ಹುಡ್ಗೀರಿಗೆ ತನ್ನದೇ ನಗ್ನ ಚಿತ್ರದಲ್ಲಿ ಶಾರೂಖ್ ಆಟೋಗ್ರಾಫ್
ಹೀಥ್ರೂನಲ್ಲಿ ಸೀ-ಥ್ರೂ
ಲಂಡನ್, ಬುಧವಾರ, 10 ಫೆಬ್ರವರಿ 2010( 15:30 IST )
IFM
ವಿಮಾನ ನಿಲ್ದಾಣಗಳಲ್ಲಿ ಭದ್ರತೆಗಾಗಿ ಇರಿಸಲಾಗಿದ್ದ ಪೂರ್ಣ ಶರೀರದ ಎಕ್ಸ್-ರೇ ಸ್ಕ್ಯಾನ್ ಭದ್ರತೆಗಾಗಿ ನಿಯೋಜಿಸಲಾಗಿದ್ದರೂ, ಪ್ರಖ್ಯಾತ ತಾರೆಗಳು ಅದನ್ನು ಆಟೋಗ್ರಾಫ್ ನೀಡಲೂ ಉಪಯೋಗಿಸಬಹುದಾಗಿದೆ! ಇಂಥದ್ದೊಂದು ಅವಾಂತರಕ್ಕೆ ಸಾಕ್ಷಿಯಾಗಿದ್ದಾರೆ ಬಾಲಿವುಡ್ ನಟ ಶಾರೂಖ್ ಖಾನ್. ಪೂರ್ಣ ದೇಹದ ಸ್ಕ್ಯಾನ್ ಮೂಲಕ ಹೊರಬಂದ ತನ್ನದೇ ಚಿತ್ರವನ್ನು ಮುಂದೆ ಹಿಡಿದ ಇಬ್ಬರು ಹುಡುಗಿಯರಿಗೆ ಅದರ ಮೇಲೆಯೇ ಸಹಿ ಮಾಡುವ ಮೂಲಕ ಶಾರೂಖ್ ಆಟೋಗ್ರಾಫ್ ನೀಡಿದ್ದಾರೆ.
ಮಾನವನ ದೇಹವನ್ನು ಪೂರ್ಣವಾಗಿ ಸ್ಕ್ಯಾನ್ ಮಾಡಿ ಈ ಎಕ್ಸ್-ರೇ ಯಂತ್ರವು ಚಿತ್ರವನ್ನು ಹೊರ ಹಾಕುತ್ತದೆ. ಅದನ್ನು ಭದ್ರತಾ ಅಧಿಕಾರಿಗಳು ಪರಿಶೀಲಿಸಿದ ಬಳಿಕ ತಕ್ಷಣವೇ ನಾಶಪಡಿಸಲಾಗುತ್ತದೆ ಮತ್ತು ಇದು ಪ್ರಯಾಣಿಕರ ಗೋಪ್ಯತೆಗೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟುಮಾಡದು ಎಂದು ಬ್ರಿಟಿಷ್ ಸಾರಿಗೆ ವಿಭಾಗದ ಕಾರ್ಯದರ್ಶಿ ಕಳೆದ ವಾರ ಹೇಳಿಕೆ ನೀಡಿದ್ದರು. ಆದರೆ ಇದೀಗ ಶಾರೂಖ್ ಅವರ ಹೇಳಿಕೆಗೆ ಈ ರೀತಿ ಸವಾಲು ಒಡ್ಡಿದಂತಾಗಿದೆ.
ಬಿಬಿಸಿ ಟಾಕ್ ಶೋದಲ್ಲಿ ಮಾತನಾಡುತ್ತಿದ್ದ ಶಾರೂಖ್ ಇದನ್ನು ಬಹಿರಂಗವಾಗಿಯೇ ಪ್ರಸ್ತಾಪಿಸಿ, ಇಬ್ಬರು ಮಹಿಳಾ ಭದ್ರತಾಧಿಕಾರಿಗಳಿಗೆ ತಾನು ತನ್ನ ನಗ್ನ ದೇಹದ ಸ್ಕ್ಯಾನ್ ಮಾಡಿದ ಫೋಟೋ ಮೇಲೆ ಆಟೋಗ್ರಾಫ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ 'ಫ್ರೈಡೇ ನೈಟ್ ವಿದ್ ಜೊನಾಥನ್ ರಾಸ್' ಕಾರ್ಯಕ್ರಮ ಶುಕ್ರವಾರ ರಾತ್ರಿ ಬಿಬಿಸಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
'ನಾನು ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಸ್ಕ್ಯಾನರ್‌ನಿಂದ ಹೊರಬಂದಾಗ, ಈ ಹುಡುಗಿಯರು ಚಿತ್ರವನ್ನು ಮುಂದೆ ಹಿಡಿದರು ನಾನು ಅವರತ್ತ ನೋಡಿದೆ. ಅವರು ಭದ್ರತಾ ಸಮವಸ್ತ್ರದಲ್ಲಿದ್ದುದರಿಂದ, ಬಹುಶಃ ಇದು ಕೂಡ ಭದ್ರತಾ ಕ್ರಮವಾಗಿರಬಹುದು, ಇದಕ್ಕೆ ನಾನು ಸಹಿ ಹಾಕುವುದು ಕಡ್ಡಾಯವೇನೋ ಎಂದುಕೊಂಡೆ. ಅದರಲ್ಲಿ ಎಲ್ಲವೂ ಕಾಣಿಸುತ್ತಿತ್ತು. ಕೊನೆಗೆ ನಾನು ಸಹಿ ಹಾಕಿ ಅವರಿಗೆ ಕೊಟ್ಟೆ' ಎಂದು ಟಾಕ್ ಶೋದಲ್ಲಿ ಶಾರೂಖ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಹೀಥ್ರೂ ಹಾಗೂ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣಗಳಲ್ಲಿ ಈ 'ಸೀ-ತ್ರೂ' ಎಕ್ಸ್‌ರೇ ಕ್ಯಾಮರಾಗಳಿವೆ.
'ನನ್ನ ಹೆಸರಿನಿಂದಾಗಿ ಯಾವಾಗಲೂ ಭದ್ರತಾ ಅಧಿಕಾರಿಗಳು ನನ್ನನ್ನು ತಡೆಯುತ್ತಾರೆ. ಪಾಶ್ಚಾತ್ಯ ಜಗತ್ತು ಬಹುಶಃ ಈ ಬಗ್ಗೆ ಆತಂಕ ಹೆಚ್ಚೇ ಇದೆ' ಎಂದು ಶಾರೂಖ್ ತಮ್ಮ 'ಮೈ ನೇಮ್ ಈಸ್ ಖಾನ್' ಎಂಬ ಚಿತ್ರವು ಮುಸ್ಲಿಂ ಉಪನಾಮವಾದ ಖಾನ್‌ಗೆ ಸಂಬಂಧಿಸಿದ್ದಾಗಿದ್ದು, ತಾನು ಭಯೋತ್ಪಾದಕನಲ್ಲ ಎಂದು ಅಮೆರಿಕ ಅಧ್ಯಕ್ಷರಿಗೆ ಸಂದೇಶ ನೀಡುತ್ತಿರುವುದಾಗಿ ವಿವರಣೆ ನೀಡುತ್ತಾ ಹೇಳಿದ್ದಾರೆ.