ಬಾಲಿವುಡ್ಡಿನ ಹಾಟ್ ಬೆಡಗಿ ಹಾಗೂ ನಂ 1 ಪಟ್ಟಕ್ಕೆ ಪೈಪೋಟಿ ನೀಡುವ ನಾಯಕಿ ನಟಿ ಕರೀನಾ ಕಪೂರ್‌ಗೆ ಅತ್ಯಂತ ಕೆಟ್ಟ ನಟಿ ಎಂಬ ಪ್ರಶಸ್ತಿ ದೊರೆತಿದೆ. ಹೌದು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕರೀನಾ ಕಪೂರ್ ಅಥ್ಯಂತ ಕೆಟ್ಟ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ಹರ್ಮಾನ್ ಬವೇಜಾ ಅತ್ಯಂತ ಕೆಟ್ಟ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕರೀನಾ ಕಪೂರ್ ಕಳೆದ ವರ್ಷ ಅಕ್ಷಯ್ ಕುಮಾರ್ ಜೊತೆಗೆ ನಟಿಸಿದ್ದ ಕಂಭಕ್ತ್ ಇಷ್ಕ್ ಚಿತ್ರದಲ್ಲಿ ಪುರುಷ ದ್ವೇಷಿಯಾಗಿ ಅಭಿನಯಿಸಿದ ಪಾತ್ರದ ಮೂಲಕ ಕರೀನಾರನ್ನು ಅತೀ ಕೆಟ್ಟ ನಟಿ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾಟ್ಸ್ ಯುವರ್ ರಾಶಿ? ಚಿತ್ರದ ಅಭಿನಯಕ್ಕಾಗಿ ಹರ್ಮಾನ್ ಭವೇಜಾರನ್ನು ಅತ್ಯಂತ ಕೆಟ್ಟ ನಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಾಲಿವುಡ್ಡಿನ ಕಾಮಿಡಿ ಕಲಾವಿದ ಸಿರಸ್ ಬ್ರೋಚಾ ಈ ಪ್ರಶಸ್ತಿ ಪ್ರದಾನ ಸಮಾರಂಭದ ಅತಿಥಿಯಾಗಿದ್ದು, ಅವರು ಸಿರಸ್ ಬ್ರೋಚಾ ಸ್ಮಾರಕ ಪ್ರಶಸ್ತಿಯನ್ನು ಘೋಷಿಸಿದರು. ಹಾಗಾಗಿ ಇದೊಂದು ತಮಾಷೆಗಾಗಿ ಇರುವ ಪ್ರಶಸ್ತಿ!!!
ಪೇಜ್ 3, ಜೈಲ್, ಕಾರ್ಪೋರೇಟ್, ಫ್ಯಾಷನ್ ಮತ್ತಿತರ ಸಹಜ ಹಾಗೂ ಸಾಮಾಜಿಕ ಚಿತ್ರಗಳ ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ 'ಬಜ್ ಕೀಜಿಯೇ ಬಹುತ್ ಹೋ ಗಯಾ' (ಸಾಕು ನಿಲ್ಲಿಸಿ, ತುಂಬಾ ಜಾಸ್ತಿಯಾಯಿತು) ಪ್ರಶಸ್ತಿ ದೊರತಿದೆ!
ಅತಿ ಕೆಟ್ಟ ಪೋಷಕ ನಟಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. ಚಾಂದಿನಿ ಚೌಕ್ ಟು ಚೀನಾ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಈ ಪ್ರಶಸ್ತಿಗೆ ಪಾತ್ರರಾಗಿದ್ದರೆ, ರಣವೀರ್ ಶೋರೇ ಅವರಿಗೆ ಅತಿ ಕೆಟ್ಟ ಪೋಷಕ ನಟ ಪ್ರಶಸ್ತಿ ದಕ್ಕಿದೆ. ಇನ್ನು ಕೆಟ್ಟ ನಿರ್ದೇಶಕ ಪ್ರಶಸ್ತಿ ವಾಟ್ಸ್ ಯುವರ್ ರಾಶಿ ಚಿತ್ರ ನಿರ್ದೇಶಿಸಿದ ಅಶುತೋಷ್ ಗೌರೀಕರ್ ಅವರಿಗೆ ಲಭ್ಯವಾಗಿದೆ.
ಅತಿ ಕೆಟ್ಟ ಹೊಸಬರ ಪ್ರಶಸ್ತಿಗೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹಾಗೂ ಜಾಕಿ ಬಾಗ್ನಾನಿ ಆಯ್ಕೆಯಾಗಿದ್ದಾರೆ. ಶ್ರುತಿ ಲಕ್ ಚಿತ್ರದಲ್ಲಿ ತಮ್ಮ ಲಕ್ಕನ್ನು ಪರೀಕ್ಷಿಸಿ ಸೋತಿದ್ದರು. ಜಾಕಿ ಕಲ್ ಕಿಸ್ನೇ ದೇಖಾದಲ್ಲಿ ಮೊದಲ ಬಾರಿ ಬಣ್ಣಹಚ್ಚಿದ್ದರು. ದಿಲ್ ಬೋಲೆ ಹಡಿಪ್ಪಾ ಚಿತ್ರದ ರಾಣಿ ಮುಖರ್ಜಿ ಹಾಗೂ ಶಾಹಿದ್ ಕಪೂರ್ ಜೋಡಿಗೆ ಅತಿ ಕೆಟ್ಟ ಜೋಡಿ ಪ್ರಶಸ್ತಿ ದೊರೆತಿದೆ.