ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೆಲ್ಲ ಕೂತು ನೂರೆಂಟು ಪ್ರಶ್ನೆ ಕೇಳಲು ರೆಡಿಯಾಗಿರುವಾಗ ಟಾಯ್ಲೆಟ್ಟಿಗೆ ಹೋಗಲು ನಟನೊಬ್ಬನಿಗೆ ಅರ್ಜೆಂಟಾದರೆ ಆತನ ಪರಿಸ್ಥಿತಿ ಹೇಗಿರಬಹುದೆಂದು ಯೋಚಿಸಿ. ಅತ್ತ ಹೋಗಲೂ ಆಗದೆ, ಇತ್ತ ಪ್ರಶ್ನೆಗಳಿಗೆ ಉತ್ತರಿಸಲೂ ಆಗದೆ ಒದ್ದಾಡುವ ಆ ಸಂದಿಗ್ಧ ಪರಿಸ್ಥಿತಿ ಇತ್ತೀಚೆಗೆ ನಿರ್ಮಾಣವಾಗಿದ್ದು ಖಾನ್‌ತ್ರಯರಲ್ಲಿ ಒಬ್ಬರಾದ ಅಮೀರ್ ಖಾನ್‌ಗೆ!!!
ವೈದ್ಯರಾದವರಿಗೆ ರೋಗಗಳೇ ಬರಬಾರದೆಂದೇನೂ ಇಲ್ಲವಲ್ಲ, ಹಾಗೆಯೇ ನಟ, ರಾಜಕಾರಣಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ವ್ಯಕ್ತಿಗಳೂ ಜೀವಿಗಳೇ ತಾನೆ. ಆದರೆ, ಅದೇಕೋ ಏನೋ, ಕೆಲವೊಮ್ಮೆ ಇಂಥ ಸಾರ್ವಜನಿಕ ವ್ಯಕ್ತಿಗಳ ಮಾನವ ಸಹಜ ವಿಧಿಗಳೂ ಕೂಡಾ ಕೆಲವೊಮ್ಮೆ ಸುದ್ದಿಯಾಗುತ್ತದೆ. ಜನಸಾಮಾನ್ಯರಿಗೆ ಬಾಯ್ತುಂಬಾ ನಕ್ಕುಬಿಡಲು ವಸ್ತುವಾಗುತ್ತದೆ. ಕಾರಣ ಜನರಲ್ಲಿ ಇಂತಹ ವ್ಯಕ್ತಿಗಳ ಬಗೆಗಿರುವ ಕುತೂಹಲ ತುಂಬಿದ ದೃಷ್ಟಿ. ಇತ್ತೀಚೆಗೆ ಇಂಥದ್ದೊಂದು ಮಾನವ ಸಹಜ ವಿಧಿ ಬಾಲಿವುಡ್ಡಿನ ಮಿಸ್ಟರ್ ಪರ್ಫೆಕ್ಶನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರನ್ನೂ ಬಾಧಿಸಿತು. ತಡೆಯಲಾರದ ಅರ್ಜೆಂಟಿನ ದೇಹಬಾಧೆ ತೀರಿಸಿಕೊಂಡು ಪರ್ಫೆಕ್ಶನಿಸ್ಟ್ ಕೂಡಾ ಅದರು ಅನ್ನಿ.
IFM
ವಿಷಯವೇನಪ್ಪಾ ಅಂದ್ರೆ, ಇತ್ತೀಚೆಗೆ ಅಮೀರ್ ಖಾನ್ ತನ್ನ ಮುಂದಿನ ಚಿತ್ರ 'ತ್ರೀ ಈಡಿಯಟ್ಸ್' ಕುರಿತ ಪತ್ರಿಕಾಗೋಷ್ಠಿಗೆಂದು ಪತ್ರಕರ್ತರನ್ನು ಪಂಚತಾರಾ ಹೊಟೇಲಿಗೆ ಆಹ್ವಾನಿಸಿದ್ದರು. ಸಮಯಕ್ಕೆ ಸರಿಯಾಗಿ ತಲುಪಲೆಂದು ಅಮೀರ್ ಬೇಗ ಹೊರಟರೂ ಎರಡುವರೆ ಗಂಟೆಗಳ ಕಾಲ ಅವರ ಕಾರು ಮುಂಬೈ ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಕಾರಿನಲ್ಲಿ ಕುಳಿತಿರುವಾಗಲೇ ಅರ್ಜೆಂಟಾಗಿಬಿಟ್ಟಿದ್ದ ದೇಹಬಾಧೆಯನ್ನು ತೀರಿಸಿಕೊಳ್ಳೋದು ಹೇಗೆ ಹೇಳಿ? ಸರಿ, ಹೊಟೇಲು ತಲುಪಲೆಂದು ಅಮೀರ್ ಕಾದರು. ಅಂತೂ ಹೊಟೇಲು ತಲುಪಿ, ಸೀದಾ ಟಾಯ್ಲೆಟ್ಟಿಗೆ ಹೋಗೋಣವೆಂದು ಅಂದುಕೊಂಡರೆ ತನ್ನೆದುರು ಪ್ರಶ್ನೆ ಕೇಳಲು ರೆಡಿಯಾಗಿ ಸಾಲು ಸಾಲಾಗಿ ನಿಂತ ಪತ್ರಕರ್ತರು. ತಡವಾದ್ದರಿಂದ ಪತ್ರಕರ್ತರು ಕಾಯುತ್ತಾ ಕೂತದ್ದು ಸಹಜವೇ ಬಿಡಿ. ಆದರೆ, ಅಂಥ ಪರಿಸ್ಥಿತಿಯಲ್ಲಿ ಅಮೀರ್ ಏನು ಮಾಡಲಿ ಹೇಳಿ. ತಡವಾದ್ದಕ್ಕೆ ಕ್ಷಮೆ ಕೇಳಲೂ ಪುರುಸೊತ್ತಿಲ್ಲದಂತೆ, ಇನ್ನೇನು ಪತ್ರಕರ್ತರಿಂದ ಪ್ರಶ್ನೆಗಳು ಎರಗುತ್ತವೆ ಅನ್ನುವ ಮೊದಲೇ ಅಮೀರ್ ಖಾನ್ ಪತ್ರಕರ್ತರಲ್ಲಿ, ದಯವಿಟ್ಟು ತನಗೆ ಟಾಯ್ಲೆಟ್ಟಿಗೆ ಅರ್ಜೆಂಟಾಗಿ ಹೋಗಲು ಅನುವು ಮಾಡಿಕೊಡಿ ಎಂದು ಪುಸಕ್ಕನೆ ಓಡಿಯೇ ಬಿಟ್ಟರು. ಅಮೀರ್ ಖಾನ್ ಈ ಅವತಾರ ಕಂಡು ಪತ್ರಕರ್ತರಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಓಡಿದ ಅಮೀರ್ ಒಂದೈದು ನಿಮಿಷ ಬಿಟ್ಟು ಮತ್ತೆ ಸರಾಗವಾಗಿ ಬಂದು ಪತ್ರಕರ್ತರೆದುರಿಗೆ ಬಂದು ಪ್ರಶ್ನೆಗಳಿಗೆ ಒಡ್ಡಿ ಕೂತರಂತೆ. ಕೂತ ತಕ್ಷಣ ಅಮೀರ್ ಸೇರಿದಂತೆ ಎಲ್ಲರಲ್ಲೂ ನಗೆಗಡಲು!!!