ಒಂದೊಳ್ಳೆ ಕೈತುಂಬಾ ಸಂಬಳ ಬರುವ ಕೆಲಸ, ಚೆಂದದ ಚೊಕ್ಕವಾದ ಮನೆ, ಮುದ್ದಾದ ಒಳ್ಳೆಯ ಗರ್ಲ್‌ಫ್ರೆಂಡ್... ಇಷ್ಟಿದ್ದರೆ ಎಂಥ ಮನುಷ್ಯನೂ ಜೀವನದಲ್ಲಿ ಬಿಂದಾಸ್ ಆಗಿ ಸಂತೃಪ್ತ ಬದುಕು ಸಾಗಿಸಿಬಿಡಬಹುದು. ಪರಾಗ್ ದೀಕ್ಷಿತ್ (ನೀಲ್ ನಿತಿನ್ ಮುಖೇಶ್) ಜೀವನ ಕೂಡಾ ಹಾಗೆಯೇ. ರಾತ್ರಿ ಫ್ರೆಂಡ್ಸ್ ಜತೆ ಮಸ್ತಾದ ಪಾರ್ಟಿ ಮಾಡುತ್ತಾ ಬದುಕು ಸಾಗಿಸುತ್ತಿದ್ದ ಪರಾಗ್‌ಗೆ ಮುದ್ದಾದ, ತುಂಬ ಪ್ರೀತಿಸುವ ಗರ್ಲ್‌ಫ್ರೆಂಡ್ ಮಾನಸಿ, ಕೈತುಂಬ ಸಂಬಳ ಬರುವ ಕೆಲಸ, ಚೆಂದದ ಮನೆ ಎಲ್ಲಾ ಇತ್ತು. ಆದರೆ ಇದ್ದಕ್ಕಿದ್ದಂತೆ ವಿಧಿ ಒಬ್ಬ ಮನುಷ್ಯ ಚೆಂದದ ಜೀವನವನ್ನೇ ಹೇಗೆ ತಿರುಗಿಸಿ ಬಿಡುತ್ತದೆ ಎಂಬುದಕ್ಕೆ ಪರಾಗ್ ಜೀವನವೇ ಸಾಕ್ಷಿ.
ರಾತ್ರಿ ಬೆಳಗಾಗುವುದರೊಳಗೆ ಹೀಗೆ ಸುಖಾಸುಮ್ಮನೆ ಮಸ್ತಾದ ಜೀವನ ನಡೆಸುತ್ತಿದ್ದ ಪರಾಗ್ ಜೈಲು ಸೇರಿದ್ದ. ಕೈಗಳಿಗೆ ಕೋಳ ತೊಡಿಸಲಾಗಿತ್ತು. ಪೊಲೀಸರು ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಿದ್ದರು. ಹೊಟ್ಟೆಗೆ ಯದ್ವಾತದ್ವಾ ಬಲವಾಗಿ ಪೆಟ್ಟು ಬೀಳುತ್ತಿತ್ತು. ಇಂತಹ ಸಂದರ್ಭವೆಲ್ಲ ಆತನಿಗೆ ನೆನಪಾಗುತ್ತಿದ್ದುದು ಅಮ್ಮನ ದುಃಖತಪ್ತ ಮುಖ, ಗೆಳತಿ ಮಾನಸಿಯ ಧೈರ್ಯ ತಂದುಕೊಂಡ ಮುಖದ ಹಿಂದಿನ ಕಳವಳ, ಎಲ್ಲವೂ ಮಸುಕು ಮಸುಕಾದ, ಅರ್ಧಂಬರ್ಧ ತೇಪೆ ಹಾಕಿದಂಥಾ ಚಿತ್ರಗಳು ಹಾಗೇ ಮಿಂಚಿ ಮಾಯವಾಗುತ್ತಿದ್ದವು. ಈಗ ಪರಾಗ್ ಜೈಲಿನಲ್ಲಿದ್ದ.
IFM
ನಿಜವಾದ ಜಗತ್ತಿಗಿಂತ ಬಹುದೂರ ಇರುವ, ತನ್ನದೇ ಆದ ನೀತಿ ನಿಯಮಗಳಲ್ಲೇ ಸಾಗುವ, ಇದಕ್ಕಿಂತ ಸಾವೇ ಮೇಲು ಅಂತನಿಸುವ ಜೈಲಿನಲ್ಲಿ ಪರಾಗ್ ಸೇರಿಕೊಂಡು ಬಿಟ್ಟಿದ್ದ. ಬ್ಯಾರಕ್ ನಂ.2 ಎಂಬ ಪುಟ್ಟ ಅಂಗೈಯಗಲದ ಜಾಗ ಪರಾಗ್‌ಗೆ ಸಿಕ್ಕಿತ್ತು. ಕೆಟ್ಟ ಕೊಳಕು ಜಾಗವೇ ಕಾಣುವ, ಬಡ ಮಧ್ಯಮ ವರ್ಗದ ಮಂದಿಯೇ ಕಾಣುವ ಈ ಜೈಲಿನಲ್ಲಿ ಪರಾಗ್ ಏಕಾಂಗಿಯಾಗಿದ್ದ. ಯಾರೊಬ್ಬರೂ ಪರಾಗ್ ಇಂತಹ ಜಾಗದಲ್ಲಿ ಬದುಕಿ ಬಿಡಬಲ್ಲ ಎಂದೆನಿಸಿರಲಿಲ್ಲ, ನವಾಬನೊಬ್ಬನನ್ನು ಬಿಟ್ಟು. ನವಾಬ ಆ ಜೈಲಿನಲ್ಲಿ ರೆಸಿಡೆಂಟ್ ಸೂಪರ್‌ವೈಸಿಂಗ್ ಕನ್ವಿಕ್ಟ್ ಅರ್ಥಾತ್ ವಾರ್ಡರ್. ಆತನಿಗೆ ಪರಾಗ್ ಒಬ್ಬ ಮುಗ್ಧ, ಆತ ಅಪರಾಧಿಯೇ ಅಲ್ಲ ಎಂಬುದು ಗೊತ್ತಿತ್ತು. ಪರಾಗ್‌ನ ಮುಖ ಚರ್ಯೆಯಿಂದಲೇ ನವಾಬ (ಮನೋಜ್ ಭಾಜಪೇಯಿ) ಖಂಡಿತ ಪರಾಗ್ ತಪ್ಪು ಮಾಡಿರಲಿಕ್ಕಿಲ್ಲಿಲ್ಲ ಎಂದು ಮೊದಲೇ ಕಣ್ಣಳತೆಯಿಂದಲೇ ಅಳೆದಿದ್ದ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಧಾನವಾಗಿ ಪರಾಗ್ ತನ್ನ ಸುತ್ತಲ ಜಗತ್ತನ್ನು ಅರಿಯಲು ಶುರು ಮಾಡುತ್ತಾನೆ. ಕೋರ್ಟ್ ಕೇಸುಗಳು, ಬಂಧನ, ಪೆಂಡಿಂಗ್ ಕೇಸುಗಳು, ಕಾಯುವಿಕೆ ಸಮಯ, ಒಡೆದ ಹೃದಯಗಳು, ದುಃಖತಪ್ತ ಆತ್ಮಗಳು... ಹೀಗೆ ಎಲ್ಲವೂ ಪರಾಗ್‌ಗೆ ಅರ್ಥವಾಗುತ್ತಾ ಹೋಗುತ್ತದೆ. ಕೆಲವು ದುಃಖತಪ್ತ ಮಂದಿ ಆ ನಾಲ್ಕು ಗೋಡೆಗಳೊಳಗೇ ಕನಸು ಕಾಣುತ್ತಾ ಭವಿಷ್ಯದ ಭರವಸೆಗಳನ್ನು ಹೆಣೆಯುತ್ತಾ ಇದ್ದುದೂ ಕೂಡಾ ಪರಾಗ್ ಗಮನಿಸಿದ್ದ. ಪರಾಗ್ ಸ್ವತಃ ಅಸಹಾಯಕತೆ, ಬೇಸರ, ಸಿಟ್ಟಿನಿಂದ ಪ್ರಶ್ನಿಸುವ ಧೈರ್ಯ ಎಲ್ಲವನ್ನು ಕಲಿತುಕೊಳ್ಳುತ್ತಾನೆ. ಜತೆಗೆ ತನ್ನ ವಿಧಿಯೇ ಇದು ಎಂದು ವರ್ತಮಾನದಲ್ಲಿ ಹಾಗೆಯೇ ಜೈಲಿನಲ್ಲಿ ಜೀವಿಸಲು ಆರಂಭಿಸುತ್ತಾನೆ.
IFM
ತನ್ನ ಅಸಹಾಯಕತೆಯನ್ನೇ ಸ್ವೀಕರಿಸಲು ಪರಾಗ್ ಯಾಕೆ ಮುಂದಾಗುತ್ತಾನೆ? ಆತನ ಸ್ವಾತಂತ್ರ್ಯ ಆತ ಮತ್ತೆ ಪಡೆಯಲು ಯಾವ ಶಕ್ತಿ ಆತನಿಗೆ ದಾರಿ ತೋರುತ್ತದೆ? ನವಾಬನ ಗೆಳೆತನ, ಬೆಚ್ಚನೆಯ ಭರವಸೆಗಳೇ ಪರಾಗ್‌ಗೆ ಭವಿಷ್ಯದ ಕನಸನ್ನು ಹುಟ್ಟುಹಾಕುತ್ತದಾ? ಸ್ವಾತಂತ್ರ್ಯ ಹಾಗೂ ಭವಿಷ್ಯದ ಭರವಸೆ, ಕನಸು ಈ ಎರಡು ಆಯ್ಕೆಗಳನ್ನು ಆತನ ಮುಂದಿಟ್ಟರೆ ಆತ ಯಾವುದಕ್ಕೆ ಶರಣಾಗುತ್ತಾನೆ?.. ಇಂತಿಪ್ಪ ಪ್ರಶ್ನೆಗಳಿಗೆ ಉತ್ತರ ಕಾಣಲು ಜೈಲ್ ಚಿತ್ರವನ್ನೇ ನೋಡಬೇಕು.
ಬದುಕಿನ ಕಟು ಸತ್ಯವನ್ನು ವಿವರಿಸುವ ಜೈಲ್ ಚಿತ್ರದಲ್ಲಿ ಪರಾಗ್ ದೀಕ್ಷಿತ್‌ನ ಜೀವನದ ಯಾತ್ರೆಯೇ ಚಿತ್ರಿತವಾಗಿದೆ. ಮನುಷ್ಯನ ಕನಸು, ಭಾವುಕ ಮನಸ್ಸಿನ ಅದ್ಭುತ ಚಿತ್ರಣವನ್ನು ತೆರೆಯ ಮೇಲೆ ಹಿಡಿದಿಡುವ ಪ್ರಯತ್ನವೇ ಜೈಲ್. ಇದು ಬದುಕಿನ ರೂಪಕ ಕೂಡಾ.
ನೈಜ ಜೀವನವನ್ನೇ ತೆರೆಯ ಮೇಲೆ ತೆರೆದಿಡುವುದಕ್ಕೇ ಖ್ಯಾತಿವೆತ್ತ ಮಧುರ್ ಭಂಡಾರ್ಕರ್ ಜೈಲ್ ಚಿತ್ರದ ನಿರ್ದೇಶಕರು. ಈವರೆಗೆ ಪೇಜ್ 3, ಟ್ರಾಫಿಕ್ ಸಿಗ್ನಲ್, ಫ್ಯಾಷನ್‌ನಂತಹ ಚಿತ್ರಗಳನ್ನು ನೀಡಿದ ಇವರು ಈಗ ಜೈಲ್ ಚಿತ್ರದ ಮೂಲಕ ಜೈಲಿನ ಸತ್ಯಾಸತ್ಯತೆಯ ಚಿತ್ರಣವನ್ನೇ ಪ್ರೇಕ್ಷಕರ ಮುಂದಿಡಲಿದ್ದಾರೆ.
ಚಿತ್ರದಲ್ಲಿ ಈಗಾಗಲೇ ಆ ದೇಖೇ ಝರಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ತೆರೆಗೆ ಬಂದ, ಹಿಂದಿ ಚಿತ್ರರಂಗದ ಅನನ್ಯ ಗಾಯಕ ಮುಖೇಶರ ಮೊಮ್ಮಗ ನೀಲ್ ನಿತಿನ್ ಮುಖೇಶ್, ಪರಾಗ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿ ಮಾನಸಿಯಾಗಿ ಫ್ಯಾಷನ್ ಚಿತ್ರದ ಮೂಲಕ ಬಾಲಿವುಡ್ಡಿಗೆ ಕಾಲಿಟ್ಟ ಮುಗ್ಧಾ ಗೋಡ್ಸೆ ತಾರಾಗಣದಲ್ಲಿದ್ದಾರೆ. ಇತ್ತೀಚೆಗಷ್ಟೆ ನ್ಯೂಯಾರ್ಕ್ ಚಿತ್ರದಲ್ಲಿ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರನಾಗಿದ್ದ ನೀಲ್ ಈ ಚಿತ್ರದಲ್ಲಿ ಜೈಲಿನ ಕಟು ಸತ್ಯ ಹೊರ ತೋರಿಸಲು ಸ್ವತಃ ಬೆತ್ತಲಾಗಿದ್ದಾರಂತೆ. ನೈಜ ಅಭಿನಯವನ್ನೇ ಬೇಡುವ ಭಂಡಾರ್ಕರ್ ನೀಲ್‌ರಿಂದ ಪ್ರತಿಭೆಯನ್ನೆಲ್ಲ ಬಸಿದು ತೆಗೆದು ಈ ಚಿತ್ರದಲ್ಲಿ ಅದ್ಭುತವಾಗಿ ಕಥೆಯನ್ನು ಬಂಬಿಸಿದ್ದಾರಂತೆ.