2000ನೇ ಇಸವಿಯಲ್ಲಿ ವಿಶ್ವಸುಂದರಿ ಕಿರೀಟ ಧರಿಸಿ ವಿಶ್ವಕ್ಕೇ ತನ್ನ ಸೌಂದರ್ಯದ ಮೂಲಕ ಬೆರಗು ಮೂಡಿಸಿದ ಚೆಲುವೆ ಪ್ರಿಯಾಂಕಾ ಛೋಪ್ರಾ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಬಾಲಿವುಡ್‌ನಲ್ಲಿ ಭದ್ರವಾಗಿ ತಳವೂರಿರುವ ಪ್ರತಿಭೆ ಎಂದರೆ ತಪ್ಪಾಗಲಾರದು. ಗ್ಲಾಮರ್‌ಗೂ ಸೈ, ನಟನೆಗೂ ಜೈ ಎಂಬ ಈ ಕೃಷ್ಣ ಸಂದರಿ ವಿಶ್ವಸುಂದರಿಯಾಗಿ 9 ವರ್ಷಗಳ ನಂತರ ಮತ್ತೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳಂತೆ!
ಹೌದು. ಆಶ್ಚರ್ಯವಾದರೂ ಸತ್ಯ. ಸೌಂದರ್ಯದೊಂದಿಗೂ ತನ್ನಲ್ಲೊಂದು ಅಪ್ರತಿಮ ಪ್ರತಿಭೆಯಿದೆ, ಆತ್ಮವಿಶ್ವಾಸವಿದೆ, ಅವಿರತ ಶ್ರಮವಿದೆ ಎಂದು ತೋರಿಸಿಕೊಟ್ಟ ಈ ದಿಟ್ಟ ಚೆಲುವೆ ಪ್ರಿಯಾಂಕಾ ಛೋಪ್ರಾ ಈ ಬಾರಿ ವಿಶ್ವಸುಂದರಿ ಸ್ಪರ್ಧೆಗೆ ಹೋಗುತ್ತಿರುವುದಂತೂ ಸತ್ಯ. ಆದರೆ ಖಂಡಿತಾ ರ‌್ಯಾಂಪ್ ಮೇಲೆ ಹೆಜ್ಜೆಹಾಕುವುದಕ್ಕಲ್ಲ. ಬದಲಾಗಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕುವ ಬೆಡಗಿಯರಿಗೆ ಮಾರ್ಕ್ ಹಾಕುವುದಕ್ಕೆ!
ಎಸ್. ಇದು ನಿಜ. ಈ ಗಂಭೀರವದನದ ಚೆಲುವೆ ಪ್ರಿಯಾಂಕಾ ಮುಂಬರುವ ವಿಶ್ವಸುಂದರಿ ಸ್ಪರ್ಧೆಯ ತೀರ್ಪುಗಾರಳಾಗಿ ಲಂಡನ್‌ಗೆ ಹಾರಲಿದ್ದಾಳೆ. ಯಾರಿಗುಂಟು ಯಾರಿಗಿಲ್ಲ, ಇಂತಹ ಅಪೂರ್ವ ಅವಕಾಶ! 18ರ ಹರೆಯದಲ್ಲೇ ವಿಶ್ವಸುಂದರಿಯಾಗಿ ಗೆಲುವಿನ ನಗೆ ಬೀರಿದ ಅದೇ ವೇದಿಕೆಗೆ ಮತ್ತೆ ತೀರ್ಪುಗಾರಳಾಗಿ ಹೋಗುವುದೆಂದರೆ ಕುಚೋದ್ಯವೇ!?
ತೀರ್ಪುಗಾರಳಾಗಿ ವಿಶ್ವಸುಂದರಿ ಸ್ಪರ್ಧೆಗೆ ಆಗಮಿಸಬೇಕೆಂದು ಲಂಡನ್‌ನಿಂದ ಆಹ್ವಾನ ಬಂದದ್ದೇ ತಡ, ಪ್ರಿಯಾಂಕಾ ಚೋಪ್ರಾಗೆ ಆಕಾಶಕ್ಕೆ ಮೂರೇ ಗೇಣು. ನಾನು ಹದಿಹರೆಯದಲ್ಲಿ ತಪ್ಪು ತಪ್ಪು ಹೆಜ್ಜೆಗಳನ್ನಿಡುತ್ತಾ, ಲಂಡನ್‌ನ ಆ ವೇದಿಕೆಯಲ್ಲಿ ದಿಟ್ಟ ಹೆಜ್ಜೆಯಿಟ್ಟು, ಪ್ರಶ್ನೆಗಳಿಗೆ ಎದೆಸೆಟೆಸಿ ನಿಂತು ಗಾಂಭೀರ್ಯವದನದಲ್ಲಿ ಆತ್ಮವಿಶ್ವಾಸದ ಉತ್ತರಗಳನ್ನಾಡಿ ವಿಶ್ವಸುಂದರಿ ಕಿರೀಟವನ್ನು ತೊಟ್ಟ ಆ ಘಳಿಗೆ ಮರೆಯಲು ಸಾಧ್ಯವೇ ಇಲ್ಲ. ಮತ್ತೆ ಅದೇ ವೇದಿಕೆಯೆಡೆಗೆ ತೀರ್ಪುಗಾರಳಾಗಿ ಹೋಗೋದು ನನ್ನ ಪಾಲಿನ ಅದೃಷ್ಟವೇ ಸರಿ. ಇದು ನನ್ನ ಜೀವನದಲ್ಲೊಂದು ಅತ್ಯುತ್ತಮ ಮೈಲಿಗಲ್ಲು ಎಂದು ಪ್ರಿಯಾಂಕಾ ಛೋಪ್ರಾ ಸಂತಸ ಹಂಚಿಕೊಂಡಿದ್ದಾರೆ.
ಅಂದಿಂದ ಇಂದಿನವರೆಗಿನ 9 ವರ್ಷಗಳಲ್ಲಿ ಪ್ರಿಯಾಂಕಾ ಛೋಪ್ರಾ ತನ್ನ ವೃತ್ತಿ ಜೀವನದಲ್ಲಿ ಎಲ್ಲೂ ತಿರುಗಿ ನೋಡಲಿಲ್ಲ. ಸದ್ಯ ಬಾಲಿವುಡ್‌ನಲ್ಲಿ ನಂಬರ್ ವನ್ ಸ್ಥಾನದ ಪೈಪೋಟಿಯಲ್ಲಿರುವ ಮೂರು ನಟಿಯರ ಪೈಕಿ ಒಬ್ಬಾಕೆ. ಕತ್ರಿನಾ ಕೈಫ್, ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಛೋಪ್ರಾ ಸದ್ಯ ಬಾಲಿವುಡ್ಡಿನ ಹಾಟ್ ಬೆಡಗಿಯರಷ್ಟೇ ಅಲ್ಲ, ಅತ್ಯಂತ ಹೆಚ್ಚು ಬೇಡಿಕೆಯ ನಟೀಮಣಿಯರು!