರೀತಿಪಾತ್ರಳಾದ ತಂಗಿ ಶಮಿತಾ ಶೆಟ್ಟಿ ಮಾತ್ರ ಕಲರ್ಸ್ ಟಿವಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿರುವುದರಿಂದ ಆ ಕಾರ್ಯಕ್ರಮದ ಸೆಟ್‌ನಿಂದ ಎಲ್ಲೂ ಹೊರಹೋಗುವಂತಿಲ್ಲ. ಶಿಲ್ಪಾಳ ಮದುವೆ ನಿಶ್ಚಯವಾದುದೂ ಆಕೆಗೆ ತಿಳಿಸುವಂತಿಲ್ಲ. ಇತ್ತೀಚೆಗೆ ನಿಶ್ಚಿತಾರ್ಥವೂ ಶಮಿತಾಳ ಅನುಪಸ್ಥಿತಿಯಲ್ಲೇ ನಡೆದಿತ್ತು. ಆಕೆಯನ್ನು ಮೂರ್ನಾಲ್ಕು ದಿನಗಳ ಮಟ್ಟಿಗೆ ವಿಶೇಷ ಅನುಮತಿ ಪಡೆದು ಸೆಟ್‌ನಿಂದ ಹೊರಕರೆದು ತಂದು ಮದುವೆಯಲ್ಲಿ ಭಾಗವಹಿಸುವಂತೆ ಮಾಡಲು ಸ್ವತಃ ಶಿಲ್ಪಾ ಶೆಟ್ಟಿ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಶಿಲ್ಬಾ ಶೆಟ್ಟಿಯೇ ಸ್ವತಃ ಇದೇ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿರುವುದರಿಂದ ಶಿಲ್ಪಾಗೆ ತಂಗಿಯನ್ನು ಕರೆತರುವುದೇನೂ ಕಷ್ಟದ ಕೆಲಸವಲ್ಲ ಎನ್ನಲಾಗಿದೆ.