ಸಸ್ಪೇನ್ಸ್ ಚಿತ್ರದ ಮೂಲ ರುಚಿ ಅಡಗಿರುವುದೇ ನಿಗೂಡವಾಗಿ ಕಥಾ ಹಂದರವನ್ನು ಪ್ರೇಕ್ಷಕನ ಎದುರು ಬಿಚ್ಚಿಡುತ್ತ ಹೋಗುವುದು. ಪ್ರೇಕ್ಷಕ ಮಾಡಿದ ಪ್ರತಿಯೊಂದು ಊಹೆ ತಪ್ಪಾಗುವುವಂತೆ ಆದರೆ, ಅಚ್ಚುಕಟ್ಟಾಗಿ ಕಥೆಯ ಎಳೆ ಬಿಟ್ಟು ಹೋಗದಂತೆ ಹೇಳುತ್ತ ಹೇಳುತ್ತ ಸಡನ್ನಾಗಿ ರಹಸ್ಯವನ್ನು ಬಿಚ್ಚಿಟ್ಟರೆ, ಪ್ರೇಕ್ಷಕ ಮಹಾಶಯನ ಕೂದಲು ನಿಮೀರಿ ನಿಲ್ಲಬೇಕು ಇದು ರಹಸ್ಯ ಕಥೆಯ ಒಟ್ಟು ಸಮೀಕರಣ. ಆದರೆ "ಮನೋರಮಾ ಸಿಕ್ಸ್ ಫೀಟ್ ಅಂಡರ್" ಅದ್ಯಾವ ರೀತಿಯ ಪರಿಣಾಮವನ್ನು ನೋಡುಗನ ಮೇಲೆ ಬೀರುವುದಿಲ್ಲ. ಅಚ್ಚರಿಯ ವಿಷಯವನ್ನು ತೀರ ಸಪ್ಪೆಯಾಗಿ ಹೇಳಿದರೆ ಎನಾಗಬೇಕು ಅದು "ಮನೋರಮಾ ಸಿಕ್ಸ್ ಫೀಟ್ ಅಂಡರ್" ನೋಡಿದಾಗ ಆಗುವ ಅನುಭವ."
ಮನೋರಮಾ ಸಿಕ್ಸ್ ಫೀಟ್ ಅಂಡರ್" ಚಿತ್ರದ ಪ್ರಾರಂಭ ಅದ್ಬುತವಾಗಿದೆ ಸೌಂಡ್ ಟ್ರ್ಯಾಕ್, ವಿಡಿಯೋಗ್ರಾಫಿ ಎಲ್ಲ ಚೆಂದವಾಗಿದೆ. ಕಥೆ ಮುಂದೆ ಸಾಗಿದಂತೆ ಬೀರುಗಾಳಿಗೆ ಸಿಕ್ಕ ತರಗೆಲೆಯಂತೆ ಎಲ್ಲೆಲ್ಲೊ ಹೋಗಿಬಿಡುತ್ತದೆ. ದುರಾದೃಷ್ಟ ಅಂದರೆ ಕೊನೆಯವರೆಗೆ ಕಥೆ ಎನ್ನುವ ತರಗೆಲೆ ಪುನಃ ಸ್ವಸ್ಥಾನಕ್ಕೆ ಮರಳುವುದಿಲ್ಲ. ಹೀಗಾಗಿ ನೋಡುವವನ ತಲೆ ಕೂಡ ಬೀರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ. ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಕೈಹಾಕಿರುವ ನವದೀಪ್ ಸಿಂಗ್ ತಮ್ಮ ಲೆಕ್ಕಕ್ಕೆ ಸಿಕ್ಕ ರೀತಿಯಲ್ಲಿ ಕಥೆಗೊಂದು ಗತಿ ಕಾಣಿಸುತ್ತಾರೆ.ಎಸ್ ( ಅಭಯ ಡಿಯೊಲ್) ಸರಕಾರಿ ಇಂಜಿನಿಯರ್ ಅವನ ನಿಜವಾದ ಗುರಿ ಪತ್ತೆದಾರಿ ಕಾದಂಬರಿಗಳನ್ನು ಬರೆಯಬೇಕು ಎನ್ನುವುದು. ದುರಾದೃಷ್ಟದಿಂದ ಅವನ ಮನೊರಮಾ ಎನ್ನುವ ಮೊದಲ ಕಥೆ ಎಲ್ಲಿಯೊ ಕಳೆದು ಹೊಗುತ್ತದೆ. ಕೆಲದಿನಗಳು ಕಳೆದ ನಂತರ ಮ್ಯಾಗಜೀನ್ ಲೇಖಕನಾಗುತ್ತಾನೆ. ಒಂದು ದಿನ ಅವನಿಗೆ ಸ್ಥಳಿಯ ರಾಜಕಾರಣಿಯೊಬ್ಬನ (ಕುಲಭೂಷನ ಕರ್ಬಾಲಾ) ಹೆಂಡತಿ (ಸಾರಿಕಾ) ನಿರಾಕರಿಸಲಾರದಂತಹ ಆಹ್ವಾನ ನೀಡುತ್ತಾಳೆ. ಅವಳು ತನ್ನ ಗಂಡನ ವಿರುದ್ಧ ಪತ್ತೆದಾರಿಕೆಗೆ ಎಸ್‌ವಿಯನ್ನು ನೇಮಿಸುತ್ತಾಳೆ. ಒಂದು ದಿನ ಅವಳೂ ನಿಗೂಡವಾಗಿ ಸಾಯುತ್ತಾಳೆ (ಯಾಕೆ ಸತ್ತಳು ಅಂತ ನಿರ್ಧೇಶಕನಿಗೆ ಮಾತ್ರ ಗೊತ್ತು.) ಅವಳ ಸಾವಿನ ತನಿಖೆಯ ಹಿಂದೆ ಎಸ್ ವಿ ಬೀಳುತ್ತಾನೆ. ಎನು ಪತ್ತೆ ಮಾಡಿದ. ನಡುವೆ ಯಾವುದೋ ಒಂದು ಫೋಟೊ ಕಥೆ ಬರುತ್ತದೆ ಅದರಿಂದ ಯಾರಿಗೆ ಪ್ರಯೋಜನ ಎನ್ನುವುದು ಪ್ರೇಕ್ಷಕನಿಗೆ ಕೊನೆಯವರೆಗೆ ಮಾತ್ರ ತಿಳಿಯುವುದಿಲ್ಲ.ನವದೀಪ್ ಸಿಂಗ್ ತಾಂತ್ರಿಕತೆಯನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಅದ್ಬುತ ಚಿತ್ರೀಕರಣ, ಹಿನ್ನಲೆ ಸಂಗೀತ ಎಲ್ಲ ಸರಿಯಾಗಿದೆ ಆದರೆ ಕಥೆ ಮಾತ್ರ ಇಲ್ಲ ಅದು ಇಲ್ಲದಿದ್ದರೆ ಚಿತ್ರ ಎಂದು ಹೇಗೆ ಹೇಳುವುದು ?