ಬಾಲಿವುಡ್ ನಟ ಅಮೀರ್ ಖಾನ್ ಸಂಪೂರ್ಣ ವಿವರ ತೆಗೆದುಕೊಳ್ಳದೆ ರೂಂ ಕೊಟ್ಟದ್ದು ಈಗ ವಾರಣಾಸಿಯ ಮೊಘಲ್ ಸರಾಯ್‌ನ ಹೋಟೆಲೊಂದರ ಭವಿಷ್ಯಕ್ಕೇ ಮುಳುವಾಗಿದೆ. ತಮ್ಮ ಮುಂದಿನ ಚಿತ್ರ ತ್ರೀ ಈಡಿಯಟ್ಸ್‌ನ ಪ್ರಚಾರಕ್ಕಾಗಿ ಅಮೀರ್ ಖಾನ್ 3 ದಿನ ಅಜ್ಞಾತವಾಗಿ ತನ್ನ ಒಂಭತ್ತು ಮಂದಿ ಸಂಗಡಿಗರೊಂದಿಗೆ ವಾರಣಾಸಿಗೆ ದೌಡಾಯಿಸಿದ್ದರು. ಇಲ್ಲಿನ ಸರಸ್ವತಿ ಹೊಟೇಲಿನಲ್ಲಿ ಅಮೀರ್ ಮತ್ತು ಅವರ ಸಂಗಡಿಗರು ಅಕ್ರಮ್ ಷಾ ಹಾಗೂ ತಂಡ ಎಂಬ ಹೆಸರಿನಲ್ಲಿ ಏಳು ಕೋಣೆಗಳನ್ನು ಕಾಯ್ದಿರಿಸಿದ್ದರು.
ಆದರೆ ಅಮೀರ್ ಅವರ ನೈಜ ವಿವರಗಳನ್ನು ಪಡೆಯದೆ ಹೊಟೇಲಿನಲ್ಲಿರಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಟೇಲು ಮಾಲಿಕರಿಗೆ ನೋಟೀಸು ಜಾರಿ ಮಾಡಲಾಗಿದೆ. ಹೊಟೇಲಿನ ಪರವಾನಗಿ ರದ್ದಾಗುವ ಸಾಧ್ಯತೆಗಳೂ ಇವೆ.
ಹಿಂದುಗಳ ಪವಿತ್ರ ಕ್ಷೇತ್ರವಾದ ವಾರಣಾಸಿ ಅಮೀರ್ ಖಾನ್ ಅವರ ತಾಯಿಯ ಹುಟ್ಟೂರು. ತ್ರೀ ಈಡಿಯಟ್ಸ್ ಚಿತ್ರದ ವಿನೂತನ ಪ್ರಚಾರಕ್ಕೂ ಸೇರಿದಂತೆ ತನ್ನ ಬೇರುಗಳನ್ನು ಹುಡುಕಿಕೊಂಡು ಬಂದ ಅಮೀರ್ ಖಾನ್ ವಾರಣಾಸಿಯ ಮೊಘಲ್ ಸೆರಾಯ್ ಪ್ರದೇಶದ ಸರಸ್ವತಿ ಹೊಟೇಲಿನಲ್ಲಿ ಉಳಿದುಕೊಂಡಿದ್ದರು. ಪೊಲೀಸ್ ಭದ್ರತೆ ಸೇರಿದಂತೆ ಮೊದಲೇ ತಾನು ವಾರಣಾಸಿಗೆ ಬರೋದು ಗೊತ್ತಾಗಿಬಿಟ್ಟರೆ ಜನಜಂಗುಳಿ ಸೃಷ್ಟಿಯಾಗುತ್ತದೆಂಬ ದೃಷ್ಟಿಯಿಂದ ಅಮೀರ್ ಖಾನ್ ಬೇನಾಮಿ ಹೆಸರಿನಲ್ಲಿ ಕೋಣೆಗಳನ್ನು ಮೊದಲೇ ಕಾಯ್ದಿರಿಸಿದ್ದರು.
ಅಜ್ಜನ ವೇಷ ಧರಿಸಿ ತಲೆಗೊಂದು ರುಮಾಲು ಹೊದೆದು ಅಮೀರ್ ಖಾನ್ ಎಂಬ ಗುರುತೇ ಹತ್ತದಂತೆ ವಾರಣಾಸಿ, ಬನಾರಸ್ ಮತ್ತಿತರ ಹಲವೆಡೆ ಸುತ್ತಿದ ಅಮೀರ್ ಖಾನ್, ವಾರಣಾಸಿಯಲ್ಲಿ ತನ್ನ ಅಮ್ಮನ ಹಳೆಯ ಸಂಬಂಧಿಗಳನ್ನು ಪತ್ತೆ ಹಚ್ಚಿ ಅವರ ಮನೆಗೆ ತೆರಳಿ, ನಂತರ ವಾರಣಾಸಿಯಲ್ಲಿ ತನ್ನ ಮುಂಬರುವ ತ್ರೀ ಈಡಿಯಟ್ಸ್ ಚಿತ್ರದ ಪ್ರಚಾರವನ್ನೂ ನಡೆಸಿ ಭಾನುವಾರ ಮುಂಬೈಗೆ ವಾಪಾಸಾದರು. ಅಮೀರ್ ಮುಂಬೈಗೆ ವಾಪಾಸಾದ ಮೇಲೆ ಪೊಲೀಸರಿಗೆ ಅಮೀರ್ ತನ್ನ ಹೆಸರನ್ನು ನೀಡದೆ ಹೊಟೇಲಿನಲ್ಲಿ ಉಳಕೊಂಡ ವಿಷಯ ಗೊತ್ತಾಗಿ ವಿವಾದದ ಸ್ವರೂಪ ತಾಳಿದೆ. ಅಲ್ಲದೆ, ಅಮೀರ್ ಖಾನ್ ಅವರು ತನ್ನ ಹೆಸರನ್ನು ತಪ್ಪು ನೀಡಿದ್ದರಲ್ಲಿ ಪ್ರಮುಖ ದೋಷ ಇರೋದು ಹೊಟೇಲಿನ ಸಿಬ್ಬಂದಿಗಳದ್ದೇ ಎಂದಿರುವ ಪೊಲೀಸರು, ಹೊಟೇಲಿನ ಸಿಬ್ಬಂದಿ ಅಮೀರ್ ಖಾನ್ ಅವರ ಪೂರ್ವಾಪರ ವಿಚಾರಿಸದೆ, ಯಾವುದೇ ದಾಖಲೆಗಳನ್ನೂ ಕೇಳದೇ ಹೊಟೇಲು ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ. ಹೊಟೇಲಿನ ಪರವಾನಗಿ ರದ್ದಾಗುವ ಸಾಧ್ಯತೆಗಳೂ ಇವೆ ಎಂದು ಪೊಲೀಸರು ತಿಳಿಸಿದ್ದಾರೆ!