ದೀಪಿಕಾ ಪಡುಕೋಣೆಗೂ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ ಮಲ್ಯಾಗೂ ನಡುವೆ ಏನೋ ಕುಚ್ ಕುಚ್ ನಡೀತಾ ಇದೆ ಅಂತ ಇತ್ತೀಚೆಗೆ ಐಪಿಎಲ್ ನೋಡಿದವರೆಲ್ಲರೂ ಅಂದುಕೊಂಡಿದ್ದಕ್ಕೆ, ಸುದ್ದಿಯಾದುದಕ್ಕೆ ಕಾರಣವಿದೆ. ಸಿದ್ಧಾರ್ಥ್ ಹಾಗೂ ದೀಪಿಕಾ ಕೈ ಕೈ ಹಿಡಿದು ಸುತ್ತಾಡುವುದು, ಜೊತೆಜೊತೆಯಲ್ಲೇ ಐಪಿಎಲ್ ಪಂದ್ಯ ವೀಕ್ಷಿಸುವುದು ನೋಡಿದವರು ಹಾಗಂದುಕೊಂಡರು. ಅಷ್ಟೇ ಅಲ್ಲ, ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ವಿಜಯಿಯಾದಾಗ ಖುಷಿಯಲ್ಲಿ ಓಡೋಡಿ ಬಂದ ಸಿದ್ದಾರ್ಥ್ ದೀಪಿಕಾಳನ್ನು ತಬ್ಬಿ ನೀನು ನನ್ನ ಅದೃಷ್ಟ ತಾರೆ. ಇಂದು ರಾತ್ರಿ ನಿನಗೊಂದು ದೊಡ್ಡ ಗಿಫ್ಟ್ ನೀಡುತ್ತೇನೆ ಎಂದಿದ್ದು ಅಲ್ಲೇ ಇದ್ದ ಹಲವು ಕಿವಿಗಳಿಗೆ ಬಿದ್ದಿತ್ತು. ಅಷ್ಟೇ ಸಾಕಿತ್ತು, ಸುದ್ದಿ ಹಬ್ಬಲು ರೆಕ್ಕೆಪುಕ್ಕ.
ಅದೇನೇ ಇರಲಿ. ಸಿದ್ಧಾರ್ಥ್ ಮಲ್ಯ ಎಂಬ ಮದ್ಯದ ದೊರೆಯ ರಾಜಕುಮಾರನಿಗೂ, ದೀಪಿಕಾಗೂ ಕುಚ್ ಕುಚ್ ನಡೀತಾ ಇದೆಯೋ ಇಲ್ವೋ ಅನ್ನೋದು ಖಂಡಿತ ಅವರಿಬ್ಬರ ಹೃದಯಕ್ಕೆ ಮಾತ್ರ ಗೊತ್ತು. ಆದರೆ ಮಗನ ಪರವಾಗಿ ಅಪ್ಪ ವಿಜಯ್ ಮಲ್ಯ ಮಾತ್ರ ಇತ್ತೀಚೆಗೆ, ದೀಪಿಕಾ ತುಂಬ ಹಳೇ ಪರಿಚಯ. ಈಗ ಆಕೆ ನಮ್ಮ ತಂಡದ ರಾಯಭಾರಿ ಕೂಡಾ. ಸಿದ್ಧಾರ್ಥ್ ಹಾಗೂ ದೀಪಿಕಾ ನಡುವೆ ಬಹಳ ಹಿಂದಿನಿಂದಲೂ ಸ್ನೇಹ ಇದೆ. ಅದು ಬಿಟ್ಟರೆ ಅವರ ನಡುವೆ ಬೇರೇನೂ ಇಲ್ಲ ಎಂದಿದ್ದರು.
ವಿಚಿತ್ರವೆಂದರೆ, ದೀಪಿಕಾ ಮಾತ್ರ ನಮ್ಮ ನಡುವೆ ಏನೂ ಇಲ್ಲ ಅಂತ ಎಲ್ಲೂ ಹೇಳಿಲ್ಲ. ಬದಲಾಗಿ, ಇಂಥ ಗಾಸಿಪ್ ನನ್ನ ವೃತ್ತಿಯ ಜೊತೆಜೊತೆಗೇ ಬರುತ್ತದೆ ಎಂಬುದು ನನಗೆ ಗೊತ್ತು. ಹಾಗಾಗಿ ಆ ಬಗ್ಗೆ ಚಿಂತೆಯೇನಿಲ್ಲ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹಾವು ಸಾಯದಂತೆ ಕೋಲು ಮುರಿಯದಂತೆ ಜಾಣತನದಿಂದ ಮಾತನಾಡುತ್ತಾಳೆ.
IFM
ನಾನು ನನ್ನ ಜೀವನದಲ್ಲಿ ಅತ್ಯಂತ ಸಂತೃಪ್ತಿಯಿಂದಿದ್ದೇನೆ. ನನಗೆ ನನ್ನ ಜೀವನದ ಬಗ್ಗೆ ಖುಷಿಯಿದೆ. ನಾನು ಮಾಡುತ್ತಿರುವ ವೃತ್ತಿ ಬಗ್ಗೆ ಪ್ರೀತಿಯಿದೆ. ಅಂಥಾ ಸಂದರ್ಭದಲ್ಲಿ ಇಂಥ ಗಾಸಿಪ್ ಎಲ್ಲಾ ಸಾಮಾನ್ಯ. ಹಾಗಾಗಿ ಇವುಗಳೆಲ್ಲ ನನ್ನಲ್ಲಿ ಚಿಂತೆ ತರಿಸುವುದೇ ಇಲ್ಲ. ಅಂಥವುಗಳ ಬಗ್ಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ. ನನ್ನ ಗಮನ ಕೆಲಸದೆಡೆಗೆ ಮಾತ್ರ ಎನ್ನುತ್ತಾರೆ ದೀಪಿಕಾ.
ಬಾಲಿವುಡ್ಡಿಗೆ ಎಂಟ್ರಿ ಕೊಟ್ಟ ಮೇಲೆ ರಣಬೀರ್ ಕಪೂರ್ ಜೊತೆ ಬರೋಬ್ಬರಿ ಒಂದು ವರ್ಷ ಕಾಲ ಪಾರ್ಟಿ, ಕ್ಲಬ್ಬು, ಡಿನ್ನರ್ ಅಂತ ಸುತ್ತಾಡಿದ ಮೇಲೆ ದೀಪಿಕಾ ಫರ್ಹಾನ್ ಅಕ್ತರ್ ಜೊತೆಗೆ, ಶಾಹಿದ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತು. ಅದರ ಜೊತೆಗೀಗ ಸಿದ್ಧಾರ್ಥ್ ಮಲ್ಯ ಹೆಸರೂ ಸೇರಿಕೊಂಡಿದೆ. ಒಟ್ಟಾರೆ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಬಿಡಿ ಅಂತ ಸುಮ್ಮನಾಗಬೇಕು ಅಷ್ಟೆ.