ಲಕ್ ತನ್ನ ಹೆಸರಿನಂತೆಯೇ ಜನರ ಅದೃಷ್ಟದ ಕಥೆಯನ್ನೇ ಹೊಂದಿದೆ. ಅದೃಷ್ಟವೆಂಬುದು ಹೇಗೆ ಕಾಲಕಾಲಕ್ಕೆ ಬದಲಾಗುತ್ತಲೇ ಹೋಗುತ್ತದೆ ಎಂಬುದು ಕಥೆಯ ಜೀವಾಳ, ತಿರುಳು.
ರಾಮ್ ಮೆಹ್ರಾ (ಇಮ್ರಾನ್ ಖಾನ್) ಹಲವು ಕಷ್ಟಕೋಟಲೆಗಳಿಗೆ ಸಿಕ್ಕಿ ನರಳುತ್ತಿರುತ್ತಾನೆ. ಆತನ ಬಳಿ ತಾಕತ್ತಿದೆ, ಶಕ್ತಿಯಿದೆ ಪ್ರತಿಭೆಯಿದೆ. ಆದರೆ ಅವುಗಳ ಉಪಯೋಗಕ್ಕೆ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಇಂತಿಪ್ಪ ಸ್ಥಿತಿಯಲ್ಲಿ ದಾರುಣ ಬೇಗುದಿಯಲ್ಲಿ ರಾಮ್ ಮೆಹ್ರಾ ಬದುಕಿನ ಕರಾಳ ದಿನಗಳಲ್ಲಿ ನರಳುತ್ತಿರುವಾಗ ಇದ್ದಕ್ಕಿದ್ದಂತೆ ಬದುಕು ಬದಲಾಗುತ್ತದೆ. ಆತನಿಗೆ ಬಂದ ಅವಕಾಶವನ್ನು ತನ್ನ ಎಲ್ಲ ಪ್ರಯತ್ನದಿಂದ ಪಡೆದು ಅದರಲ್ಲಿ ಸಫಲನಾಗುವ ಯಾತ್ರೆಯ ಕಥೆಯಿದು.
ಆದರೆ ತನ್ನ ಕಷ್ಟದ ದಿನಗಳು ಮುಗಿದಿಲ್ಲ ಎಂಬುದನ್ನು ರಾಮ್ ಮೆಹ್ರಾ ಯೋಚಿಸಿರುವುದೇ ಇಲ್ಲ. ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಆತನ ಅದೃಷ್ಟ ಪರೀಕ್ಷೆಗೊಳಗಾಗುತ್ತದೆ. ಬೆಟ್ಟಿಂಗ್ ಉದ್ಯಮದಲ್ಲಿ ತನ್ನದೇ ಯೋಚನೆಯಂತೆ ನಡೆಯುತ್ತದೆ ಎನ್ನುವ ಮೌಸಾ (ಸಂಜಯ್ ದತ್) ರಾಮ್ ಮೆಹ್ರಾನ ಎಲ್ಲ ಅಡೆತಡೆಗಳಿಗೂ ಕಾರಣನಾಗುತ್ತಾನೆ. ಇಂತಹ ಅದೃಷ್ಟ ಪರೀಕ್ಷೆಯ ಯಾತ್ರೆಯಲ್ಲಿ ಆತನ ಜತೆಯಾಗುವುದು ಶ್ರುತಿ ಹಾಸನ್ ( ರಾಮ್ ಪ್ರೇಯಸಿ), ಮಿಥುನ್ ಚಕ್ರವರ್ತಿ, ಡ್ಯಾನಿ.ಚಿತ್ರಾಶಿ ರಾವತ್, ರವಿ ಕಿಶನ್ ಮತ್ತಿತರರು.
IFM
ಚಿತ್ರದಲ್ಲಿ ಲಕ್ ಅರ್ಥಾತ್ ಅದೃಷ್ಟ ಎಂಬುದಕ್ಕೆ ವಿವರಣೆ ಹೀಗಿದೆ. ಅವಕಾಶವೆಂಬುದು ಜೀವನದ ಕದ ತಟ್ಟಿದಾಗ, ಬಾಗಿಲು ತೆರೆದು ಉತ್ತರ ಹೇಳುವುದೇ ಲಕ್ ಅರ್ಥಾತ್ ಅದೃಷ್ಟ.
ಈ ಚಿತ್ರದಲ್ಲಿ ಯುವಜನರ ಹಾಟ್ ಫೇವರಿಟ್, ಅಮೀರ್ ಖಾನ್‌ರ ಸೋದರ ಸಂಬಂಧಿ ಜಾನೇ ತು... ಪ್ರಸಿದ್ಧಿಯ ಹುಡುಗ ಇಮ್ರಾನ್ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಅದೃಷ್ಟ ಪರೀಕ್ಷೆಯ ಹಾದಿಯಲ್ಲಿ ಇಮ್ರಾನ್ ಖಾನ್ ಆಕ್ಷನ್ ಲುಕ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಳ್ಳಗೆ ಬೆಳ್ಳಗೆ ಸೆಕ್ಸೀಯಾಗಿರುವ ಗಾಯಕಿ ಶ್ರುತಿ ಹಾಸನ್ (ಕಮಲ್ ಹಾಸನ್ ಮಗಳು) ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ನಟನೆಯ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಹಲವೆಡೆ ಲಕ್ ಚಿತ್ರದ ಶೂಟಿಂಗ್ ನಡೆದಿದೆ. ನಮೀಬಿಯಾದಲ್ಲಿ ಮೈನವಿರೇಳಿಸುವ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಈಗಾಗಲೇ ಚಿತ್ರದ ಪ್ರೋಮೋಗಳು ಪ್ರೇಕ್ಷಕರಲ್ಲಿ ಆಸಕ್ತಿ ಕೆರಳಿಸಿದೆ.
2005ರಲ್ಲಿ ಕಾಲ್ ಎಂಬ ಚಿತ್ರ ನಿರ್ದೇಶಿಸಿ ಎಲ್ಲರಿಂದ ಶಹಬ್ಬಾಸ್ ಗಿರಿ ಪಡೆದ ಸೋಹನ್ ಇದರ ನಿರ್ದೇಶಕರು. ಥ್ರಿಲ್ಲರ್ ಖತಾನಕವಾಗಿದ್ದ ಕಾಲ್ ಹಿಂದೆ ಪ್ರೇಕ್ಷಕರನ್ನು ಥಿಯೇಟ್‌ನ ಸೀಟಿನ ತುದಿಯವರೆಗೆ ಕೂರುವಂತೆ ಮಾಡಿತ್ತು. ಹಾಗೂ ಹಿಟ್ ಚಿತ್ರವಾಗುತ್ತದೆ ಎಂದೇ ವಿಮರ್ಶಕರು ಭವಿಷ್ಯ ಬರೆದರೂ, ಸಾಧಾರಣ ಯಶಸ್ಸನ್ನು ಕಾಲ್ ಕಂಡಿತ್ತು. ಈಗ ಬಹಳ ಸಮಯದ ನಂತರ ಅದೇ ಸೋಹಮ್ ಮತ್ತೆ ಈ ಲಕ್ ಎಂಬ ಆಕ್ಷನ್ ಥ್ರಿಲ್ಲರ್ ಕಥೆಯನ್ನು ನಿರ್ದೇಶಿಸಿದ್ದಾರೆ. ಜುಲೈ 24ರಂದು ಬಿಡುಗಡೆ ಕಾಣಲಿರುವ ಲಕ್ ಚಿತ್ರದ ಅದೃಷ್ಟ ಬಾಕ್ಸ್ ಆಫೀಸಿನಲ್ಲಿ ಖುಲಾಯಿಸುತ್ತೋ ಗೊತ್ತಿಲ್ಲ.