ನಿಮ್ಮ ಗೆಳೆಯನ ಮೇಲೆ ದ್ವೇಷ ಅಥವಾ ಒಂದು ಸಣ್ಣದೊಂದು ಕಿರಿಕ್ ಅವನ ಮುಖದಲ್ಲಿ ನೋಡುವ ಆಸೆ ಇದ್ದರೆ ತಕ್ಷಣ ಆತನಿಗೆ ಮಾರಿಗೋಲ್ಡ್ ನೋಡು ಅಂತ ಪುಕ್ಕಟೆ ಸಲಹೆ ನೀಡಿ ನಿರುಮ್ಮಳವಾಗಿ ಕುಳಿತುಕೊಂಡು ಬಿಡಿ. ಚಿತ್ರ ನೋಡಿ ಬಂದ ಗೆಳೆಯನ ಚೀರಾಟ, ಹಾರಾಟ ನೋಡಿ ಆನಂದಿಸಿ. ಅಂತಹ ಭಯಂಕರ ಚಿತ್ರ ಅದು.
70ರ ದಶಕದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ಕಂಡು ಬರುವ ಕಥೆಗಳನ್ನು ಮಾರಿಗೋಲ್ಡ್ ನೆನಪಿಸುತ್ತದೆ. ಇತ್ತೀಚೆಗೆ ಬಂದ ಡಾಯಿ ಅಕ್ಷರ್ ಪ್ರೇಮ್ ಕೂಡ ಇದೇ ರೀತಿಯ ಕಥೆಯ ಒಂದು ಅಂಶವನ್ನು ಹೊಂದಿತ್ತು. ಅಲ್ಲಲ್ಲ ಡಾಯಿ ಅಕ್ಷರದ ಒಂದು ಕಥಾ ಎಳೆಯನ್ನು ಮಾರಿಗೊಲ್ಡ್ ನಿರ್ದೇಶಕ ಸಾಧ್ಯಂತವಾಗಿ ಬಳಸಿಕೊಂಡಿದ್ದಾನೆ.
ಇದು ಹಾಲಿವುಡ್ ನಿರ್ದೇಶಕ ವಿಲಿಯಾರ್ಡ್ ಕೆರೊಲ್ ನಿರ್ದೇಶನದ್ದು ಎಂದು ಹೇಳುವುದನ್ನು ಬಿಟ್ಟರೆ ಯಾವುದಕ್ಕೂ ಲಾಯಕ್ಕಿಲ್ಲ. ಕೆರೊಲ್‌ಗೆ ಪ್ರೇಕ್ಷಕರನ್ನು ಯಾವ ರೀತಿ ಹಿಡಿದಿಡಬೇಕು ಎನ್ನುವ ತಂತ್ರ ಗೊತ್ತಿಲ್ಲ. ಕಳಪೆ ಸಂಗೀತ, ಹರಿದು ಚಿಲ್ಲಾಪಿಲ್ಲಿಯಾದ ಚಿತ್ರಕಥೆ,ಭಯಂಕರವಾದ ವಿಜ್ಯುವಲ್ ಎಫೆಕ್ಟ್ ಮತ್ತು ಅಮೆರಿಕ ಶೈಲಿಯ ಇಂಗ್ಲಿಷ್ ಮಾತನಾಡಲು ಪರದಾಡುವ ಸಲ್ಮಾನ್ ಖಾನ್, ಕಳೆಕಳೆಯಾಗಿ ಕಾಣುವ ಹಾಲಿವುಡ್ ಹಿನ್ನಲೆಯ ನಾಯಕಿ ಅಲಿ ಲಾರ್ಟರ್.
ಚಿತ್ರದ ನಾಯಕಿ ಅಲಿ ಲಾರ್ಟರ್ ಹೆಸರು ಈ ಚಿತ್ರದಲ್ಲಿ ಮಾರಿಗೋಲ್ಡ್ ಇದ್ದು, ಅದನ್ನೆ ಕೆರೊಲ್ ಟೈಟಲ್ ಮಾಡಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಬರುವ ಮಾರಿಗೋಲ್ಡ್ ಎನ್ನುವ ಯುವತಿ, ಲಗೆಜ್ ಇಲ್ಲದೇ ಗೋವಾಕ್ಕೆ ಬಂದಿಳಿಯುತ್ತಾಳೆ. ಅಲ್ಲಿಂದ ಅವಳ ಭಾರತದ ಜೀವನ ಪ್ರಾರಂಭ. ಬಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ದೊರೆಯುತ್ತದೆ ಅದೇ ಚಿತ್ರಕ್ಕೆ ಪ್ರೇಮ್ (ಸಲ್ಮಾನ್ ಖಾನ್) ನೃತ್ಯ ನಿರ್ದೇಶಕನಾಗಿ ಕೆಲಸ ಮಾಡುತ್ತಿರುತ್ತಾನೆ.
ಪ್ರೇಮ್ ಒಡನಾಟದಲ್ಲಿ, ಕಳೆದು ಹೋಗಿದ್ದ ಆತ್ಮ ವಿಶ್ವಾಸ ಮರುಕಳಿಸಿ ಆತನತ್ತ ಆಕರ್ಷಿತಳಾಗುತ್ತಾಳೆ. ಕಡಿಮೆ ಬಜೆಟ್ಟಿನ ಹಾಲಿವುಡ್ ಚಿತ್ರವೊಂದಕ್ಕೆ ಮಾರಿಗೋಲ್ಡ್ ಹಣಕಾಸು ನೆರವು ನೀಡಿರುತ್ತಾಳೆ. ಆದರೆ ಆ ಚಿತ್ರ ಬಿಡುಗಡೆಯಾಗದೇ ಇವಳು ದಿವಾಳಿಯಾಗಿರುತ್ತಾಳೆ. ಹೀಗಾಗಿ ಅವಳಲ್ಲಿ ಆತ್ಮ ವಿಶ್ವಾಸದ ಸೆಲ್ ಬತ್ತಿಹೋಗಿರುತ್ತದೆ.
ಸಲ್ಮಾನ್ ಖಾನ್ ಜಾನ್ವಿಯೊಂದಿಗೆ (ನಂದನಾ ಸೇನ್) ಮದುವೆ ಮಾಡಿಕೊಳ್ಳಲು ಸಿದ್ದನಾಗುತ್ತಾನೆ, ಪರಸ್ತ್ರಿಯೊಂದಿಗೆ ವಿವಾಹ ಎಂದು ತಿಳಿದ ಮಾರಿಗೋಲ್ಡ್ ಬೇಸರದಿಂದ ಮನೆ ಬಿಟ್ಟು ತೆರಳುತ್ತಾಳೆ. ಜಾನ್ವಿ, ಮಾರಿಗೋಲ್ಡ್ ಮನವೊಲಿಸಿ ಪುನಃ ಮನೆಗೆ ಕರೆತರುತ್ತಾಳೆ. ಮತ್ತು ನಿನ್ನನ್ನು ಪ್ರೇಮ್ ಪ್ರೀತಿಸಿಲ್ಲ ಮತ್ತು ಪ್ರೀತಿಸಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಹೇಳುತ್ತಾಳೆ.
ಈ ಎಲ್ಲ ಕಥೆಯ ನಡುವೆ ಇನ್ನೊಂದು ಪಾತ್ರ ಅಚಾನಕ್ಕಾಗಿ ಹುಟ್ಟಿಕೊಂಡು ಬಿಡುತ್ತದೆ ಅದೇ ಮಾರಿಗೋಲ್ಡ್ ಪ್ರಿಯಕರ ಬ್ಯಾರಿ (ಇಯಾನ್ ಬೊಹೆನ್) ಆಕಸ್ಮಿಕವಾಗಿ ಭಾರತಕ್ಕೆ ಬಂದಾಗ ತನ್ನ ಪ್ರೇಯಸಿ, ಪ್ರೇಮ್‌ನನ್ನು ಪ್ರೀತಿಸುತ್ತಿದ್ದಾಳೆ ಎಂದು ಅವನಿಗೆ ಅರಿವಾಗುತ್ತದೆ.